ಕಾರವಾರ: ಜನರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರವಾರದ ರೋಟರಿ ಕ್ಲಬ್ ವತಿಯಿಂದ ಸತತ ಆರನೇ ವರ್ಷದ ಮ್ಯಾರಥಾನ್‌ನ್ನು ಡಿ. 14ರಂದು ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಅಕ್ಷಯ ಪಾವಸ್ಕರ ತಿಳಿಸಿದರು.
ಮ್ಯಾರಥಾನ್‌ನಲ್ಲಿ 5 ಮತ್ತು 10 ಕಿಮೀನ ಎರಡು ಪ್ರಮುಖ ವಿಭಾಗಗಳಿರುತ್ತವೆ. ಓಟವು ಮಾಲಾದೇವಿ ಮೈದಾನದಿಂದ ಪ್ರಾರಂಭವಾಗಿ, ಕೋಡಿಬಾಗ್, ಸವಿತಾ ಹೋಟೆಲ್ ಮತ್ತು ಮಾಲಾದೇವಿ ರಸ್ತೆ ಮಾರ್ಗವಾಗಿ ಸಾಗಲಿದೆ. 16 ವರ್ಷದೊಳಗಿನ ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ವಿಶೇಷ ಒತ್ತು ನೀಡಲಾಗಿದ್ದು, ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ 16 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ₹100 ಹಾಗೂ 16 ವರ್ಷ ಮೇಲ್ಪಟ್ಟವರಿಗೆ ₹200 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಾಳಿಗೆ ಟಿ-ಶರ್ಟ್, ಕ್ಯಾಪ್, ಲಘು ಉಪಾಹಾರ ನೀಡಲಾಗುವುದು ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.ಕಳೆದ ವರ್ಷ ಒಟ್ಟು ₹70,000 ಬಹುಮಾನ ನೀಡಲಾಗಿತ್ತು. ಆದರೆ, ಈ ಬಾರಿ ಸ್ಪರ್ಧಾಳುಗಳ ಉತ್ಸಾಹ ಹೆಚ್ಚಿಸಲು ಬಹುಮಾನದ ಮೊತ್ತ ಏರಿಕೆ ಮಾಡಲಾಗಿದೆ. ಈ ಬಾರಿ 8,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅಥವಾ ಸ್ಪಾಟ್ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು. ನಗರಸಭೆಯ ಎದುರು ಆಫ್‌ಲೈನ್ ನೋಂದಣಿಗೂ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಖಜಾಂಚಿ ರತ್ನಾಕರ ಅಂಬಿಗ, ಧರ್ಮೇಶ ಥನ್ನಾ, ಜೀತೇಂದ್ರ ಥನ್ನಾ ಹಾಗೂ ಶಿವಾನಂದ ಇದ್ದರು.