ಮುಂಡಗೋಡ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭವಾಗಿ ೪೦ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೇರು-ಚಿಗುರು ಕಾರ್ಯಕ್ರಮದಡಿ ಈ ಹಿಂದೆ ಇಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳನ್ನು ಒಂದುಗೂಡಿಸಿ, ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ ಎಂದು ಕಾಲೇಜು ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ೧೯೮೪ರಿಂದ ಇಲ್ಲಿಯ ವರೆಗೆ ಈ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು, ತಾವು ಕಲಿತ ಕಾಲೇಜಿಗೆ ಅಗತ್ಯ ಕೊಡುಗೆ ನೀಡುವ ಮೂಲಕ ಕಾಲೇಜು ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದ ಅವರು, ಈ ವರೆಗೆ ಅಧಿಕೃತವಾಗಿ ಹಳೆಯ ವಿದ್ಯಾರ್ಥಿಗಳ ಸಂಘ ನೋಂದಣಿಯಾಗಿಲ್ಲ. ಹಾಗಾಗಿ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ತರುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಇಲ್ಲಿ ಶಿಕ್ಷಣ ಪಡೆದ ಹಲವರು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಂಗ, ಶಿಕ್ಷಣ, ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಸಂಗ್ರಹಿಸಲಾಗಿದ್ದು, ಎಲ್ಲ ವಿದ್ಯಾರ್ಥಿಗಳ ಮಾಹಿತಿಯನ್ನು ಕ್ರೋಡೀಕರಿಸಲಾಗುತ್ತಿದೆ ಎಂದು ಹೇಳಿದರು.೮೦ರ ದಶಕದಲ್ಲಿ ಕಾಲೇಜು ಆರಂಭಗೊಂಡಾಗ ಕೇವಲ ಬಿಎ ಮತ್ತು ಬಿಕಾಂ ತರಗತಿ ಮಾತ್ರ ಇದ್ದವು. ೨೦೧೩ರ ನಂತರ ಎಂಕಾಂ, ಸ್ನಾತಕೋತ್ತರ ಪದವಿ ಪ್ರಾರಂಭವಾಯಿತು. ೨೦೨೩-೨೪ರಲ್ಲಿ ಬಿಸಿಎ, ಬಿಎಸ್ಸಿ, ಪಿಸಿಎಂ ಆರಂಭಗೊಂಡಿದ್ದು, ಮುಂದಿನ ವರ್ಷದಿಂದ ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್, ಬಿಎಸ್‌ಸಿ (ಬ್ಯಾಚಲರ್ ಇನ್ ಸೋಷಿಯಲ್ ವರ್ಕ್), ಸೈಕಾಲಾಜಿ, ವಿಭಾಗದಲ್ಲಿ ಆಪ್ಷನಲ್ ಇಂಗ್ಲಿಷ್ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಹಳೆಯ ವಿದ್ಯಾರ್ಥಿಗಳು, ಸಾರ್ವಜನಿಕರ ಸಹಕಾರ ಬೇಕಾಗಿದೆ. ಹಳೆಯ ವಿದ್ಯಾರ್ಥಿಗಳ ಸಂಘ ರಚನೆಗೆ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ, ದೈನಂದಿನ ಸಭೆ, ತೀರ್ಮಾನ, ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗುವುದು ಎಂದು ಹೇಳಿದರು.
ಉಪನ್ಯಾಸಕರಾದ ರಾಜು ಮಾಕನೂರ, ಯಲ್ಲಪ್ಪ ಬಿ., ಸಂತೋಷ. ಟಿ.ಡಿ., ನಾಗರಾಜ ಹರಿಜನ, ಮನೋಹರ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.