ಭ್ರಷ್ಟಾಚಾರ ತಡೆಗಟ್ಟಲು ಸಾರ್ವಜನಿಕರ ಪಾತ್ರವೂ ಮಹತ್ವದ್ದಾಗಿದೆ: ನ್ಯಾ. ಗಣಪತಿ ಗುರುಸಿದ್ದ ಬಾದಾಮಿ

ಇಡೀ ಜಗತ್ತಿನಲ್ಲಿ ನಮ್ಮ ದೇಶ ಭ್ರಷ್ಟಾಚಾರದಲ್ಲಿ ೭೮ನೇ ಸ್ಥಾನದಲ್ಲಿದ್ದು, ಭ್ರಷ್ಟಾಚಾರ ಈ ಮಟ್ಟಕ್ಕೆ ಹೆಚ್ಚಾಗಲು ಕಾರಣ ಕೇವಲ ರಾಜಕಾರಣಿಗಳು, ಅಧಿಕಾರಿಗಳು ಮಾತ್ರವಲ್ಲ, ಭ್ರಷ್ಟಾಚಾರ ಹೆಚ್ಚಾಗುವಲ್ಲಿ ಸಾರ್ವಜನಿಕರ ಪಾತ್ರ ಏನು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ.

KannadaprabhaNewsNetwork | Published : Apr 25, 2024 7:19 PM IST

ಕನ್ನಡಪ್ರಭ ವಾರ್ತೆ ಕೆಜಿಎಫ್

ಸರ್ಕಾರಿ ಸೇವೆಗೆ ಸೇರುವ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಸಂವಿಧಾನದ ಮೇಲೆ ಪ್ರಮಾಣ ಮಾಡಿ ತಾವು ಎಷ್ಟು ಆತ್ಮ ಶುದ್ಧಿಯಿಂದ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದು ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿ ಹೇಳಿದರು.

ನಗರದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದಿಂದ ಕರ್ನಾಟಕ ಲೋಕಾಯುಕ್ತ ಕಾಯ್ದೆ ಹಾಗೂ ಲಂಚ ನಿಷೇಧ ಕಾಯ್ದೆ ಬಗ್ಗೆ ‘ಕಾನೂನು ಅರಿವು- ನೆರವು’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಡೀ ಜಗತ್ತಿನಲ್ಲಿ ನಮ್ಮ ದೇಶ ಭ್ರಷ್ಟಾಚಾರದಲ್ಲಿ ೭೮ನೇ ಸ್ಥಾನದಲ್ಲಿದ್ದು, ಭ್ರಷ್ಟಾಚಾರ ಈ ಮಟ್ಟಕ್ಕೆ ಹೆಚ್ಚಾಗಲು ಕಾರಣ ಕೇವಲ ರಾಜಕಾರಣಿಗಳು, ಅಧಿಕಾರಿಗಳು ಮಾತ್ರವಲ್ಲ, ಭ್ರಷ್ಟಾಚಾರ ಹೆಚ್ಚಾಗುವಲ್ಲಿ ಸಾರ್ವಜನಿಕರ ಪಾತ್ರ ಏನು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ ಎಂದರು.

ಭ್ರಷ್ಟಾಚಾರ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಮಹತ್ತರವಾದುದಾಗಿದೆ. ನಾನು ಲಂಚವನ್ನು ಕೊಡುವುದಿಲ್ಲ, ನನ್ನ ಕೆಲಸ ಎಷ್ಟು ದಿವಸ ಬೇಕಾದರೂ ವಿಳಂಬವಾಗಲಿ ಪರವಾಗಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಅಥವಾ ನೌಕರರು ಒಂದು ವೇಳೆ ಬೇಕಾದಲ್ಲಿ ನನ್ನ ಅರ್ಜಿ ತಿರಸ್ಕರಿಸಲಿ ಎನ್ನುವ ನಿರ್ಧಾರಕ್ಕೆ ಸಾರ್ವಜನಿಕರು ಬಂದಲ್ಲಿ ಅಲ್ಲಿಂದಲೇ ಬದಲಾವಣೆಯ ಪರ್ವ ಪ್ರಾರಂಭವಾಗುತ್ತದೆ ಎಂದರು.

