ಮಾತುಕತೆಗೆಂದು ಕಚೇರಿಗೆ ಕರೆದು ರೈತ ಮುಖಂಡನ ಸಮೇತ 25 ರೈತರ ಬಂಧನ
ಅಧಿಕಾರಿಗಳು ಕೆಐಎಡಿಬಿ ಕಚೇರಿಗೆ ಮಾತುಕತೆಗೆ ಕರೆದು, ಹೋರಾಟದ ನೇತೃತ್ವ ವಹಿಸಿರುವ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹಾಗೂ ರೈತ ಸಂಘದ 25 ಮುಖಂಡರ ಬಂಧನ ಮಾಡಿದ್ದನ್ನು ವಿರೋಧಿಸಿ ಕೋಡಿಹಳ್ಳಿ ಚಂದ್ರ ಶೇಖರ್ ಬಣದ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ರೈತರು ಮಾನವ ಸರಪಳಿ ನಿರ್ಮಿಸಿ, ಬಂಧಿತರನ್ನು ಬಿಡಬೇಕೇಂದು ಆಗ್ರಹಿಸಿ, ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು.
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ ಸುಮಾರು 13 ಹಳ್ಳಿಗಳ ಜಮೀನನ್ನು ಕೆಐಎಡಿಬಿ ಭೂಸ್ವಾಧೀನವನ್ನು ಕೈ ಬಿಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧಿಕಾರಿ ಕಚೇರಿ ಮುಂದೆ 93 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.ಪ್ರತಿಭಟನೆಯ 81ನೇ ದಿನವಾದ ಜೂನ್ 6 ರಂದು ಮಾನವ ಹಕ್ಕುಗಳ ಕಮಿಟ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ.ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಸಾಮಾಜಿಕ ಕಾರ್ಯಕರ್ತರ ವೇದಿಕೆ, ಬಿಜೆಪಿ , ಜಿಲ್ಲಾ ಜೆಡಿಎಸ್ ಇನ್ನೂ ಹಲವು ಪ್ರಗತಿಪರ ಸಂಘಟನೆಗಳು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಆನಂದಗುರೂಜಿ, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ದಲಿತ ಮುಖಂಡ ಎನ್ ಮೂರ್ತಿ ನೇತೃತ್ವದಲ್ಲಿ ಮೋಟಾರ್ ಸೈಕಲ್ ಮೂಲಕ ಜಿಲ್ಲಾಡಳಿತ ಭವನದಿಂದ ಬೆಂಗಳೂರು ವಿಧಾನಸೌಧ ಮುತ್ತಿಗೆ ಹಾಕಲು ಬೈಕ್ ರ್ಯಾಲಿ ಮೂಲಕ ತೆರಳುತ್ತಿದ್ದಾಗ ಅಣಕನೂರು ಗೇಟ್ ಬಳಿ ಪೋಲಿಸರು ತಡೆದಾಗ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಜಿ.ಪ್ರಭು, ನಿಮ್ಮ ಜೊತೆ 15 ದಿನದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು, ಕೆಐಎಡಿಬಿ ಅಧಿಕಾರಿಗಳು ಮಾತುಕತೆ ನಡೆಸುವರು. ದಿನಾಂಕ ನಿಗದಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಈ ಭರವಸೆ ಹಿನ್ನೆಲೆಯಲ್ಲಿ ರೈತರು ರ್ಯಾಲಿಯಿಂದ ಹಿಂದೆ ಸರಿದ್ದರು.
ಈ ಬಂಧನಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ರೈತರು ಮಾನವ ಸರಪಳಿ ನಿರ್ಮಿಸಿ, ಸರ್ಕಾರ ಮತ್ತು ಕೆಐಎಡಿಬಿ ವಿರುದ್ಧ ಘೋಷಣೆಗಳನ್ನು ಕೂಗಿದ ಪತಿಭಟನಕಾರರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರನ್ನು ತೆರವುಗೊಳಿಸಲು ಹರ ಸಾಹಸ ಪಡಬೇಕಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ಪದಾಧಿಕಾರಿಗಳಾದ ಟಿ.ರಾಜೇಶ್, ಟಿ.ಸಿ.ನಾರಾಯಣಸ್ವಾಮಿ, ಗಿಡ್ನಹಳ್ಳಿ ನಾರಾಯಣಸ್ವಾಮಿ, ಕಿರಣ್, ಬೈರರೆಡ್ಡಿ, ಕೊಳವನಹಳ್ಳಿ ಅಶ್ವತ್, ಮತ್ತಿತರರು ಇದ್ದರು.