ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಮೂಲ್ಯ: ಇಒ ಶ್ರೀನಿವಾಸ್

KannadaprabhaNewsNetwork |  
Published : Jun 13, 2026, 01:45 AM IST
12ಕೆಎಂಎನ್ ಡಿ14 | Kannada Prabha

ಸಾರಾಂಶ

ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹುಪಾಲು ಇದೆ. ಮಹಿಳೆಗೆ ಬೆನ್ನೆಲುಬಾಗಿ ನಿಲ್ಲುವ ಕಾರ್ಯವನ್ನು ಸಂಜೀವಿನಿ ಮಾಡುತ್ತಿದೆ. ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರತಿಯೊಂದು ಕುಟುಂಬದ ಒಬ್ಬ ಮಹಿಳೆ ಸದಸ್ಯರಾಗಬೇಕು ಎಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹಲಗೂರು

ಕುಟುಂಬದಲ್ಲಿರುವ ಹಲವು ಸಮಸ್ಯೆಗಳನ್ನು ಸರಿಪಡಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಹಿಳೆಯರ ಪಾತ್ರ ಅಮೂಲ್ಯವಾಗಿದೆ ಎಂದು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್ ತಿಳಿಸಿದರು.

ಹಾಡ್ಲಿ ಸರ್ಕಲ್ ಗ್ರಾಮದ ಸಂತೆಮಾಳದಲ್ಲಿ ಸಂಜೀವಿನಿ ಮಾಸಿಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿ, ಸಂತೆಯಲ್ಲಿ ಇರುವ ನ್ಯೂನ್ಯತೆ ಸರಿಪಡಿಸಿದಾಗ ಯಶಸ್ಸು ಖಂಡಿತ ಎಂಬುದಕ್ಕೆ ಈ ಸಂತೆಯೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಸಮನ್ವಯ ಕೊರತೆ ಸರಿಪಡಿಸಿ ಇನ್ನಷ್ಟು ಉತ್ತಮಗೊಳಿಸುತ್ತೇವೆ ಎಂದರು.

ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹುಪಾಲು ಇದೆ. ಮಹಿಳೆಗೆ ಬೆನ್ನೆಲುಬಾಗಿ ನಿಲ್ಲುವ ಕಾರ್ಯವನ್ನು ಸಂಜೀವಿನಿ ಮಾಡುತ್ತಿದೆ. ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರತಿಯೊಂದು ಕುಟುಂಬದ ಒಬ್ಬ ಮಹಿಳೆ ಸದಸ್ಯರಾಗಬೇಕು ಎಂದು ಕರೆ ನೀಡಿದರು.

ಮಹಿಳೆಗೆ ಸರ್ಕಾರದ ಸೂಕ್ತ ಸೌಲಭ್ಯದ ಜೊತೆಗೆ ತರಬೇತಿ ನೀಡುತ್ತಿದ್ದೇವೆ. ಇಂದಿನ ಜಾಗತಿಕ ಮಟ್ಟದಲ್ಲಿ ದಲ್ಲಾಳಿಗಳನ್ನು ಹೊರಗಿಟ್ಟು ನೇರ ಮಾರುಕಟ್ಟೆಯನ್ನು ಸ್ಥಳೀಯವಾಗಿ ನಿರ್ಮಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಹೇಳಿದರು.

ಇಂದು ಕಲಬೆರಕೆ ಎಣ್ಣೆಗೆ ಮಾರುಹೋಗಿ ಆರೋಗ್ಯ ಕೆಡಿಸಿಕೊಳ್ಳದೆ. ಮಹಿಳೆಯರೇ ಉತ್ಪಾದಿಸಿದ ಗಾಣದ ಎಣ್ಣೆಯನ್ನು ಉಪಯೋಗಿಸಬೇಕು. ದಿನಬಳಕೆ ವಸ್ತುಗಳನ್ನು ಮಹಿಳೆಯರೇ ಉತ್ಪಾದಿಸುತ್ತಿದ್ದು, ಮೊದಲು ನೀವೇ ಪರಸ್ಪರ ಖರೀದಿಸುವ ಮನೋಭಾವ ಬೆಳೆಸಿಕೊಂಡು ಅಕ್ಕಪಕ್ಕದ ಪರಿಚಯದ ಕುಟುಂಬಗಳಿಗೂ ತಿಳಿಸಬೇಕು ಎಂದು ಕರೆ ನೀಡಿದರು.

ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೃಷಿಯೇತರ ಚಟುವಟಿಕೆ ತಾಲೂಕು ವ್ಯವಸ್ಥಾಪಕಿ ಸೌಮ್ಯ ಅವರು ವಿಶೇಷ ಆಸಕ್ತಿ ವಹಿಸಿ ಒಂದು ವಾರದಿಂದಲೇ ಪೂರ್ವನಿಯೋಜಿತ ರೂಪುರೇಷೆಗಳೊಂದಿಗೆ ಸಿದ್ಧತೆ ನಡೆಸಿದರು. ಮಳಿಗೆ ಹಂಚಿಕೆ, ವ್ಯಾಪಕ ಪ್ರಚಾರ, ಗ್ರಾಹಕರ ಸೆಳೆಯುವ ತಂತ್ರಗಳೊಂದಿಗೆ ಸಂತೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲು ಶ್ರಮಿಸಿದರು.

ಹಾಡ್ಲಿ ಗ್ರಾಪಂ ಆವರಣದಲ್ಲಿ 28ಕ್ಕೂ ಹೆಚ್ಚು ಮಳಿಗೆಗಳು ತೆರೆದು ಸಿರಿಧಾನ್ಯ ಖಾದ್ಯ, ಮಸಾಲೆ ಪುಡಿ, ಉಪ್ಪಿನಕಾಯಿ, ಕೈಮಗ್ಗ ವಸ್ತ್ರ, ಟೆರಾಕೋಟಾ ಆಭರಣ, ಸಾವಯವ ತರಕಾರಿ, ಗೃಹೋಪಯೋಗಿ ವಸ್ತುಗಳು ಮಾರಾಟವಾದವು.

ಯತ್ತಂಬಾಡಿ ಸ್ವಸಹಾಯ ಸಂಘದ ಸಾವಯವ ರಾಗಿಹುರಿ ಹಿಟ್ಟಿನ ಜೊತೆಗೆ ಕರಿಬೇವು, ನುಗ್ಗೆಸೊಪ್ಪು, ಬೇವಿನಸೊಪ್ಪಿನ ಪುಡಿಗಳು ಮಕ್ಕಳು- ಹಿರಿಯರ ಗಮನ ಸೆಳೆದವು. ಆರೋಗ್ಯಕರ ಆಹಾರಕ್ಕೆ ಹೆಚ್ಚಿದ ಬೇಡಿಕೆಯಿಂದ ನಿಮಿಷಗಳಲ್ಲಿ ಖಾಲಿಯಾದವು.

ಸುಜ್ಜಲೂರು ಚಾಮುಂಡೇಶ್ವರಿ ಸ್ವಸಹಾಯ ಸಂಘದ ಬಜ್ಜಿ, ಬೋಂಡಾ, ವಡೆ, ಹಪ್ಪಳಕ್ಕೆ ಜನ ಮುಗಿಬಿದ್ದರು. ಬಿಸಿ ಬಿಸಿ ತಿಂಡಿಗೆ ಭಾರೀ ಬೇಡಿಕೆ ಬಂದಿದ್ದರಿಂದ ಸಂಜೆಯೊಳಗೆ ಎಲ್ಲವೂ ಖಾಲಿಯಾಗಿ ಭರ್ಜರಿ ವಹಿವಾಟು ನಡೆಯಿತು.

ಇದೇ ವೇಳೆ ಇಒ ನೈರ್ಮಲ್ಯತೆ ಕಂಡು ಮೊದಲು ಕಸದ ರಾಶಿ ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಸ್ಥಳದಲ್ಲಿದ್ದ ಸಿಬ್ಬಂದಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಹಾಡ್ಲಿ ಗ್ರಾ.ಪಂ. ಪಿಡಿಒ ಲಿಂಗರಾಜು, ಒಕ್ಕೂಟದ ಅಧ್ಯಕ್ಷೆ ಸುನಂದಮ್ಮ, ಕಾರ್ಯದರ್ಶಿ ಸವಿತಾ, ಖಜಾಂಚಿ ಲಕ್ಷ್ಮಿ, ವ್ಯವಸ್ಥಾಪಕ ಮಹದೇವಸ್ವಾಮಿ, ಕೃಷಿ ಆಧಾರಿತ ಚಟುವಟಿಕೆ ವ್ಯವಸ್ಥಾಪಕ ಕೃಷ್ಣ, ಶೋಭಾ, ಒಕ್ಕೂಟದ ಮಧುಶ್ರೀ, ಗಿರಿಜಾ, ಪ್ರೇಮಾ, ರತ್ನಮ್ಮ, ಮಮತಾ ಸೇರಿ ಇತರ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಸರ ರಕ್ಷಣೆಗೆ ಶ್ರಮಿಸುತ್ತಿದೆ ಪುರಸಭೆ: ವಸಂತ ಕುಮಾರ್
ಜಾತಿಗಣತಿ: ವೀರಶೈವ ಲಿಂಗಾಯತರ ಸಂಖ್ಯೆ ಕಡಿತಕ್ಕೆ ಶಂಕರದೇವ ಶ್ರೀ ಬೇಸರ