ಹೂವಿನಹಡಗಲಿ: ಪಟ್ಟಣದ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಪುಟ್‌ಪಾತ್‌ನ ಮೇಲೆ ಗೂಡಂಗಡಿಗಳನ್ನು ಇಟ್ಟು ಅಕ್ರಮವಾಗಿ ಬಾಡಿಗೆ ವಸೂಲಿ ಮಾಡುತ್ತಿರುವ ದಂಧೆಗೆ ಶೀಘ್ರದಲ್ಲೇ ಬ್ರೇಕ್ ಬೀಳಲಿದೆ.
ಪಟ್ಟಣದ ಬಸ್ ನಿಲ್ದಾಣ, ಹಳೆ ಆಸ್ಪತ್ರೆ ಇಕ್ಕೆಲಗಳ ಜಾಗ, ಹಳೆ ತಾಲೂಕು ಕಚೇರಿ ಮುಂಭಾಗ, ಬೈಪಾಸ್ ರಸ್ತೆಯ ಪುಟ್‌ಪಾತ್‌ಗಳನ್ನು ಶಾಶ್ವತ ಶೆಡ್‌ಗಳನ್ನು ನಿರ್ಮಾಣ ಮಾಡಿ, ಅದಕ್ಕೆ ಅಕ್ರಮವಾಗಿಯೇ ವಿದ್ಯುತ್ ಸಂಪರ್ಕ ಪಡೆದು ಮನಸ್ಸಿಗೆ ಬಂದಂತೆ ನೆಲ ಬಾಡಿಗೆ ಮತ್ತು ಶೆಡ್‌ಗಳ ಬಾಡಿಗೆ ವಸೂಲಿ ಮಾಡುವ ದಂಧೆ ಜೋರಾಗಿತ್ತು. ಈ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ವಿಶೇಷ ವರದಿಗಳನ್ನು ಪ್ರಕಟಿಸಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಜತೆಗೆ ಪುರಸಭೆ ಅಧಿಕಾರಿಗಳ ಗಮನ ಸೆಳೆದಿತ್ತು.
ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಪುಟ್‌ಪಾತ್ ವೀಕ್ಷಣೆಯ ವೇಳೆ ಸಾಕಷ್ಟು ಟ್ರಾಫಿಕ್ ಜಾಮ್, ರಸ್ತೆಯಲ್ಲೇ ಜನರ ಓಡಾಟ, ಪಾದಚಾರಿ ರಸ್ತೆಯ ಮೇಲೆ ಹಣ್ಣು, ಹೂವಿನ ಅಂಗಡಿಗಳು, ಸರ್ಕಲ್ ಸುತ್ತವರಿದ ವ್ಯಾಪಾರಿಗಳು, ಸಿಕ್ಕ ಸಿಕ್ಕ ಕಡೆಗಳಲ್ಲಿ ಸಂಚಾರಿ ಹೋಟಲ್‌ಗಳ ಹಾವಳಿ, ರಸ್ತೆಯುದ್ದಕ್ಕೂ ಶಾಶ್ವತ ಶೆಡ್‌ಗಳ ನಿರ್ಮಾಣದ ವ್ಯವಸ್ಥೆ ಕಂಡು ತಾಲೂಕು ಆಡಳಿತ ಹಾಗೂ ಪುರಸಭೆ ಸಹಯೋಗದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಭೆ ಮಾಡಿ 10 ದಿನದೊಳಗೆ ತೆರವು ಮಾಡಬೇಕೆಂಬ ಜಿಲ್ಲಾಧಿಕಾರಿ ಸೂಚಿಸಿದ್ದರು. ಇದರ ಮೇರೆಗೆ ಅತಿಕ್ರಮಣವಾಗಿರುವ ಪಾದಚಾರಿ ರಸ್ತೆ ತೆರವಿಗೆ ಅಧಿಕಾರಿಗಳ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ನಾಗರಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.ಪ್ರತಿ ಬಾರಿ ಪುಟ್‌ಪಾತ್ ತೆರವಿಗೆ ಪುರಸಭೆ ಮುಂದಾದ ಸಂದರ್ಭದಲ್ಲಿ ಪ್ರತಿರೋಧ ವ್ಯಕ್ತಪಡಿಸುತ್ತಿದ್ದ ಬೀದಿಬದಿ ವ್ಯಾಪಾರಿಗಳು, ಈಗ ಅವರಿಗೆ ವ್ಯಾಪಾರ ಮಾಡಿಕೊಳ್ಳಲು ಸೂಕ್ತ ಜಾಗ ಗುರುತಿಸಿದ್ದಾರೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಕಂದಾಯ ಇಲಾಖೆಯ ಹಳೆ ಕಟ್ಟಡವನ್ನು ನೆಲಸಮ ಮಾಡಲು ಜಿಲ್ಲಾಡಳಿತ ಉದ್ದೇಶಿಸಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ನೂರಾರು ವರ್ಷಗಳ ಇತಿಹಾಸವನ್ನು ತನ್ನೊಳಗೆ ಇಟ್ಟುಕೊಂಡು ನಿಂತಿರುವ ಈ ಹಳೆ ಕಟ್ಟಡವನ್ನು ನೆಲಸಮ ಮಾಡದೇ ಇದನ್ನು ನವೀಕರಣ ಮಾಡಿದರೆ ಹತ್ತಾರು ಇಲಾಖೆಗಳಿಗೆ ಕೊಠಡಿಗಳ ವ್ಯವಸ್ಥೆ ಮಾಡಬಹುದು. ಈಗಲೂ ಸಾಕಷ್ಟು ಇಲಾಖೆಗಳು ಕಟ್ಟಡ ಇಲ್ಲದೇ ಬಾಡಿಗೆ ಕೊಠಡಿಗಳಲ್ಲಿ ಕೆಲಸ ಮಾಡುತ್ತಿವೆ.ಬ್ರಿಟಿಷರ ಕಾಲದ ಹಳೆ ಕಟ್ಟಡವನ್ನು ನೆಲಸಮ ಮಾಡದೇ ನವೀಕರಣ ಮಾಡಬೇಕು. ಕಟ್ಟಡದ ಪಕ್ಕದಲ್ಲೇ ಗ್ರಂಥಾಲಯದಲ್ಲಿ ನಿತ್ಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅಭ್ಯಾಸ ಮಾಡುತ್ತಿದ್ದಾರೆ. ಈ ಹಳೆ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಓದಲು ವ್ಯವಸ್ಥೆ ಮಾಡಿದರೆ ತುಂಬ ಅನುಕೂಲವಾಗಲಿದೆ. ಇದೊಂದು ಪಟ್ಟಣದ ಪಾರಂಪರಿಕ ಕಟ್ಟಡದ ಪಾವಿತ್ಯತ್ರೆ ಉಳಿಸಬೇಕಿದೆ ಎನ್ನುತ್ತಾರೆ ಹೂವಿನಹಡಗಲಿ ಪ್ರಾಧ್ಯಾಪಕ ಎಸ್.ಎಸ್.ಪಾಟೀಲ್.