ರೋಟರಿ ವುಡ್ಸ್‌ನಿಂದ ಮೂರ್ನಾಡಿನಲ್ಲಿ ಕ್ಯಾನ್ಸರ್ ತಪಾಸಣಾ ಉಚಿತ ಶಿಬಿರ

KannadaprabhaNewsNetwork |  
Published : Oct 29, 2025, 11:00 PM IST

ಸಾರಾಂಶ

ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಲು ಉತ್ತಮ ಆರೋಗ್ಯ ಕಾಳಜಿಯೂ ಮುಖ್ಯ ಪಾತ್ರ ವಹಿಸುತ್ತದೆ ಎಂದು ಬಾರಿಕೆ ದಿನೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ದೇವರು ಕೊಟ್ಟಿರುವ ಮಹತ್ವದ ವರವಾಗಿರುವ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಲು ಉತ್ತಮ ಆರೋಗ್ಯ ಕಾಳಜಿಯೂ ಮುಖ್ಯ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಹೇಳಿದ್ದಾರೆ.ಮೂರ್ನಾಡುವಿನ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಡಿಕೇರಿಯ ರೋಟರಿ ವುಡ್ಸ್, ಕೊಡಗು ಔಷಧಿ ವ್ಯಾಪಾರಸ್ಥರ ಸಂಘ, ಮೂರ್ನಾಡು ಗ್ರಾಮ ಪಂಚಾಯತ್ ಮತ್ತು ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ಆಯೋಜಿತ ಕ್ಯಾನ್ಸರ್ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ದೇಹವನ್ನೇ ದೇಗುಲ ಎಂದು ಭಾವಿಸುತ್ತೇವೆ. ಹೀಗಿರುವಾಗ ದೇವಾಲಯದಂತೆಯೇ ನಮ್ಮ ದೇಹದ ಆರಾಧನೆಯೂ ಮುಖ್ಯ ಪಾತ್ರ ವಹಿಸುತ್ತದೆ. ನಿಯಮಿತವಾದ ಆಹಾರ ಸೇವನೆ, ವ್ಯಾಯಾಮ, ಸೂಕ್ತ ಆರೋಗ್ಯ ತಪಾಸಣೆ ಮೂಲಕ ನಮ್ಮ ದೇಹವನ್ನು ಆರಾಧನೆ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಬಾರಿಕೆ ದಿನೇಶ್, ರೋಗ ಬಂದಾಗ ಮಾತ್ರ ಆಸ್ಪತ್ರೆಗೆ ಹೋಗುವ ಮನೋಭಾವ ಬದಲಾಗಿ, ಆಗಿಂದಾಗ್ಗೆ ಆರೋಗ್ಯ ತಪಾಸಣೆ ಕೈಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶಿಬಿರಗಳು ಸಮಾಜದ ಪಾಲಿಗೆ ಉತ್ಸವ:

ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘಟನಾ ಕಾರ್ಯದರ್ಶಿ, ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ, ಹಬ್ಬಗಳು ಶುಭಸಮಾರಂಭಗಳು ನಮ್ಮ ಜೀವನಕ್ಕೆ ನೆಮ್ಮದಿ, ಸಂತೋಷ ನೀಡಿದರೆ, ಇಂಥ ಆರೋಗ್ಯ ಶಿಬಿರಗಳು ಸಮಾಜದ ಪಾಲಿಗೆ ನಿಜವಾದ ಉತ್ಸವಗಳಾಗಿ ಕಾಣುತ್ತವೆ. ಇಂಥ ಶಿಬಿರಗಳ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ತೋರವುದೇ ಮತ್ತೊಂದು ಸಂಭ್ರಮವಾಗಬೇಕಾಗಿದೆ ಎಂದು ಹೇಳಿದರು.

ರೋಟರಿ ಜಿಲ್ಲೆ 3181 ನ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಕ್ಷಕ್ಷ ಅನಿಲ್ ಎಚ್‌.ಟಿ. ಮಾತನಾಡಿ, ರೋಟರಿ ಸಂಸ್ಥೆಗಳು ವಿಶ್ವವ್ಯಾಪಿ ಆರೋಗ್ಯ ಮತ್ತು ಶಿಕ್ಷಣದ ಕಾರ್ಯಯೋಜನೆಗಳಿಗೆ ಆದ್ಯತೆ ನೀಡುತ್ತಾ ಬಂದಿವೆ. 225 ದೇಶಗಳಲ್ಲಿನ 45 ಸಾವಿರ ರೋಟರಿ ಸಂಸ್ಥೆಗಳು ಕ್ಯಾನ್ಸರ್ ನಂಥ ಮಾರಕ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಸಮರೋಪಾದಿಯಲ್ಲಿ ಹಮ್ಮಿಕೊಂಡಿದೆ. ರೋಟರಿ ವುಡ್ಸ್ ಈ ನಿಟ್ಟಿನಲ್ಲಿ ಮೂರ್ನಾಡು ಪಂಚಾಯತ್ ವ್ಯಾಪ್ತಿಯಲ್ಲಿ ಜನರಿಗೆ ಮಾಹಿತಿ ನೀಡಲು ಇಂಥ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು.

