ಕನ್ನಡಪ್ರಭ ವಾರ್ತೆ ಕವಿತಾಳ
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಮೇಲ್ಚಾವಣಿ ಸೋರುತ್ತಿರುವುದು ರೋಗಿಗಳಲ್ಲಿ ಆತಂಕ ಮೂಡಿಸಿದೆ. ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣವಾಗಿ 25 ವರ್ಷ ಕಳೆದಿದೆ. ೩೦ ಹಾಸಿಗೆ ಸಾಮರ್ಥ್ಯ ಹೊಂದಿದ್ದು, 4 ಓಪಿಡಿ ಕೊಠಡಿ, ನೇತ್ರ ತಜ್ಞರ ಕೊಠಡಿ, ಕ್ಷ ಕಿರಣ ಕೊಠಡಿ, ಪ್ರಯೋಗಾಲಯ, ಎನ್‌ಸಿಡಿ ಕೊಠಡಿ, ಐಸಿಟಿಸಿ ಕೊಠಡಿ, ಹೆರಿಗೆ ಕೊಠಡಿ, ಪಿಎನ್‌ಸಿ ಕೊಠಡಿ, ಶಸ್ತ್ರಚಿಕಿತ್ಸೆ ಕೊಠಡಿ ಗಳಿವೆ. ರೋಗಿಗಳು ಕುಳಿತುಕೊಳ್ಳುವ ವರಾಂಡ ಮತ್ತು ತಪಾಸಣಾ ಕೊಠಡಿಗಳ ಹತ್ತಿರ ಚಾವಣಿಯಿಂದ ನೀರು ಸೋರುತ್ತಿದ್ದು, ರೋಗಿಗಳು ಅಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಇದೆ. ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಮೇಲ್ಚಾವಣಿ ಸೋರುತ್ತಿರುವುದು, ಅಲ್ಲಲ್ಲಿ ಗೋಡೆ ಕೂಡ ನೀರು ಬರುವ ರೀತಿಯಲ್ಲಿ ತೇವಾಂಶವಾಗಿದ್ದು, ಆತಂಕ ಮೂಡಿಸಿದೆ. ಆವರಣದಲ್ಲಿ ಮತ್ತು ಸಭಾಂಗಣಕ್ಕೆ ತೆರಳುವ ಮಾರ್ಗದಲ್ಲಿ ಆಸ್ಪತ್ರೆ ಒಳಗಡೆ ಮತ್ತು ಹೊರಗೆ ನೀರು ನಿಂತಿರುವುದರಿಂದ ರೋಗಿಗಳು ಅಪ್ಪಿ ತಪ್ಪಿ ಆಕಡೆ ಹೋದರೆ ಕಾಲು ಜಾರಿ ಬೀಳುವ ಪರಿಸ್ಥಿತಿ ಉಂಟಾಗಿದೆ.ರೋಗಿಗಳು ವಿಶ್ರಾಂತಿ ಪಡೆಯುವ ಸ್ಥಳ ಹಾಗೂ ಲ್ಯಾಬ್‌ಗೆ ತೆರಳುವ ಸ್ಥಳದಲ್ಲಿ ಮೇಲ್ಚಾವಣಿಯಿಂದ ನೀರು ಬೀಳುತ್ತಿರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೆಗಡಿ ಕೆಮ್ಮು ಜ್ವರ ಸೇರಿದಂತೆ ಇನ್ನಿತರ ರೋಗಗಳು ಹೆಚ್ಚಾಗಿದ್ದು ಇದರಿಂದಾಗಿ ಆಸ್ಪತ್ರೆಗೆ ರೋಗಿಗಳು ಬರುತ್ತಿರುವುದು ಹೆಚ್ಚಾಗಿದ್ದು. ಇಬ್ಬರು ಎಂಬಿಬಿಎಸ್ ಡಾ.ಇರಬೇಕಿತ್ತು ಅದರಲ್ಲಿ ಒಬ್ಬ ಎಂ.ಬಿ.ಬಿ.ಎಸ್ ವೈದ್ಯರು ಇದ್ದಾರೆ. ಮಕ್ಕಳ ತಜ್ಞರು, ಹೆರಿಗೆ ತಜ್ಞರು ಇಲ್ಲದಿರುವುದರಿಂದ ರೋಗಿಗಳು ಪರದಾಡುತ್ತಿದ್ದಾರೆ. ಇದಕ್ಕೆಲ್ಲಾ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಭೀಮ್ ಆರ್ಮಿ ಸಂಘದ ಗೌರವ ಅಧ್ಯಕ್ಷ ಹುಚ್ಚಪ್ಪ ಬುಳ್ಳಪುರು ಆರೋಪಿಸಿದರು.
ಸೋರುತ್ತಿರುವ ಕಟ್ಟಡದ ಬಗ್ಗೆ ಎಚ್ಚರ ವಹಿಸಬೇಕು. ಯಾವುದೇ ಅನಾಹುತ ಸಂಭವಿಸುವ ಮುಂಚೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಮುಖಂಡರು ಒತ್ತಾಯಿಸಿದರು. ಈ ಬಗ್ಗೆ ಮಾಹಿತಿ ಪಡೆಯಲಾಗಿದೆ ಮೇಲ್ಚಾವಣಿ ಮೇಲೆ ನೀರು ನಿಂತಿದ್ದರಿಂದ ಹೀಗಾಗಿದೆ. ಈ ಬಗ್ಗೆ ಸ್ವಚ್ಛತೆ ಮಾಡುವಂತೆ ಸೂಚಿಸಲಾಗಿದೆ ಎಂದು ಟಿಎಚ್‌ಒ ಡಾ.ಶರಣ ಬಸವರಾಜ ತಿಳಿಸಿದರು.