ಹಾವೇರಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಜಿಲ್ಲಾದ್ಯಂತ ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೂ ಸಾರಿಗೆ ಬಸ್‌ಗಳ ಕಾರ್ಯಾಚರಣೆ ಎಂದಿನಂತಿತ್ತು. ದೂರದ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಸಮಸ್ಯೆಯಾಗಿದ್ದು ಹೊರತುಪಡಿಸಿ ಜಿಲ್ಲೆ ವ್ಯಾಪ್ತಿಯ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಗುವ ಪ್ರಯಾಣಿಕರಿಗೆ ಮುಷ್ಕರದ ಬಿಸಿ ತಟ್ಟಲಿಲ್ಲ.
ವೇತನ ಹಿಂಬಾಕಿ, ವೇತನ ಪರಿಷ್ಕರಣೆ ಹೆಚ್ಚಳಕ್ಕೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ಸರ್ಕಾರದೊಂದಿಗೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆ ಮಂಗಳವಾರ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದವು. ಆದರೆ, ಹೈಕೋರ್ಟ್ ಮುಷ್ಕರ ನಡೆಸದಂತೆ ನೀಡಿದ್ದ ನೀಡಿದ್ದ ಸೂಚನೆಯಿಂದ ಚಾಲಕರು, ನಿರ್ವಾಹಕರು ಗೊಂದಲಕ್ಕೆ ಬಿದ್ದು ಮಂಗಳವಾರ ಬೆಳಗ್ಗೆಯೇ ಕರ್ತವ್ಯಕ್ಕೆ ಹಾಜರಾಗಿದ್ದರು. ಬೆಳಗ್ಗೆಯಿಂದಲೇ ಜಿಲ್ಲೆಯ ಎಲ್ಲ ತಾಲೂಕುಗಳಿಂದ ನಿಗದಿಯಂತೆ ಎಲ್ಲ ಮಾರ್ಗಗಳಲ್ಲಿ ಬಸ್‌ಗಳ ಸಂಚಾರ ಆರಂಭವಾಯಿತು. ಹಾವೇರಿ, ಬ್ಯಾಡಗಿ, ಶಿಗ್ಗಾಂವಿ, ರಾಣಿಬೆನ್ನೂರು, ಹಾನಗಲ್ಲ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಬಸ್ ಸಂಚಾರ ಸಹಜವಾಗಿತ್ತು.ಆದರೆ, ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬರಬೇಕಿದ್ದ ಬಸ್ಸುಗಳು ಬರಲಿಲ್ಲ. ಜಿಲ್ಲೆಯಿಂದ ಬೆಂಗಳೂರು, ಬೆಳಗಾವಿ, ಕಲಬುರಗಿ, ಮಂಗಳೂರು, ಶಿವಮೊಗ್ಗ ಸೇರಿದಂತೆ ದೂರದ ಮಾರ್ಗಗಳಿಗೆ ಬಸ್ ಬಿಟ್ಟರೂ ಅವು ಗಮ್ಯ ತಲುಪಲು ಸಾಧ್ಯವಾಗಲಿಲ್ಲ. ಮುಷ್ಕರದ ಬಗ್ಗೆ ಮಾಹಿತಿ ಇದ್ದುದರಿಂದ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಿತ್ತು. ಗ್ರಾಮೀಣ ಭಾಗಗಳಿಗೆ ಬಸ್‌ಗಳು ಎಂದಿನಂತೆ ಸಂಚರಿಸಿದವು. ಶಾಲಾ- ಕಾಲೇಜು ವಿದ್ಯಾರ್ಥಿಗಳು, ಕಚೇರಿಗಳಿಗೆ ಹೋಗುವ ನೌಕರರಿಗೆ ಯಾವುದೇ ಸಮಸ್ಯೆಯಾಗದೇ ಎಂದಿನಂತೆ ಪ್ರಯಾಣ ಮಾಡಿದರು.
