ಹರಪನಹಳ್ಳಿ: ಯುವಕರಲ್ಲಿ ಸೇವಾ ಮನೋಭಾವ, ದೇಶಾಭಿಮಾನ ಮೂಡಿಸುವಲ್ಲಿ ಎನ್ಎಸ್ಎಸ್ ಪ್ರಮುಖ ಪಾತ್ರ ವಹಿಸಿದೆ ಎಂದು ರಾಜ್ಯ ಬಸವ ಚೇತನ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಎಚ್.ಶಿವಾನಂದ ಹೇಳಿದರು.
ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಕೃಷಿ, ಕೈಗಾರಿಕೆ, ವೈದ್ಯಕೀಯ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಯುವಕರು ದೇಶದ ಪ್ರಗತಿಗೆ ದೊಡ್ಡ ಕೊಡುಗೆ ನೀಡಬೇಕು. ಪ್ರಸ್ತುತ ಸಮಾಜದಲ್ಲಿ ನಿರುದ್ಯೋಗ, ಪರಿಸರ ಮಾಲಿನ್ಯ, ಅಸಮಾನತೆ, ಮುಂತಾದ ಸವಾಲುಗಳು ನಮ್ಮ ಮುಂದೆ ಇವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಯುವಕರು ಜ್ಞಾನ, ಶಿಸ್ತು ಮತ್ತು ಸೇವಾಭಾವದಿಂದ ಮುಂದೆ ಬರಬೇಕು ಎಂದು ಹೇಳಿದರು.
ಯುವಕರು ಕೇವಲ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಸುವವರಾಗಬೇಕು. ಸ್ವ-ಉದ್ಯಮ, ಹೊಸ ಆಲೋಚನೆಗಳು ಮತ್ತು ಆತ್ಮವಿಶ್ವಾಸದ ಮೂಲಕ ರಾಷ್ಟ್ರದ ಬೆಳವಣಿಗೆಗೆ ಸಹಕಾರ ನೀಡಬೇಕು. ಜ್ಞಾನದ ಜೊತೆಗೆ ಮೌಲ್ಯಗಳನ್ನೂ ಹೊಂದಬೇಕೆಂದು ಯುವಕರಿಗೆ ಸಲಹೆ ನೀಡಿದರು.ಹೂವಿನಹಡಗಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಭೀಮಪ್ಪ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲೇ ಉಳಿತಾಯದ ಮಹತ್ವವನ್ನು ಕಲಿಯಬೇಕು. ಚಿಕ್ಕ ಮೊತ್ತವಾದರೂ ನಿಯಮಿತವಾಗಿ ಉಳಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಯುವಕರು ದುಂದುವೆಚ್ಚ ತಪ್ಪಿಸಿ, ಶ್ರಮದ ಮೌಲ್ಯವನ್ನು ಅರಿತು ಉಳಿತಾಯ ಮಾಡಿದರೆ ಭವಿಷ್ಯದಲ್ಲಿ ಸ್ಥಿರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಪ್ರಾಚಾರ್ಯ ಡಾ.ಮುತ್ತೇಶ. ಎನ್ಎನ್ ಎಸ್ ಅಧಿಕಾರಿ ಮಂಜುನಾಥ ಮಾಳ್ಗಿ, ಉಪನ್ಯಾಸಕ ಕೊಟ್ರಗೌಡ ಕೆ, ಸಹಾಯಕ ಪ್ರಾಧ್ಯಾಪಕ ಡಾ.ಹರಾಳು ಬುಳ್ಳಪ್ಪ, ಹೆಚ್.ಗುರುಬಸವರಾಜ, ಎ.ಗೀತಾ, ಭವಾನಿ, ನವೀನ್ ಕುಮಾರ್ ಮುಖಂಡರಾದ ನವೀನ, ವಾಸಿಮ, ವೀರಣ್ಣ ಸೇರಿದಂತೆ ಶಿಬಿರರ‍್ಥಿಗಳು ಉಪಸ್ಥಿತರಿದ್ದರು.