ರಾಣಿಬೆನ್ನೂರು: ರೋಸ್‌ಮೆರಿ ಬೆಳೆಯುವ ಮೂಲಕ ರೈತರು ಆರ್ಥಿಕವಾಗಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ವೀರನಗೌಡ ಪೊಲೀಸಗೌಡ್ರ ತಿಳಿಸಿದರು.ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ರೋಸ್‌ಮೆರಿ ಬೆಳೆಯ ಉತ್ಪಾದನೆ, ಮೌಲ್ಯವರ್ಧನೆ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಸ್‌ಮೆರಿ ಬೆಳೆಯು ಒಂದು ಪರಿಮಳಯುಕ್ತ ಸಸ್ಯವಾಗಿದ್ದು, ಇದನ್ನು ಸಾಮಾನ್ಯವಾಗಿ ಅಡುಗೆ ಮತ್ತು ಔಷಧಿ ಸಸ್ಯಗಳಿಗಾಗಿ ಬಳಸಲಾಗುತ್ತದೆ. ಇತ್ತೀಚೆಗೆ ಛತ್ತಿಸಗಢ ಮತ್ತು ತಮಿಳುನಾಡಿನ ರಾಜ್ಯದಲ್ಲಿ ಸಾಕಷ್ಟು ರೈತರು ಇದನ್ನು ಬೆಳೆದು ಅಧಿಕ ಆದಾಯ ಗಳಿಸುತ್ತಿದ್ದಾರೆ ಎಂದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೇರಳ ಮಲಭಾರ ಸಸ್ಯಶಾಸ್ತ್ರ ಉದ್ಯಾನ ಮತ್ತು ಸಸ್ಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಡಾ. ರಘುಪತಿ ಬಿ., ಮಾತನಾಡಿ, ರೋಸ್‌ಮೆರಿ ಒಂದು ಪ್ರಮುಖವಾದ ಸುಗಂಧ ದ್ರವ್ಯದ ಬೆಳೆ. ಇದರಿಂದ ತೆಗೆಯಲಾಗುವ ಸುಗಂಧದ ತೈಲವನ್ನು ಖಾದ್ಯ ಪದಾರ್ಥಗಳಲ್ಲಿ, ಔಷಧಿ, ಸುಗಂಧ ಹಾಗೂ ಶೃಂಗಾರ ಸಾಧನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ಸುಗಂಧ ತೈಲಗಳ ಪರಿಮಳವನ್ನು ಹಿಡಿದಿಟ್ಟುಕೊಳ್ಳುವಲ್ಲಿ, ಹಲವಾರು ಪರಿಮಳಗಳನ್ನು ಮುಚ್ಚಿಡುವಲ್ಲಿ ಬಳಸಲಾಗುತ್ತದೆ.
ರೈತರು ಈ ಬೆಳೆಯನ್ನು ಒಪ್ಪಂದದ ಕೃಷಿ ಮೂಲಕ ಬೆಳೆದು ಅಧಿಕ ಲಾಭವನ್ನು ಗಳಿಸಬಹುದು. ರೈತರು ಗುಂಪುಗಳನ್ನು ರಚನೆ ಮಾಡಿಕೊಂಡು ಈ ಬೆಳೆಯನ್ನು ಹೆಚ್ಚಿನ ವಿಸ್ತೀರ್ಣದಲ್ಲಿ ಬೆಳೆಯುವುದರಿಂದ ಮಾರುಕಟ್ಟೆ ಸುಲಭವಾಗುತ್ತದೆ ಎಂದರು.
ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯ ಆವರಣ ಮುಖ್ಯಸ್ಥ ಹಾಗೂ ಡೀನ್ ಡಾ. ಎ.ಜಿ. ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ.ಎಚ್. ಬಿರಾದಾರ, ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ್ ಎಚ್.ಎಂ., ಗೃಹ ವಿಜ್ಞಾನ ವಿಷಯತಜ್ಞೆ ಡಾ. ಅಕ್ಷತಾ ರಾಮಣ್ಣನವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಮಾರು 70ಕ್ಕೂ ಹೆಚ್ಚು ಕೃಷಿ ಸಖಿಯರು ಮತ್ತು ರೈತ ಮಹಿಳೆಯರು ಇದ್ದರು.