ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಮಾ.25 ರಂದು ಕೊಳಕೇರಿಯಲ್ಲಿ ರಸ್ತೆ ತಡೆ ಪ್ರತಿಭಟನೆ

KannadaprabhaNewsNetwork |  
Published : Feb 25, 2024, 01:47 AM IST
ಸುದ್ದಿಗೋಷ್ಠಿ | Kannada Prabha

ಸಾರಾಂಶ

ಅವ್ಯವಸ್ಥೆಯಿಂದ ಕೂಡಿರುವ ಕೋಕೇರಿ- ಕೊಳಕೇರಿ ರಸ್ತೆ ದುರಸ್ತಿಗೆ ಆಗ್ರಹಿಸಿ ಕೊಳಕೇರಿಯಲ್ಲಿ ‘ರಸ್ತೆ ತಡೆ’ ಪ್ರತಿಭಟನೆ ನಡೆಸಲಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅವ್ಯವಸ್ಥೆಯಿಂದ ಕೂಡಿರುವ ಕೋಕೇರಿ- ಕೊಳಕೇರಿ ರಸ್ತೆ ದುರಸ್ತಿಗೆ ಆಗ್ರಹಿಸಿ ಕೊಳಕೇರಿಯಲ್ಲಿ ‘ರಸ್ತೆ ತಡೆ’ ಪ್ರತಿಭಟನೆ ನಡೆಸಲಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರು, ಶಾಲಾ ಮಕ್ಕಳು, ಸಾರ್ವಜನಿಕರು, ವಾಹನಗಳ ಸಂಚಾರ ಅಸಾಧ್ಯವಾಗಿರುವ ಕೋಕೇರಿ-ಕೊಳಕೇರಿ ರಸ್ತೆ ದುರಸ್ತಿಗೆ ಆಗ್ರಹಿಸಿ ಮಾ.25 ರಂದು ಕೊಳಕೇರಿಯಲ್ಲಿ ‘ರಸ್ತೆ ತಡೆ’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದ ಅವರು ನಾಪೋಕ್ಲು ಸಂಪರ್ಕ ರಸ್ತೆಯಾಗಿರುವ ಕೋಕೇರಿ-ಕೊಳಕೇರಿ ನಡುವೆ ಇರುವ ಜಿಲ್ಲಾ ಪಂಚಾಯ್ತಿಗೆ ಒಳಪಟ್ಟ ಸುಮಾರು 6 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲೆ ಪ್ರತಿನಿತ್ಯ ಆರೇಳು ಶಾಲಾ ವಾಹನಗಳು, ವಿರಾಜಪೇಟೆ-ನಾಪೋಕ್ಲು ನಡುವೆ ಖಾಸಗಿ ಬಸ್‌ ಸಂಚರಿಸುತ್ತದೆ. ಸಂಪೂರ್ಣ ಹದಗೆಟ್ಟಿರುವ ಈ ರಸ್ತೆ ದುರಸ್ತಿಯನ್ನೇ ಕಂಡಿಲ್ಲವೆಂದು ಅಸಮಾಧಾನ ವ್ಯಕಪಡಿಸಿದರು.ರಸ್ತೆ ಅವ್ಯವಸ್ಥೆಯ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ, ಮನವಿಯನ್ನು ಸಲ್ಲಿಸಿಕೊಂಡು ಬರಲಾಗುತ್ತಿದೆ. ಆದರೆ ಚುನಾವಣಾ ಹಂತದಲ್ಲಿ ಮಾತ್ರ ರಸ್ತೆ ದುರಸ್ತಿಯ ಭರವಸೆ ನೀಡಲಾಗುತ್ತದೆ. ನಂತರ ರಸ್ತೆಯನ್ನು ಸರಿಪಡಿಸುವ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ನರಿಯಂದಡ ಗ್ರಾ.ಪಂ ಗೆ ಒಳಪಟ್ಟ ಕೋಕೇರಿ ಗ್ರಾಮದಲ್ಲಿ ಸುಮಾರು 1050 ಮತದಾರರಿದ್ದರೆ, ನಾಪೋಕ್ಲು ಗ್ರಾ.ಪಂ ಗೆ ಒಳಪಟ್ಟ ಕೊಳಕೇರಿಯಲ್ಲಿ ಸುಮಾರು 700 ಮತದಾರರಿದ್ದಾರೆ. ರಸ್ತೆ ಅವ್ಯವಸ್ಥೆಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲಿದ್ದಾರೆ ಎಂದು ತಿಳಿಸಿದರು.ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕೋಕೇರಿ ಗ್ರಾಮದ ಜನತೆಗೆ ಈ ವರೆಗೂ ನೀರೊದಗಿಸಲು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ ಗ್ರಾಮಸ್ಥರು ಕೊಕೇರಿಯಲ್ಲಿ ಸುಮಾರು ಹದಿನೈದು ವರ್ಷಗಳ ಹಿಂದೆ ಗ್ರಾಮಸ್ಥರ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತಿದ್ದ ಸಮುದಾಯ ಭವನವನ್ನು ಕಾಮಗಾರಿ ಪೂರ್ಣಕ್ಕೂ ಮೊದಲೇ ಉದ್ಘಾಟಿಸಲಾಗಿತ್ತು. ಇಂದಿಗೂ ಆ ಸಮುದಾಯ ಭವನ ಜನರ ಬಳಕೆಗೆ ಬಾರದೆ ಅರೆ ಬರೆಯಾಗಿ ನಿಂತಿದೆಯೆಂದು ವಿಷಾದ ವ್ಯಕ್ತಪಡಿಸಿದರು.ಕೊಕೇರಿ ಗ್ರಾಮದ ಚೇನಂಡ ಪಿ. ಜಗದೀಶ್ ನಂದ, ಚೇನಂಡ ಜಪ್ಪು ದೇವಯ್ಯ, ಚೇನಂಡ ಗಿರೀಶ್ ಪೂಣಚ್ಚ, ಕೊಳಕೇರಿ ಗ್ರಾಮಸ್ಥರಾದ ಮೊಹಮ್ಮದ್ ರಫೀಕ್, ಮೊಯ್ದು, ಮೊಹಮ್ಮದ್ ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...