ಕನ್ನಡಪ್ರಭ ವಾರ್ತೆ ಮಡಿಕೇರಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಯೋ ನಿರ್ಮೂಲನೆ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರವಾಹಿಸಿರುವ ರೋಟರಿ ಕ್ಲಬ್ ಉತ್ತಮ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜದಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಾ ಬಂದಿದೆ ಎಂದರು.
ಕೊಡಗಿನಲ್ಲಿ 14 ಕ್ಲಬ್‌ಗಳನ್ನು ಹೊಂದಿದ್ದು, 700 ಸದಸ್ಯರಿದ್ದಾರೆ. ರೋಟರಿಯ ನಾಲ್ಕು ಜಿಲ್ಲೆಗಳಲ್ಲಿ ರು.15 ಕೋಟಿ ವೆಚ್ಚದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಳೆದ 6 ತಿಂಗಳಿನಲ್ಲಿ 3 ರಕ್ತದಾನ ಶಿಬಿರಗಳನ್ನು ಆಯೋಜಲಾಗಿದೆ. ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ಕೆಲವು ಸಲಕರಣೆಗಳನ್ನು ನೀಡಲಾಗಿದೆ. ಪ್ರಾಕೃತಿಕ ವಿಕೋಪದ ಸಂದರ್ಭ ಸೋಮವಾರಪೇಟೆಯಲ್ಲಿ ಸಂತ್ರಸ್ತರಿಗೆ ಮನೆಗಳನ್ನು ನೀಡಿದೆ ಎಂದು ಹೇಳಿದರು.ಹಿರಿಯ ನಾಗರೀಕರಿಗೆ ಸಂಧ್ಯಾ ಸುರಕ್ಷ ಯೋಜನೆ ಮೂಲಕ ಉಪಕರಣಗಳನ್ನು ನೀಡಿದೆ, ಹಲವು ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಶಾಲೆಗಳಿಗೆ ಅಗತ್ಯ ಸಲಕರಣೆಗಳನ್ನು ನೀಡಲಾಗಿದೆ. ಮಡಿಕೇರಿಯ ವಿವಿಧ ಶಾಲೆಗಳ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯ 300 ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ನಗರದ ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿ ನಡೆಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಷ್ಯ ರೂಪಿಸಲು ಸಹಾಯವಾಗಿದೆ ಎಂದರು.
ರೋಟರಿ ಮಡಿಕೇರಿ ಅಧ್ಯಕ್ಷ ಸುದಯ್ ನಾಣಯ್ಯ ಮಾತನಾಡಿ, ಈಗಾಗಲೇ ಸರ್ವಿಕಲ್ (ಗರ್ಭಕಂಠ)ದ ಕ್ಯಾನ್ಸರ್ ಬಗ್ಗೆ ಮೈಸೂರಿನ ಹೆಸರಾಂತ ವೈದ್ಯರಾದ ಡಾ.ಸೋನಿಯ ಮಂದಪ್ಪ ಅವರಿಂದ ವಿದ್ಯಾರ್ಥಿನಿಯರಿಗಾಗಿ ಮಾಹಿತಿ ಕಾರ್ಯಾಗಾರ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸುಮಾರು ರು.2 ಸಾವಿರ ವೆಚ್ಚದ ಸರ್ವಿಕಲ್ ವ್ಯಾಕ್ಸಿನ್ ಅನ್ನು ರೋಟರಿ ಸಂಸ್ಥೆ ವತಿಯಿಂದ 100 ವಿದ್ಯಾರ್ಥಿನಿಯರಿಗೆ ಉಚಿತವಾಗಿ ನೀಡುವ ಉದ್ದೇಶ ಹೊಂದಿದ್ದೇವೆ ಎಂದರು.