ರೋಟರಿ ಸಂಸ್ಥೆಯಿಂದ ಕಸದ ಡಬ್ಬಿ ವಿತರಣೆ

KannadaprabhaNewsNetwork | Published : Jun 30, 2025 12:34 AM

ಚಿಕ್ಕಮಗಳೂರು ಹಾಗೂ ಬೇಲೂರಿಗೆ ಆಗಮಿಸುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಲಾಶಯಕ್ಕೆ ತೆರಳಿದಾಗ ಹೊರಗಡೆಯಿಂದ ತಂದ ತಿಂಡಿ- ತಿನಿಸುಗಳ ಕವರ್, ನೀರಿನ ಬಾಟಲ್ ಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದರು. ಇದರಿಂದ ತುಂಬಾ ತೊಂದರೆ ಉಂಟಾಗುತ್ತಿತ್ತು . ಈಗ ನೀಡಿರುವ ಪ್ಲಾಸ್ಟಿಕ್ ಸಂಗ್ರಹಣ ಡಬ್ಬ ಉಪಯೋಗಕ್ಕೆ ಬರುತ್ತದೆ. ರೋಟರಿ ಸಂಸ್ಥೆ ಅನೇಕ ಸೇವಾ ಕಾರ್ಯಕ್ರಮಗಳಲ್ಲಿ ಯಶಸ್ಸು ಸಾಧಿಸಿ ಮುನ್ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಪ್ಲಾಸ್ಟಿಕ್‌ನಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ತಪ್ಪಿಸಲು ಯಗಚಿ ಜಲಾಶಯದ ಆವರಣದಲ್ಲಿ ಕಬ್ಬಿಣದ ಕಸ ಸಂಗ್ರಹಣ ಡಬ್ಬಿಯನ್ನು ರೋಟರಿ ಕ್ಲಬ್ ವತಿಯಿಂದ ವಿತರಿಸಲಾಗಿದೆ ಎಂದು ಅಧ್ಯಕ್ಷ ಶಂಭೂಗೌಡ ಹೇಳಿದರು.

ಯಗಚಿ ಜಲಾಶಯದ ಆವರಣದಲ್ಲಿ ಪ್ಲಾಸ್ಟಿಕ್ ನಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ಮಾರಕವಾಗಿದೆ. ಹಸು, ಬೆಕ್ಕು, ನಾಯಿ ಇತ್ಯಾದಿ ಪ್ರಾಣಿಗಳು ಪ್ಲಾಸ್ಟಿಕ್ ಚೀಲಗಳನ್ನು ತಿನ್ನುವುದರಿಂದ ಅವು ಹೊಟ್ಟೆಗೆ ಸೇರಿ ಪ್ರಾಣಕ್ಕೆ ಕುತ್ತು ಬರುವ ಪರಿಸ್ಥಿತಿ ಉಂಟಾಗಿದೆ. ಜೊತೆಗೆ ಪರಿಸರದ ಮೇಲೂ ಹೆಚ್ಚು ಪ್ರಭಾವ ಬೀರುತ್ತಿದೆ. ಯಗಚಿ ಜಲಾಶಯಕ್ಕೆ ಆಗಮಿಸುವ ಪ್ರವಾಸಿಗರು ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ ಗಳನ್ನು ಎಲ್ಲೆಂದರಲ್ಲಿ ಬಿಸಾಕದೆ ಕಸ ಸಂಗ್ರಹಣದ ಬಾಕ್ಸ್ ನಲ್ಲಿ ಹಾಕುವಂತೆ ಮನವಿ ಮಾಡಿದರು.

ಯಗಚಿ ಜಲಾಶಯದ ಇಂಜಿನಿಯರ್ ಶಿವಕುಮಾರ್ ಮಾತನಾಡಿ, ಚಿಕ್ಕಮಗಳೂರು ಹಾಗೂ ಬೇಲೂರಿಗೆ ಆಗಮಿಸುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಲಾಶಯಕ್ಕೆ ತೆರಳಿದಾಗ ಹೊರಗಡೆಯಿಂದ ತಂದ ತಿಂಡಿ- ತಿನಿಸುಗಳ ಕವರ್, ನೀರಿನ ಬಾಟಲ್ ಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದರು. ಇದರಿಂದ ತುಂಬಾ ತೊಂದರೆ ಉಂಟಾಗುತ್ತಿತ್ತು . ಈಗ ನೀಡಿರುವ ಪ್ಲಾಸ್ಟಿಕ್ ಸಂಗ್ರಹಣ ಡಬ್ಬ ಉಪಯೋಗಕ್ಕೆ ಬರುತ್ತದೆ. ರೋಟರಿ ಸಂಸ್ಥೆ ಅನೇಕ ಸೇವಾ ಕಾರ್ಯಕ್ರಮಗಳಲ್ಲಿ ಯಶಸ್ಸು ಸಾಧಿಸಿ ಮುನ್ನಡೆಯುತ್ತಿದೆ ಎಂದರು.

ರೋಟರಿ ಕ್ಲಬ್ ಕಾರ್ಯದರ್ಶಿ ಬಿ. ಬಿ. ಶಿವರಾಜು ಮಾತನಾಡಿ, ರೋಟರಿ ಸಂಸ್ಥೆಯಿಂದ ತಾಲೂಕಿನಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸೇರಿದಂತೆ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದೆ. ತಾಲೂಕಿನಲ್ಲಿ ಹಲವಾರು ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.

ರೋಟರಿ ಕ್ಲಬ್ ಕಾರ್ಯದರ್ಶಿ ಬಿ. ಬಿ. ಶಿವರಾಜು, ಹಿರಿಯ ರೋಟರಿ ಸದಸ್ಯರಾದ ಬಿ. ಎಲ್. ರಾಜೇಗೌಡ, ಮೊಗಪ್ಪಾಗೌಡ, ವಿನೋದ್ ಗೌಡ, ಪುಟ್ಟರಾಜು, ಎಚ್. ಕೆ. ರಮೇಶ್ ಸೇರಿದಂತೆ ಜಲಾಶಯದ ಸಿಬ್ಬಂದಿ ಇದ್ದರು.