ಚುನಾವಣೆಗಳು ಬಂದಾಗ ಸಾರ್ವಜನಿಕರು ಪ್ರಾಮಾಣಿಕ ಕೆಲಸ ನಿರ್ವಹಿಸಬೇಕಾಗುತ್ತದೆ. ಚುನಾವಣಾ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿರುವವರು ಸೀರೆ, ಮೂಗುತಿ, ಕುಕ್ಕರ್ ಸೇರಿ ಇನ್ನಿತರೆ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡುವ ಮೂಲಕ ಆಮಿಷಕ್ಕೊಳಗಾಗುವಂತೆ ಮಾಡುತ್ತಾರೆ. ಹೀಗೆ ನಿಮಗೆ ಉಡುಗೊರೆಗಳನ್ನು ನೀಡಿದಂತಹ ವ್ಯಕ್ತಿ ನಿಮ್ಮಿಂದ ಮತವನ್ನು ಪಡೆದುಕೊಂಡು ಮುಂದಿನ ೫ ವರ್ಷಗಳವರೆಗೆ ನಿಮ್ಮತ್ತ ತಿರುಗಿ ನೋಡುವುದಿಲ್ಲ, ಹೀಗಿರುವಾಗ ಅಂತಹ ವ್ಯಕ್ತಿಯಿಂದ ಯಾವ ರೀತಿಯ ಪಾರದರ್ಶಕ ಆಡಳಿತವನ್ನು ನಡೆಸಲು ಸಾಧ್ಯ? ಅಲ್ಲದೇ ಅಂತಹವರನ್ನು ನೀವು ಅಭಿವೃದ್ಧಿ ಇತ್ಯಾದಿಗಳನ್ನು ಮಾಡಿಲ್ಲ ಎಂದು ಪ್ರಶ್ನಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪೊಲೀಸ್ ಠಾಣೆಗಳಲ್ಲಿ ದೂರನ್ನು ನೀಡಲು ಹೋದಾಗ ಅದನ್ನು ಪೊಲೀಸರು ನಿರಾಕರಿಸುವಂತಿಲ್ಲ, ಒಂದು ವೇಳೆ ದೂರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದಲ್ಲಿ ನೋಂದಾಯಿತ ಅಂಚೆ ಮೂಲಕ ದೂರನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರನ್ನು ಕಳುಹಿಸಬಹುದು. ಇಲ್ಲವೇ ಪೊಲೀಸ್ ವರಿಷ್ಠಾಧಿಕಾರಿಗಳಿಗಾಗಲೀ, ಐಜಿಪಿ ರವರಿಗಾಗಲೀ ದೂರನ್ನು ಸಲ್ಲಿಸಬಹುದು. ಇದ್ಯಾವುದೂ ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿ ಮೇಲೆ ಖಾಸಗಿ ದೂರನ್ನು ದಾಖಲಿಸಬಹುದಾಗಿದ್ದು, ಈ ತಿಳುವಳಿಕೆಯನ್ನು ಸಮಾಜದಲ್ಲಿನ ಎಲ್ಲರೂ ತಿಳಿದುಕೊಳ್ಳಬೇಕಾಗಿದೆ ಎಂದರು.

ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗಳಿಗೆ ಹೋದಾಗ ಅಲ್ಲಿ ವೈದ್ಯರು ನಿಮ್ಮ ಖಾಯಿಲೆಗೆ ಸಂಬಂಧಿಸಿದ ಔಷಧಿಗಳು ಆಸ್ಪತ್ರೆಯಲ್ಲಿ ಲಭ್ಯವಿಲ್ಲ, ಹೊರಗೆ ಮೆಡಿಕಲ್ ಶಾಪ್‌ಗಳಲ್ಲಿ ತೆಗೆದುಕೊಳ್ಳಿ ಎಂದು ಚೀಟಿಯನ್ನು ಬರೆದುಕೊಡುವಂತಿಲ್ಲ. ವಾಸ್ತವವಾಗಿ ಖಾಸಗಿ ಅಂಗಡಿಗಳಲ್ಲಿ ದೊರೆಯುವ ಔಷಧಿಗಳಿಗಿಂತಲೂ ಅತಿ ಹೆಚ್ಚಿನ ಗುಣಮಟ್ಟದ ಔಷಧಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ದೊರೆಯುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ನ್ಯಾಯಾಧೀಶರಾದ ಮುಜಫರ್ ಎ ಮಾಂಜರಿ ಮಂಜು, ಪೌರಾಯುಕ್ತ ಪವನ್‌ಕುಮಾರ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ರಾಜಗೋಪಾಲಗೌಡ, ನಗರಸಭೆ ವ್ಯವಸ್ಥಾಪಕ ಶಶಿಕುಮಾರ್, ಮಣಿವಣ್ಣನ್ ಇದ್ದರು.

Share this article