ಶಿರಹಟ್ಟಿ: ದೇಶದ ಅಭಿವೃದ್ಧಿ ಎಂದರೆ ನಗರಗಳ ಬೆಳವಣಿಗೆ ಬದಲಾಗಿ ಗ್ರಾಮಾಭಿವೃದ್ಧಿಯಾಗಬೇಕು. ಗ್ರಾಮಾಭಿವೃದ್ಧಿಗೆ ಸಂಪರ್ಕ ರಸ್ತೆಗಳ ಸುಧಾರಣೆ ಮಾಡಲು ಬದ್ಧವಾಗಿರುವುದಾಗಿ ಶಾಸಕ ಡಾ. ಚಂದ್ರು ಲಮಾಣಿ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ರೂರಲ್ ಇನ್‌ಪ್ರಾಸ್ಟಕರಚರ್ ಡೆವಲಪ್‌ಮೆಂಟ್ ಕಂಪನಿಯಿಂದ ತಾಲೂಕಿನ ತೆಗ್ಗಿನಭಾವನೂರ, ಕುಸ್ಲಾಪುರ, ವರವಿ ಗ್ರಾಮಗಳಲ್ಲಿ ಕೈಗೆತ್ತಿಕೊಂಡಿರುವ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ತಾಲೂಕಿನಲ್ಲಿ ಬಹಳಷ್ಟು ಗ್ರಾಮೀಣ ರಸ್ತೆಗಳು ಹದಗೆಟ್ಟಿವೆ. ಈಗಾಗಲೇ ಆದ್ಯತೆಯ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲ ಹಂತದಲ್ಲಿಯೂ ಗುಣಮಟ್ಟ ಕಾಯ್ದುಕೊಂಡು ಗುಣಮಟ್ಟದಲ್ಲಿ ಸಿಸಿ ರಸ್ತೆ ಕಾಮಗಾರಿ ಮಾಡಬೇಕು. ರಾಜ್ಯದಲ್ಲಿ ಗ್ರಾಮೀಣ ಪ್ರದೇಶ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಿಂದಿನ ಬಿಜೆಪಿ ಸರ್ಕಾರ ಹೆಚ್ಚು ಆದ್ಯತೆ ನೀಡಿತ್ತು. ರೈತರು, ಬಡವರು, ದಲಿತರು, ವಿದ್ಯಾರ್ಥಿಗಳ ಕಲ್ಯಾಣಕ್ಕೆ ಹೆಚ್ಚು ಸಾಕಷ್ಟು ಯೋಜನೆ ಅನುಷ್ಠಾನಗೊಳಿಸುವ ಜತೆಗೆ ವೇಗದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿತ್ತು ಎಂದರು.ಗ್ರಾಮೀಣ ಪ್ರದೇಶದ ಜನರಿಗಾಗಿ ಶುದ್ಧ ಕುಡಿಯುವ ನೀರು, ಸಾರಿಗೆ, ಶಿಕ್ಷಣ, ಶೌಚಾಲಯ ನಿರ್ಮಾಣದ ಜತೆಗೆ ಆರೋಗ್ಯ ಸೌಲಭ್ಯ ಒದಗಿಸುವುದಕ್ಕಾಗಿ ಕ್ರಮಕೈಗೊಳ್ಳಲಾಗುತ್ತಿದೆ. ನಿತ್ಯದ ಬದುಕಿಗೆ ಅಗತ್ಯವಾಗಿರುವ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಲಾಗಿತ್ತು. ಅಭಿವೃದ್ಧಿ ವಿಷಯದಲ್ಲಿ ಯಾರು ರಾಜಕೀಯ ಮಾಡದೇ ಎಲ್ಲರೂ ಪಕ್ಷಾತೀತವಾಗಿ ಒಕ್ಕಟ್ಟಿನಿಂದ ಕೆಲಸ ಮಾಡಬೇಕು. ಅಭಿವೃದ್ಧಿಗಾಗಿ ಅನುದಾನದ ಕೊರತೆ ಇದೆ. ಹಾಗಂತ ಎಲ್ಲವೂ ಕುಂಟಿತವಾಗುವುದಿಲ್ಲ. ಆದ್ಯತೆಗೆ ಅನುಗುಣವಾಗಿ ಕೆಲಸಗಳು ನಡೆಯುತ್ತಿವೆ. ಜನಸಾಮಾನ್ಯರ ಬದುಕನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ನಿತ್ಯದ ಬದುಕಿಗೆ ಅಗತ್ಯವಾಗಿರುವ ಎಲ್ಲ ಸೌಲಭ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಸರ್ಕಾರ ಅನುದಾನ ಬಿಡುಗಡೆ ಮಾಡಿದ ಮೇಲೆಯೇ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಬರೀ ಕಾಟಾಚಾರಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿಲ್ಲ. ವಿರೋಧ ಪಕ್ಷದವರು ಏನೇ ಟೀಕಿಸಿದರು ಅವರಿಗೆ ನಾನು ಉತ್ತರ ನೀಡುವುದಿಲ್ಲ. ತಾಲೂಕಿನಲ್ಲಿ ಆದ್ಯತೆಯ ಮೇರೆಗೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳೇ ಅವರಿಗೆ ಉತ್ತರ ನೀಡುತ್ತವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದವರನ್ನು ಟೀಕಿಸಿದರು.ಕ್ಷೇತ್ರದ ಕಡೆಗಣನೆ:
ಕಳೆದ ೨ ವರ್ಷಗಳ ಅವಧಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರಿರುವ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡದೆ ಕಡೆಗಣಿಸುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದ್ದು, ಈ ತಾರತಮ್ಯ ನೀತಿ ನಮ್ಮ ಪಕ್ಷದ ರಾಜ್ಯ ನಾಯಕರ ಗಮನಕ್ಕೂ ಬಂದಿದೆ. ಉಚಿತ ಯೋಜನೆಗಳ ಜಾರಿಯಿಂದ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ. ನಮ್ಮ ಮೀಸಲು ಕ್ಷೇತ್ರದ ಅಭಿವೃದ್ಧಿ ಕುಂಟಿತವಾಗಿದೆ ಎಂದು ಅಸಮಾಧಾನ ಹೊರಹಾಕಿದರು.ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಅದೇ ಪಕ್ಷದ ಶಾಸಕರು ಎಷ್ಟೋ ಬಾರಿ ಅಸಮಾದಾನ ಹೊರಹಾಕಿದ್ದಾರೆ.ನಮ್ಮ ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ.ಸಂಬಂದಿಸಿದ ಖಾತೆ ಸಚಿವರ ಗಮನಕ್ಕೆ ತರಲಾಗಿದೆ.ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಸಮಗ್ರ ಅಭಿವೃದ್ಧಿಗೆ ಮುಂದಾಗುವುದಾಗಿ ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಜಾನು ಲಮಾಣಿ, ಶಂಕರ ಮರಾಠೆ, ತಿಪ್ಪಣ್ಣ ಕೊಂಚಿಗೇರಿ, ಮಲಕಾಜಪ್ಪ ಅಂಗಡಿ, ಪ್ರವೀಣಗೌಡ ಪಾಟೀಲ, ವಿಜಯಗೌಡ ಪಾಟೀಲ, ಪರಸನಗೌಡ ಪಾಟೀಲ, ಶಾಂತಪ್ಪ ಮುರಗಿ, ವೆಂಕನಗೌಡ ಪಾಟೀಲ, ಸೋಮು ಚವ್ಹಾಣ, ಅನಿಲ ಚೌರಡ್ಡಿ ಸೇರಿ ಇತರರು ಇದ್ದರು.