ಪರದಾಟ: ದೂರದ ನಗರ, ಊರುಗಳಿಗೆ ಹೋಗುವ ಹಾಗೂ ದೇವಸ್ಥಾನಕ್ಕೆ ಹೋಗಬೇಕಿದ್ದ ಕೆಲ ಪ್ರಯಾಣಿಕರು ಕೆಲಕಾಲ ಪರದಾಡುವಂತಾಯಿತು. ಬೇರೆ ಕಡೆಗಳಿಂದ ಬರಬೇಕಿದ್ದ ಬಸ್ಸುಗಳು ಬಾರದ್ದರಿಂದ ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲೇ ಕಾಯುತ್ತ ಕುಳಿತಿದ್ದ ದೃಶ್ಯ ಕಂಡುಬಂತು.ಯಲ್ಲಮನ ಗುಡ್ಡಕ್ಕೆ ಹೋಗಬೇಕಿದ್ದ ಕೆಲ ಪ್ರಯಾಣಿಕರು ಬಸ್ ಬಿಡುವಂತೆ ಇಲ್ಲಿಯ ಬಸ್ ನಿಲ್ದಾಣದಲ್ಲಿ ಒತ್ತಾಯಿಸಿದ ಘಟನೆ ನಡೆಯಿತು. ಇಲ್ಲಿಂದ ಹುಬ್ಬಳ್ಳಿವರೆಗೆ ಮಾತ್ರ ನಾವು ಬಸ್ ಬಿಡುತ್ತೇವೆ, ನೀವು ಮುಂದೆ ಹೇಗೆ ಹೋಗುತ್ತೀರಿ ಎಂದು ಚಾಲಕ ಹೇಳಿದ್ದರಿಂದ ಸಿಟ್ಟಾದ ಪ್ರಯಾಣಿಕರು ಮಾತಿನ ಚಕಮಕಿ ನಡೆಸಿದರು. ಇಂಥ ಸಣ್ಣಪುಟ್ಟ ಘಟನೆ ಬಿಟ್ಟರೆ ಜಿಲ್ಲಾದ್ಯಂತ ಯಾವುದೇ ಸಮಸ್ಯೆ ಎದುರಿಸದೇ ಜನರು ಸಂಚಾರ ನಡೆಸಿದರು.
ಸಂಜೆ ವೇಳೆಗೆ ಮುಷ್ಕರ ಹಿಂಪಡೆದ ಸುದ್ದಿ ಹೊರಬೀಳುತ್ತಿದ್ದಂತೆ ಹೊರ ಜಿಲ್ಲೆಗಳಿಂದಲೂ ಬಸ್‌ಗಳ ಸಂಚಾರ ಆರಂಭವಾಯಿತು. ಇದರಿಂದ ಹುಬ್ಬಳ್ಳಿ, ದಾವಣಗೆರೆ ಮುಂತಾದ ಕಡೆಗಳಿಂದ ಬಸ್‌ಗಳು ಹಾವೇರಿ ಬಸ್ ನಿಲ್ದಾಣಕ್ಕೆ ಬಂದವು. ದೂರದ ಊರುಗಳಿಗೆ ಹೋಗಲು ಕಾಯುತ್ತಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟು ಬಸ್ ಏರಿ ಪ್ರಯಾಣಿಸಿದರು.ಪ್ರಯಾಣಿಕರ ಸಂಖ್ಯೆ ಕಡಿಮೆ:
ಬಸ್ ಮುಷ್ಕರದ ಮಾಹಿತಿ ಇದ್ದುದರಿಂದ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಗ್ಯಾರಂಟಿ ಯೋಜನೆ ಆರಂಭದ ಬಳಿಕ ಭರ್ತಿಯಾಗಿ ಸಂಚರಿಸುತ್ತಿದ್ದ ಬಸ್ಸುಗಳಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಇದ್ದು ಆರಾಮವಾಗಿ ಕೂತು ಪ್ರಯಾಣಿಸುತ್ತಿದ್ದ ದೃಶ್ಯ ಕಂಡುಬಂದಿತು. ಪ್ರಯಾಣಿಕರಿಲ್ಲದೇ ಗ್ರಾಮೀಣ ಭಾಗಗಳಿಗೆ ಹೋಗುವ ಅನೇಕ ಬಸ್‌ಗಳು ನಿಲ್ದಾಣದಲ್ಲೇ ನಿಂತಿದ್ದವು. ಯಾವುದೇ ಸಮಸ್ಯೆಯಾಗದಂತೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.2 ಸಾವಿರ ಸಿಬ್ಬಂದಿ ಹಾಜರ್: ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ಬಸ್‌ಗಳ ಕಾರ್ಯಾಚರಣೆ ಆಗಿದೆ. ಮುಷ್ಕರದ ಕಾರಣಕ್ಕೆ ಯಾವ ಬಸ್ ಕೂಡ ನಿಂತಿಲ್ಲ. 545 ಬಸ್‌ಗಳ ಕಾರ್ಯಾಚರಣೆ ನಡೆದಿದ್ದು, 2 ಸಾವಿರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಜಿ. ವಿಜಯಕುಮಾರ್ ತಿಳಿಸಿದರು.