ಹಾನಗಲ್ಲ ತಾಲೂಕಿನಲ್ಲಿ ಅಡಕೆಗೆ ಕೊಳೆ ರೋಗ, ಬೆಳೆಗಾರರಲ್ಲಿ ಆತಂಕ

KannadaprabhaNewsNetwork |  
Published : Aug 05, 2025, 11:45 PM IST
ಫೋಟೋ : 5ಎಚ್‌ಎನ್‌ಎಲ್6 | Kannada Prabha

ಸಾರಾಂಶ

ಅಡಕೆ ಬೆಳೆಗಾರ ಬಾಳಾರಾಮ ಗುರ್ಲಹೊಸೂರ ಅವರು ಹೇಳುವ ಪ್ರಕಾರ, ಈ ಬಾರಿ ಮೂರು ತಿಂಗಳಿಂದ ಮಳೆ ನಿರಂತರ ಸುರಿದ ಪರಿಣಾಮ, ಅಡಕೆ ಮರಗಳಿಗೆ ಬಿಸಿಲಿಲ್ಲದೆ ಶಾಖ ಸಿಗಲಿಲ್ಲ. ಹೀಗಾಗಿ ಗೊನೆ ನೀರು ಹಿಡಿದು, ಫಂಗಸ್ ಆಕ್ರಮಿಸಿ, ಕೊಳೆತಂತಾಗಿ ಕೊಳೆ ರೋಗಕ್ಕೆ ಈಡಾಗಿವೆ ಎಂದರು.

ಮಾರುತಿ ಶಿಡ್ಲಾಪೂರಹಾನಗಲ್ಲ: ತಾಲೂಕಿನಲ್ಲಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿರುವ ಅಡಕೆಗೆ ಕೊಳೆ ರೋಗಬಾಧೆ ಕಾಡುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.ತಾಲೂಕಿನಲ್ಲಿ 46 ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದೆ. ಅದರಲ್ಲಿ 17 ಸಾವಿರ ಹೆಕ್ಟೇರ್ ತೋಟಗಾರಿಕೆ ಭೂಮಿಯಿದೆ. ಕಳೆದ 10 ವರ್ಷಗಳಿಂದ ತೋಟಗಾರಿಕೆಗೆ ಹೆಚ್ಚು ಒತ್ತು ನೀಡಿರುವ ರೈತರಿಗೆ ಅತಿಯಾದ ಮಳೆಯೇ ಮಾರಕವಾಗುತ್ತಿದೆ. ಮಳೆ ಕಡಿಮೆ ಆಗುತ್ತಿದೆ ಎಂದು ಭತ್ತದಂಥ ಬೆಳೆಗಳಿಂದ ಮುಕ್ತರಾಗಿ ಗೋವಿನಜೋಳ ಹಾಗೂ ತೋಟಗಾರಿಕೆ ಬೆಳೆಗೆ, ಅದರಲ್ಲೂ ಅಡಕೆ ಬೆಳೆಗೆ ಅದ್ಯತೆ ನೀಡಿದ ರೈತರಿಗೆ ಸಂಕಷ್ಟ ಕಾಡುತ್ತಿದೆ.

ಒಂದು ಕಡೆ ಬೆಳೆ ಹಾಳಾಗುತ್ತಿರುವುದು, ಇನ್ನೊಂದೆಡೆ ಬೆಲೆ ಕುಸಿಯುತ್ತಿರುವುದು, ತೋಟಗಾರಿಕೆ ನಿರ್ವಹಣೆಯ ಅತಿಯಾದ ವೆಚ್ಚ, ಅದಕ್ಕೆ ತಕ್ಕಂತೆ ಫಲ ಬರದೇ ಇರುವುದು ರೈತರನ್ನು ಕಾಡಿ ಬೆಳೆ ಆಯ್ಕೆಯ ವಿಷಯದಲ್ಲಿ ಗೊಂದಲ ಸೃಷ್ಟಿಸಿದೆ.ನಿರಂತರ ಮಳೆ ಸುರಿದ ಪರಿಣಾಮ ಅಡಕೆಗೆ ಜವುಳು ಹಿಡಿದು ಬೆಳೆಯೂ ಕುಂಠಿತವಾಗಿದೆ. ಅಡಕೆ ಹೂವಾಗುವಾಗ, ಕಾಯಿ ಕಟ್ಟುವಾಗಲೂ ಆತಂಕಕ್ಕೆ ಈಡಾಯಿತು. ಅಡಕೆ ಉದುರುವುದು ಕೂಡ ರೈತರಿಗೆ ಸಂಕಷ್ಟವಾಯಿತು. ಆದರೆ ಈಗ ಅದರ ಮುಂದುವರಿದ ಭಾಗವಾಗಿ ಅಡಕೆಗೆ ಕೊಳೆ ರೋಗ ಬಹುವಾಗಿ ಕಾಡುತ್ತಿದ್ದು, ರೈತ ಆರ್ಥಿಕ ನಷ್ಟಕ್ಕೆ ತುತ್ತಾಗಿದ್ದಾರೆ.

