ಕನ್ನಡಪ್ರಭ ವಾರ್ತೆ ಕುಕನೂರು
ಪ್ರಸಕ್ತ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈಗಾಗಲೇ ಹೆಸರು ಬಿತ್ತನೆ ಮಾಡಿದ ರೈತರಿಗೆ ವರವಾಗಿ ರೋಹಿಣಿ ಮಳೆ ಗುರುವಾರ ಸುರಿಯಿತು.ತಾಲೂಕಿನ ಕುಕನೂರು, ತಳಕಲ್, ಭಾನಾಪುರ, ಬೆಣಕಲ್ ಹಾಗೂ ವೀರಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ಯಾವುದೇ ಗಾಳಿ, ಸಿಡಿಲಿಗೆ ಅನಾಹುತಗಳು ಸಂಭವಿಸಿಲ್ಲ. ಅಲ್ಲದೇ ಕೆರೆ, ಹಳ್ಳಗಳು ತುಂಬಿ ಹರಿದವು. ಕಳೆದ ನಾಲ್ಕು ವರ್ಷಗಳಿಂದಲೂ ರೋಹಿಣಿ ಮಳೆ ಕಾಣದ ರೈತರು ಈ ಬಾರಿ ಸುರಿಯುತ್ತಿರುವ ಮಳೆಯಿಂದ ರೈತರಯ ಸಂತಸಗೊಂಡಿದ್ದಾರೆ. ಅಲ್ಲದೇ ಜೂ.೮ಕ್ಕೆ ಮೃಗಶಿರ ಮಳೆ ಪ್ರಾರಂಭವಾಗಲಿದೆ. ಈಗಾಗಲೇ ೧೫ ರಿಂದ ೨೦ ದಿನಗಳ ಹೆಸರು ಬೆಳೆ ಇದೆ. ಇದೇ ರೀತಿ ಉತ್ತಮ ಮಳೆಯಾದರೇ ಹೆಸರು ಬೆಳೆ ರೈತರ ಕೈ ಹಿಡಿಯಲಿದೆ.
ಭಾನಾಪೂರ ಭಾಗದಲ್ಲಿ ಧಾರಾಕಾರ ಮಳೆ:ತಾಲೂಕಿನ ತಳಕಲ್, ಭಾನಾಪೂರ, ಬೆಣಕಲ್ ಹಾಗೂ ವೀರಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುರುವಾರ ಸಂಜೆ ಧಾರಾಕಾರವಾಗಿ ಮಳೆ ಸುರಿಯಿತು. ರಭಸದಿಂದ ಒಂದು ತಾಸು ಮಳೆ ಸುರಿದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.ಕಳೆದೆರೆಡು ದಿನಗಳಿಂದ ಜಿಲ್ಲಾದ್ಯಂತ ಭಾರಿ ಮಳೆ:ಕೊಪ್ಪಳ ಜಿಲ್ಲಾದ್ಯಂತ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ರೈತರು ಫುಲ್ ಖುಷಿಯಾಗಿದ್ದಾರೆ. ಗುರುವಾರ ಮಧ್ಯಾಹ್ನದ ನಂತರ ಕೊಪ್ಪಳ ಸೇರಿದಂತೆ ವಿವಿಧೆಡೆ ಧಾರಾಕಾರವಾಗಿ ಮಳೆ ಸುರಿದಿದೆ.ಕುಷ್ಟಗಿ ತಾಲೂಕಿನ ಜಾಗೀರರಾಂಪುರ ಗ್ರಾಮದ ಬಳಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ರತ್ನಮ್ಮ ಗೋರೆಬಾಳ (44) ಸಿಡಿಲಿಗೆ ಬಲಿಯಾಗಿದ್ದಾಳೆ. ಕೊಪ್ಪಳ ತಾಲೂಕಿನ ಹಾಲವರ್ತಿಯಲ್ಲಿ ತೆಂಗಿನ ಮರಕ್ಕೆ ಸಿಡಿಲುಬಡಿದು ಹೊತ್ತಿ ಉರಿದಿದೆ. ಆತಂಕಗೊಂಡಿದ್ದ ಗ್ರಾಮಸ್ಥರು ಕೆಲಕಾಲ ಗಲಿಬಿಲಿಗೊಂಡಿದ್ದರು. ನಂತರ ಸಿಡಿಲು ಬಡಿದಿರುವುದು ಪಕ್ಕಾ ಆಗುತ್ತಿದ್ದಂತೆ ನೀರು ಎರಚಿ ಬೆಂಕಿಯನ್ನು ನಂದಿಸಿದ್ದಾರೆ.
ಕೊಪ್ಪಳ ತಾಲೂಕಿನ ಗಿಣಿಗೇರಿ, ಮುದ್ದಾಬಳ್ಳಾರಿ, ಹೊಸಳ್ಳಿ ಸೇರಿದಂತೆ ಹಲವೆಡೆ ಗಂಟೆಗಟ್ಟಲೇ ಮಳೆಯಾಗಿದ್ದರೇ ಕುಕನೂರು ತಾಲೂಕಿನ ಭಾನಾಪುರ ಸುತ್ತಲು ಭಾರಿ ಮಳೆಯಾಗಿದೆ. ಕುಷ್ಟಗಿ ತಾಲೂಕಿನ ಜಗೀರರಾಂಪುರ, ಹನುಮಸಾಗರ ಸೇರಿದಂತೆ ಹಲವೆಡೆ ಮಳೆಯಾಗಿದೆ.