ರೋಟರಿ ವಲಯ 6 ರ ಸಹಾಯಕ ಗವರ್ನರ್ ಧಿಲನ್ ಚಂಗಪ್ಪ ಮಾತನಾಡಿ, ಸಮುದಾಯ ಸೇವಾ ಚಟುವಟಿಕೆಗಳಿಗೆ ಪ್ರಸಿದ್ಧಿಯಾಗಿರುವ ರೋಟರಿ ಸಂಸ್ಥೆಗಳು ಪೊಲೀಯೋ ನಿರ್ಮೂಲನೆಯಲ್ಲಿಯೂ ಜಾಗತಿಕವಾಗಿ ಪ್ರಮುಖ ಪಾತ್ರ ವಹಿಸಿವೆ. ಪಾಕಿಸ್ತಾನ ಮತ್ತು ಅಫಘಾನಿಸ್ತಾನ ಹೊರತು ಪಡಿಸಿದಂತೆ ಜಾಗತಿಕವಾಗಿ ಎಲ್ಲಾ ದೇಶಗಳಲ್ಲಿ ಪೊಲೀಯೋ ನಿರ್ಮೂಲನೆಯಾಗುವಲ್ಲಿ ರೋಟರಿಯ ಪಾತ್ರ ಮಹತ್ವದ್ದು ಎಂದರು.ಕಾಂತೂರು ಮೂರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಕುಶನ್ ರೈ ಮಾತನಾಡಿ, ಮೂರ್ನಾಡು ಪಟ್ಟಣದಲ್ಲಿ ಮೊದಲ ಬಾರಿಗೆ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ರೋಟರಿ ವುಡ್ಸ್ ಬಗ್ಗೆ ಶ್ಲಾಘಿಸಿದರು. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮೂರ್ನಾಡು ಪಂಚಾಯತ್ ಸದಾ ಜತೆಗೂಡಲಿದೆ ಎಂದೂ ಭರವಸೆ ನೀಡಿದರು.

ಸ್ವಾರ್ಥ ರಹಿತ ಸೇವೆಗೆ ರೋಟರಿ ಮಾದರಿ: ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಮಾತನಾಡಿ, ಸ್ವಾರ್ಥ ರಹಿತ ಸೇವೆಗೆ ರೋಟರಿ ಮಾದರಿಯಾಗಿದೆ. ಹೀಗಾಗಿಯೇ ರೋಟರಿ 120 ವರ್ಷಗಳಿಂದ ಜಾಗತಿಕವಾಗಿ ಅತ್ಯಂತ ಜನಮನ್ನಣೆ ಗಳಿಸಿ ಪ್ರಬಲ ಸಂಸ್ಥೆಯಾಗಿ ಮುಂದುವರೆದಿದೆ ಎಂದರು. ಮತ್ತಷ್ಟು ಗ್ರಾಮೀಣ ಭಾಗಗಳಲ್ಲಿ ರೋಟರಿ ವುಡ್ಸ್ ಆರೋಗ್ಯ ಚಿಕಿತ್ಸಾ ಶಿಬಿರ ಆಯೋಜಿಸಲಿದೆ ಎಂದೂ ಕಿರಣ್ ಕುಂದರ್ ಹೇಳಿದರು.ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ವಂದಿಸಿದ ಕಾರ್ಯಕ್ರಮವನ್ನು ವುಡ್ಸ್ ನಿರ್ದೇಶಕ ವಸಂತ್ ಕುಮಾರ್ ನಿರೂಪಿಸಿದರು. ರೋಟರಿ ವುಡ್ಸ್ ನ ಶಿಬಿರ ಸಂಚಾಲಕ ಚಂದ್ರಶೇಖರ್, ಮೈಸೂರು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ರೆಜಿಲ್ ರಜನ್ ಹಾಜರಿದ್ದರು.

ರೋಟರಿ ವುಡ್ಸ್, ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ನಿರ್ದೇಶಕರು, ಗ್ರಾಮ ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!