ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕ್ಯಾತನಹಳ್ಳಿ ಹೊರವಲಯದ ಒಂಟಿಮನೆಗೆ ದರೋಡೆ ಕೋರ ನುಗ್ಗಿ ಮರ ಕತ್ತರಿಸುವ ಯಂತ್ರದಿಂದ ಹತ್ಯೆಗೈದಿದ್ದ ಮೃತ ರಮೇಶ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭೇಟಿಕೊಟ್ಟು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ 50 ಸಾವಿರ ರು. ಪರಿಹಾರ ನೀಡಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಜತೆಗೂಡಿ ಮನೆಗೆ ಭೇಟಿಕೊಟ್ಟ ಸಚಿವರು, ಮೃತ ರಮೇಶ್ ಅವರ ಪತ್ನಿ ಯಶೋಧಮ್ಮ ಹಾಗೂ ಕುಟುಂಬಸ್ಥರೊಂದಿಗೆ ಚರ್ಚಿಸಿ ಘಟನೆ ವಿವರ ಪಡೆದರು. ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ ಪರಿಹಾರ ನೀಡಿದರು. ಅಲ್ಲದೇ, ಸರ್ಕಾರದಿಂದಲೂ ಸಾಧ್ಯವಾದರೆ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.
ಬಳಿಕ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಕ್ಯಾತನಹಳ್ಳಿಯಲ್ಲಿ ಒಂಟಿ ಮನೆ ದರೋಡೆ, ಹತ್ಯೆ ಘಟನೆಯಿಂದ ಸಾಕಷ್ಟು ನೋವುಂಟಾಯಿತು. ಇಂತಹ ಘಟನೆಗಳು ಮುಂದೆ ಮರುಕಳಿಸದಂತೆ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಂಡಿದ್ದೇವೆ ಎಂದರು.ಜಿಲ್ಲಾದ್ಯಂತ ಪೊಲೀಸ್ ಗಸ್ತು ಹೆಚ್ಚಿಸಲು ಸೂಚನೆ ನೀಡಲಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆದರೆ, ಒಂಟಿ ಮನೆಗಳಲ್ಲಿ ಇರುವಂತಹವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಅಪರಿಚಿತ ವ್ಯಕ್ತಿಗಳ ಬಂದಾಗ ಜಾಗೃತೆಯಿಂದ ಇರಬೇಕು ಅನುಮಾನ ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಬೇಕು ಎಂದರು.
ಈ ವೇಳೆ ಶಾಸಕ ದರ್ಶನ್‌ಪುಟ್ಟಣ್ಣಯ್ಯ, ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಎಚ್.ತ್ಯಾಗರಾಜು, ಮನ್ಮುಲ್ ಅಧ್ಯಕ್ಷ ಬೋರೇಗೌಡ, ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಬಿ.ಜೆ.ಸ್ವಾಮಿ ಸೇರಿದಂತೆ ಮುಖಂಡರು ಹಾಜರಿದ್ದರು.ಡಾ.ಸ್ವರೂಪ್ ಸತ್ಯಗೆ ಪಿಎಚ್.ಡಿ ಪದವಿ
ಕೆ.ಎಂ.ದೊಡ್ಡಿ:ಜಿ.ಮಾದೇಗೌಡ ಬಡಾವಣೆಯ ಡಾ.ಸ್ವರೂಪ ಸತ್ಯ ಅವರು ಬೆಂಗಳೂರಿನ ಎಂ.ಎಸ್.ರಾಮಯ್ಯ ವಿವಿ 9ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಡಾ.ಪಿ.ಪರಶುರಾಮ್ ಮಾರ್ಗದರ್ಶನದಲ್ಲಿ ಫಾರ್ಮಸುಟಿಕಲ್ ಕೆಮಿಸ್ಟ್ರಿ ವಿಭಾಗದಲ್ಲಿ ಸಂಶೋಧನೆ ನಡೆಸಿದ ಡಾ.ಸ್ವರೂಪ ಸತ್ಯ ಅವರು, ಆಲ್ಝೈಮರ್ ಕಾಯಿಲೆಗೆ ಚಿಕಿತ್ಸೆ ನೀಡಲು ಅಸೆಟೈಲ್ ಕೋಲಿನೆಸ್ಟರೇಸ್ ಕಿಣ್ವದ ಸಂಭಾವ್ಯ ಪ್ರತಿರೋಧಕಗಳ ಗುರುತಿಸುವಿಕೆ- ಕಂಪ್ಯೂಟೇಶನಲ್ ಮತ್ತು ಪ್ರಾಯೋಗಿಕ ವಿಧಾನ ಕುರಿತ ಮಹತ್ವದ ಅಧ್ಯಯನ ಮಾಡಿದ್ದು ಪಿಎಚ್.ಡಿ ಲಭಿಸಿದ್ದು ಪ್ರಸ್ತುತ ಭಾರತೀ ಔಷಧ ವಿಜ್ಞಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತಿದ್ದಾರೆ.ಡಾ.ಸ್ವರೂಪಸತ್ಯರ ಸಾಧನೆಗೆ ಪತಿ ಜಿ.ಸಿ.ಸತ್ಯ, ತಾಯಿ ಪುಟ್ಟತಾಯಮ್ಮ, ತಂದೆ ಮರೀದೇವೇಗೌಡ, ಸಾವಿತ್ರಮ್ಮ ಚಿಕ್ಕಣ್ಣ, ಕುಟುಂಬದ ಸದಸ್ಯರು, ಭಾರತೀ ಔಷಧ ವಿಜ್ಞಾನ ಕಾಲೇಜಿನ ಸಿಬ್ಬಂದಿ ವರ್ಗ, ಸ್ನೇಹಿತರು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.