ಅಡಕೆ ನಿರ್ವಹಣೆ ಅತ್ಯಂತ ಜಾಗರೂಕವಾಗಿರಬೇಕು. ಸರಿಯಾದ ಬಸಿಗಾಲುವೆ, ಕಾಲಕಾಲಕ್ಕೆ ಔಷಧಿ ಸಿಂಪರಣೆ ಬೇಕು. ಕಾಂಪೋಸ್ಟ್‌ ಗೊಬ್ಬರ ಹಾಕುವುದು, ಪೋಟ್ಯಾಷ್ ಗೊಬ್ಬರ ಹಾಕುವುದು, ಬೇಸಿಗೆಗೆ ಗಿಡಗಳಿಗೆ ಸುಣ್ಣ ಬಳಿಯವುದು ಅಥವಾ ಗಿಡಗಳಿಗೆ ಪಶ್ಚಿಮದ ಬಿಸಿಲು ತಡೆಯಲು ಬೇರೆ ಕ್ರಮ ಕೈಗೊಳ್ಳುವುದು ಅತ್ಯಂತ ಅವಶ್ಯ. ಈ ಎಲ್ಲ ತೋಟಗಾರಿಕೆ ಕ್ರಮಗಳು ಬೇಕೆ ಬೇಕು. ಇದರೊಂದಿಗೆ ಪ್ರಕೃತಿಯೊಂದಿಗಿನ ಹೋರಾಟ ಇನ್ನಷ್ಟು ಆರ್ಥಿಕ ನಷ್ಟ ತಂದು ಅಡಕೆ ಕೃಷಿಯಲ್ಲಿ ನಿರೀಕ್ಷಿತ ಫಲ ಸಾಧ್ಯವಾಗುತ್ತಿಲ್ಲ.

ರೈತರ ಅನುಭವ: ಅಡಕೆ ಬೆಳೆಗಾರ ಬಾಳಾರಾಮ ಗುರ್ಲಹೊಸೂರ ಅವರು ಹೇಳುವ ಪ್ರಕಾರ, ಈ ಬಾರಿ ಮೂರು ತಿಂಗಳಿಂದ ಮಳೆ ನಿರಂತರ ಸುರಿದ ಪರಿಣಾಮ, ಅಡಕೆ ಮರಗಳಿಗೆ ಬಿಸಿಲಿಲ್ಲದೆ ಶಾಖ ಸಿಗಲಿಲ್ಲ. ಹೀಗಾಗಿ ಗೊನೆ ನೀರು ಹಿಡಿದು, ಫಂಗಸ್ ಆಕ್ರಮಿಸಿ, ಕೊಳೆತಂತಾಗಿ ಕೊಳೆ ರೋಗಕ್ಕೆ ಈಡಾಗಿವೆ. ಅಡಕೆ ಪೈರಿನಲ್ಲಿ ಕೆಳಗೆ ಬಸಿಗಾಲುವೆ ಬೇಕು. ಮೇಲೆ ಔಷಧಿ ಸಿಂಪರಣೆ ಅತ್ಯಂತ ಮುಖ್ಯ. ಆದರೆ ಇದಾವುದಕ್ಕೂ ಈ ಬಾರಿಯ ಮುಂಗಾರು ಮಳೆ ಅನುಕೂಲವಾಗಲಿಲ್ಲ. ರೈತರಿಗೆ ಕೆಲಸ ಮಾಡಲು ಬಿಡಲೇ ಇಲ್ಲ ಎಂದು ಅಳಲು ತೋಡಿಕೊಂಡರು..ಮಾರ್ಗದರ್ಶನ: ಮಳೆಯಿಂದಾಗಿ ಅಡಕೆಗೆ ಕೊಳೆರೋಗ ಕಾಡುತ್ತಿದೆ. ಈಗ ಮಳೆ ಕಡಿಮೆಯಾಗಿದೆ. ಸರಿಯಾದ ಸಮಯವನ್ನು ಆಯ್ಕೆ ಮಾಡಿಕೊಂಡು ಔಷಧಿ ಸಿಂಪರಣೆಗೆ ರೈತರು ಮುಂದಾಗಬೇಕು. ಪೋಟ್ಯಾಷ್, ಕಾಂಪ್ಲೆಕ್ಸ್‌ ರಾಸಾಯನಿಕ ಗೊಬ್ಬರವನ್ನು ಕೊಡುವುದು ಈಗ ಸೂಕ್ತ. ಕಾಂಪೋಸ್ಟ್‌ ಗೊಬ್ಬರವನ್ನೂ ಕೊಡಬಹುದು. ರೋಗಕ್ಕೆ ಸಂಬಂಧಿಸಿದಂತೆ ಇಲಾಖೆ ಸಂಪರ್ಕಿಸಿ ಮಾರ್ಗದರ್ಶನ ಪಡೆಯಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಭರಮಪ್ಪ ನೇಗಿನಹಾಳ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