ಸ್ಪೇನ್‌ನಲ್ಲಿ ಕುಳಿತು 12 ಸಾವಿರ ಕಿ.ಮೀ. ದೂರದಲ್ಲಿನ ಸತ್ಯ ಸಾಯಿ ಗ್ರಾಮದಲ್ಲಿ ಕೋಲಾರದ ಮಹಿಳೆಗೆ ಉಚಿತ ಆಪರೇಷನ್
ಸ್ಪೇನ್‌ನ ಬಾರ್ಸಿಲೋನಾದಲ್ಲಿ ಕುಳಿತು ವೈದ್ಯರೊಬ್ಬರು 12 ಸಾವಿರ ಕಿ.ಮೀ.ಗೂ ಹೆಚ್ಚು ದೂರದಲ್ಲಿರುವ ಕರ್ನಾಟಕದ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಎಸ್ಎಂಎಸ್ಐಎಂಎಸ್ ಆರ್) ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ಭಾರತೀಯ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸಾ ಕ್ಷೇತ್ರದ ಪ್ರಮುಖ ವೈದ್ಯರಾದ ಡಾ. ಸುಧೀರ್ ಶ್ರೀವಾಸ್ತವ ಅವರು ಬಾರ್ಸಿಲೋನಾದಲ್ಲಿ ನಡೆದ ಯುರೋಪಿಯನ್ ಅಸೋಸಿಯೇಷನ್ ಫಾರ್ ಕಾರ್ಡಿಯೋ-ಥೊರಾಸಿಕ್ ಸರ್ಜರಿ (ಇಎಸಿಟಿಎಸ್) ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾಗಲೇ ದೂರದಿಂದಲೇ ರೋಬೋಟ್ ನಿಯಂತ್ರಿಸಿ ಶಸ್ತ್ರಚಿಕಿತ್ಸೆ ನಡೆಸಿದರು.
ಕೋಲಾರ ಜಿಲ್ಲೆಯ 26 ವರ್ಷದ ಮಹಿಳೆ ಹೃದಯದ ಮೇಲಿನ ಎರಡು ಕವಾಟಗಳ ನಡುವೆ ಜನ್ಮತಃ ರಂಧ್ರವಿರುವ ಸಮಸ್ಯೆಯಿಂದ ಬಳಲುತ್ತಿದ್ದರು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಆಟ್ರಿಯಲ್ ಸೆಪ್ಟಲ್ ಡಿಫೆಕ್ಟ್ (ಎಎಸ್ ಡಿ) ಎಂದು ಕರೆಯಲಾಗುತ್ತದೆ. ಈ ಸಮಸ್ಯೆಗೆ ರೋಬೋಟಿಕ್ ತಂತ್ರಜ್ಞಾನದ ನೆರವಿನಿಂದ ಚಿಕಿತ್ಸೆ ನೀಡಲಾಯಿತು.ಬಾರ್ಸಿಲೋನಾದಲ್ಲಿ ಅಳವಡಿಸಲಾಗಿದ್ದ ರೋಬೋಟಿಕ್ ಶಸ್ತ್ರಚಿಕಿತ್ಸಾ ಕನ್ಸೋಲ್ ಮೂಲಕ ಡಾ. ಸುಧೀರ್ ಶ್ರೀವಾಸ್ತವ ಅವರು ಮುದ್ದೇನಹಳ್ಳಿಯ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿದ್ದ ‘ಎಸ್‌ಎಸ್‌ಐ ಮಂತ್ರ’ ರೋಬೋಟಿಕ್ ವ್ಯವಸ್ಥೆಯನ್ನು ನಿಯಂತ್ರಿಸಿದರು. ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಯಿತು.
ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಸುಮಾರು ಆರು ಗಂಟೆಗಳ ನಂತರ ಉಸಿರಾಟಕ್ಕೆ ಅಳವಡಿಸಿದ್ದ ಟ್ಯೂಬ್ ಅನ್ನು ತೆಗೆದುಹಾಕಲಾಯಿತು ಎಂದು ಆಸ್ಪತ್ರೆ ತಿಳಿಸಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಮೂರು ಸಣ್ಣ ಛೇದನಗಳನ್ನು ಮಾಡಲಾಗಿದ್ದು, ಪ್ರತಿಯೊಂದೂ ಐದು ಮಿಲಿ ಮೀಟರ್‌ಗಿಂತ ಕಡಿಮೆ ಗಾತ್ರದ್ದಾಗಿತ್ತು. ರಕ್ತಸ್ರಾವ ಮತ್ತು ಶಸ್ತ್ರಚಿಕಿತ್ಸೆಯ ನಂತರದ ನೋವು ಕಡಿಮೆಯಾಗಿತ್ತು ಎಂದು ಸಂಸ್ಥೆ ಹೇಳಿದೆ.
ಈ ಹಿಂದೆ ಮುದ್ದೇನಹಳ್ಳಿಯ ಇದೇ ಆಸ್ಪತ್ರೆಯಲ್ಲಿ ಗುರುಗ್ರಾಮ್‌ನಿಂದ ರೋಬೋಟಿಕ್ ವ್ಯವಸ್ಥೆಯನ್ನು ನಿಯಂತ್ರಿಸಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಸ್ಪೇನ್‌ನ ಬಾರ್ಸಿಲೋನಾದಿಂದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಈ ತಂತ್ರಜ್ಞಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸುವ ಸಾಧ್ಯತೆಯನ್ನು ತೋರಿಸಲಾಗಿದೆ.
ಬಡ ಮಹಿಳೆಗೆ ಉಚಿತ ಚಿಕಿತ್ಸೆ:
ಸಿಕೆಬಿ-1 ಸತ್ಯಸಾಯಿ ಗ್ರಾಮದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಹಿಳೆಯೊಬ್ಬರಿಗೆ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು.