ಹೊಸಪೇಟೆ: ಕೇಂದ್ರ ಸರ್ಕಾರ ನ್ಯಾ. ರೋಹಿಣಿ ಆಯೋಗದ ಶಿಫಾರಸುಗಳ ಅನ್ವಯ ಹಿಂದುಳಿದ ಜಾತಿಗಳ ಮೀಸಲಾತಿ ವರ್ಗೀಕರಣಗೊಳಿಸಬೇಕು ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಮನವಿ ರವಾನಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ, ಬಿ.ಪಿ. ಮಂಡಲ ಆಯೋಗದ ಶಿಫಾರಸು ಹಾಗೂ ಸುಪ್ರೀಂಕೋರ್ಟ್ ತೀರ್ಪಿನಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ. 27 ಉದ್ಯೋಗ ಮೀಸಲಾತಿ ಕಾಯ್ದೆ 1992ರಿಂದ ಜಾರಿಗೆ ಬಂದಿದೆ. ಆದರೆ ದೇಶಾದ್ಯಂತ ಎಲ್ಲ ಹಿಂದುಳಿದ ಜಾತಿಗಳನ್ನು ಒಂದೇ ಗುಂಪಿನಲ್ಲಿ ಸೇರಿಸಿರುವುದರಿಂದ ಕೆಲ ಬಲಿಷ್ಠ ಜಾತಿಗಳಿಗೆ ಮಾತ್ರ ಸಿಂಹಪಾಲು ದೊರಕಿದ್ದು, ಅತಿ ಹಿಂದುಳಿದ, ಸಣ್ಣಪುಟ್ಟ ಜಾತಿಗಳಿಗೆ ಉದ್ಯೋಗ ಮೀಸಲಾತಿ ಮರಿಚಿಕೆಯಾಗಿಯೇ ಉಳಿದಿದೆ. ಈ ಅಸಮಾನತೆಯನ್ನು ನಿವಾರಿಸುವ ನಿಟ್ಟಿನಲ್ಲಿ 2017ರಲ್ಲಿ ಕೇಂದ್ರ ಸರ್ಕಾರ ನ್ಯಾಯಮೂರ್ತಿ ರೋಹಿಣಿ ಆಯೋಗವನ್ನು ರಚಿಸಿದ್ದು ಈ ಆಯೋಗವು ದೇಶಾದ್ಯಂತ ಸಂಚರಿಸಿ ವರದಿ ಸಲ್ಲಿಸಿದೆ ಎಂದರು.ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕರ್ನಾಟಕದಲ್ಲಿರುವಂತೆ ಹಿಂದುಳಿದ ಮತ್ತು ಅತಿ ಹಿಂದುಳಿದ ಜಾತಿಗಳೆಂದು ವರ್ಗೀಕರಿಸಿ ವಿವಿಧ ಗುಂಪುಗಳಿಗೆ ಮೀಸಲಾತಿ ಪ್ರಮಾಣ ನಿಗದಿಪಡಿಸಿ ಆಗಸ್ಟ್ ೨೦೨೩ರಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಆಯೋಗ ವೈಜ್ಞಾನಿಕವಾಗಿ ಜಾತಿಗಳ ವರ್ಗೀಕರಣ ಮಾಡಿದ್ದು, ಈ ಶಿಫಾರಸು ಜಾರಿಗೊಳಿಸಿದರೆ ನೈಜ ಹಾಗೂ ಸಾಮಾಜಿಕ ಶೈಕ್ಷಣಿಕವಾಗಿ ಅತಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸೌಲಭ್ಯ ದೊರೆತು ಸಂವಿಧಾನದ ಮೂಲ ಉದ್ದೇಶ ಈಡೇರಿದಂತಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ವಿಳಂಬ ಮಾಡದೆ ನ್ಯಾಯಮೂರ್ತಿ ರೋಹಿಣಿ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಯು. ಆಂಜನೇಯಲು ಮಾತನಾಡಿ, ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಶೇ. 27ರಷ್ಟು ಮೀಸಲಾತಿ ಕಾನೂನು ಜಾರಿಗೊಳಿಸಿ ಮೂರು ದಶಕಗಳಾದರೂ ಈ ವರ್ಗಗಳಿಗೆ ದೊರೆತಿರುವ ಮೀಸಲಾತಿ ಪ್ರಮಾಣ ಶೇ. 15ರಷ್ಟು ಮಾತ್ರ ಎಂದು ಕೇಂದ್ರ ಸರ್ಕಾರವೇ ತಿಳಿಸಿದೆ. ಆದ್ದರಿಂದ ಒಬಿಸಿ ಸಮುದಾಯದಕ್ಕೆ ನಿಗದಿಪಡಿಸಿದ ಉದ್ಯೋಗ ಮೀಸಲಾತಿ ಪ್ರಮಾಣ ದೊರೆಯುವ ನಿಟ್ಟಿನಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಒಬಿಸಿ ಅಭ್ಯರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಅರ್ಜಿ ಶುಲ್ಕ ಹಾಗೂ ಪ್ರವೇಶ ಶುಲ್ಕವನ್ನು ಮನ್ನಾ ಮಾಡುವಂತೆ ಒತ್ತಾಯಿಸಿದರು.
ಒಕ್ಕೂಟದ ಪದಾಧಿಕಾರಿಗಳಾದ ರವಿಕುಮಾರ್, ಈ. ಕುಮಾರಸ್ವಾಮಿ, ಯರ‍್ರಿಸ್ವಾಮಿ, ಕೆ.ರಾಘವೇಂದ್ರ, ಎಂ.ಶಂಕ್ರಪ್ಪ, ಎ.ಪಂಪಣ್ಣ, ಉಮಾಮಹೇಶ್ವರ್. ಎಂ.ಕೆ. ಲಕ್ಷ್ಮಣ, ರಾಮಕೃಷ್ಣ, ಗೋಪಿನಾಥ, ಈ.ರಾಘವೇಂದ್ರ, ಎಚ್.ತಿಪ್ಪೇಸ್ವಾಮಿ, ಮೊಹಮ್ಮದ್ ಬಾಷಾ, ನಾಗೇಂದ್ರ ಚಿತ್ರಗಾರ್, ಯು.ಅಶ್ವತ್ಥಪ್ಪ, ಮಲ್ಲಿಕಾರ್ಜುನ, ಎಂ.ದಾನೇಶ್, ಕೆ.ವಿ.ರಾಮಲಿ, ಎಂ.ನಾಗಲಿಂಗಪ್ಪ, ಎಚ್.ದುರುಗಪ್ಪ ಮತ್ತಿತರರಿದ್ದರು.