ರಿಯಾಜಅಹ್ಮದ ಎಂ ದೊಡ್ಡಮನಿ ಡಂಬಳ
ಸಮ ಸಮಾಜ ನಿರ್ಮಿಸಬೇಕು, ಮೇಲು- ಕೀಳು, ಬಡವ- ಬಲ್ಲಿದ ಎಂಬ ಭಾವನೆ ಇಲ್ಲದೇ ಜಾತ್ಯತೀತ, ಧರ್ಮಾತೀತವಾಗಿ ಎಲ್ಲರೂ ಜೊತೆಯಲ್ಲಿ ಕುಳಿತು ಸಹ ಪಂಕ್ತಿಯಿಂದ ಭೋಜನ ಮಾಡಬೇಕೆಂಬ ವಿಶಾಲ ಮನೋಭಾವನೆಯಿಂದ ತೋಂಟದಾರ್ಯ ಮಠದ ಲಿಂ.ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿಗಳು ಆರಂಭಿಸಿ ಭಾರೀ ಯಶ ಕಂಡು ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಕಾಣುತ್ತಿರುವ ರೊಟ್ಟಿ ಜಾತ್ರೆ ಶುಕ್ರವಾರ ಡಂಬಳದ ತೋಂಟದಾರ್ಯ ಮಠದಲ್ಲಿ ನಡೆಯಲಿದೆ.ಲಿಂ. ಡಾ.ತೋಂಟದ ಸಿದ್ದಲಿಂಗ ಶ್ರೀಗಳ ದೂರದೃಷ್ಟಿಯ ದ್ಯೋತಕವಾಗಿ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ನೇತೃತ್ವದಲ್ಲಿ ಬಸವಣ್ಣನವರ ತತ್ವದಡಿ ಜಾತಿ, ಮತ, ಪಂಥ ತೊಲಗಿಸುವ ಮೂಲಕ ಭಾವೈಕ್ಯತೆ ಮೂಡಿಸುವ ಹಿನ್ನೆಲೆ ರೊಟ್ಟಿ ಜಾತ್ರೆ ಜರುಗಲಿದೆ.
ಡಾ.ತೋಂಟದ ಸಿದ್ಧರಾಮ ಶ್ರೀಗಳ ಸಾನ್ನಿಧ್ಯದಲ್ಲಿ ತೋಂಟದಾರ್ಯ ಮಠದ 285ನೇ ಜಾತ್ರಾಮಹೋತ್ಸವ ನಿಮಿತ್ತ ರೊಟ್ಟಿ ಜಾತ್ರೆ ನಡೆಯಲಿದೆ. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸೇರಿ ರೊಟ್ಟಿ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸುತ್ತಾರೆ. ಇದೇ ವೇಳೆ ಡೊಳ್ಳಿನ ಪದ, ಲಂಬಾಣಿ ಪದ ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.25 ಕ್ವಿಂಟಲ್ ಜೋಳದ ಹಿಟ್ಟು: ಈಗಾಗಲೇ ಪ್ರಸಾದಕ್ಕೆ ಬೇಕಾಗುವ ಸಿದ್ಧತೆ ಆರಂಭವಾಗಿದ್ದು, ಜಾತಿ ಬೇಧವಿಲ್ಲದೆ ಪ್ರತಿ ಮನೆಯಿಂದ 100 ರಿಂದ 150 ಕ್ಕೂ ಹೆಚ್ಚು ರೊಟ್ಟಿ ಸಿದ್ಧಪಡಿಸಿ ಮಠಕ್ಕೆ ತಂದು ಕೊಡುತ್ತಾರೆ. ಈ ಬಾರಿ ಮಠದಿಂದ 25 ಕ್ವಿಂಟಲ್ ಜೋಳದ ಹಿಟ್ಟನ್ನು ಡಂಬಳ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ನೂರಾರು ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಮಹಿಳೆಯರಿಗೆ ನೀಡಲಾಗಿದೆ. ಅವರು ಸ್ವಯಂ ಪ್ರೇರಣೆಯಿಂದ ರೊಟ್ಟಿ ತಯಾರಿಸಿಕೊಂಡು ಮಠಕ್ಕೆ ನೀಡಿದ್ದಾರೆ. ಅಲ್ಲದೆ ಡೋಣಿ, ಡೋಣಿ ತಾಂಡಾ, ಹೈತಾಪುರ, ರಾಮೇನಳ್ಳಿ, ಯಕ್ಲಾಸಪುರ ಮತ್ತಿತರ ಗ್ರಾಮಗಳಿಂದ ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ರೊಟ್ಟಿಗಳನ್ನು ತರಲಾಗುತ್ತದೆ.
ಕರಿ ಹಿಂಡಿ, ಬಾನದ ವಿಶೇಷ: ಜಾತ್ರೆಯಲ್ಲಿ ಅನ್ನದಿಂದ ಬಾನ ಮತ್ತು ಕರಿ ಹಿಂಡಿ ಮಾಡುವುದು ವಿಶೇಷ, ಎಲ್ಲ ತರಹದ ತರಕಾರಿ, ಅಕ್ಕಿ, ಶುಂಠಿ, ಕರಿಬೇವು, ಕೊತ್ತಂಬರಿ, ಮೆಣಸಿನಕಾಯಿಯಿಂದ ಕರಿಹಿಂಡಿ ತಯಾರಿಸಲಾಗುತ್ತದೆ. ಇದರ ಜತೆಗೆ ಅನ್ನದ ಬಾನವನ್ನು ಮೊಸರಿನಿಂದ ಸಿದ್ಧಪಡಿಸುತ್ತಾರೆ. ಅಗಸಿ, ಗುರೆಳ್ಳಿನ ಹಿಂಡಿ ಸವಿಯಲು ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.ಈ ರೊಟ್ಟಿ ಜಾತ್ರೆ ಯಶಸ್ಸಿಗೆ ಸತತ ಎರಡು ತಿಂಗಳಿಂದ ಜಾತ್ರಾ ಸಮಿತಿಯ ಅಧ್ಯಕ್ಷ ಭೀಮಪ್ಪ ಗದಗ ಸೇರಿದಂತೆ ಸರ್ವ ಸದಸ್ಯರು, ಹಿರಿಯರು, ಯುವಕರು ಶ್ರಮಿಸುತ್ತಿದ್ದಾರೆ.
ಫೆ.14ರಂದು ನಡೆಯುವ ರೊಟ್ಟಿ ಜಾತ್ರೆಗೆ 25 ಕ್ವಿಂಟಲ್ ಹಿಟ್ಟಿನಿಂದ 45 ಸಾವಿರ ರೊಟ್ಟಿ ಸಿದ್ಧಪಡಿಸಿದ್ದು, ಜತೆಗೆ 2050 ಸಿವುಡು ಪುಂಡಿ ಸೊಪ್ಪು, 500 ಸಿವುಡು ಹುಂಚಿಕ್ಕು ಸೊಪ್ಪು, 500 ಸಿವುಡು ಸಬ್ಬಸಗಿ ಸೊಪ್ಪು, 500 ಸಿವುಡು ಪಾಲಕ ಸೊಪ್ಪು ಹಾಗೂ ಶೇಂಗಾ, ವಠಾಣಿ, ಹೆಸರು ಸೇರಿದಂತೆ ಇತರೆ ಕಾಳುಗಳಿಂದ ಪಲ್ಲೆ ಸಿದ್ಧಪಡಿಸಲಾಗುತ್ತದೆ. 15 ಕ್ವಿಂಟಲ್ ಕರಿಹಿಂಡಿ, 1 ಕ್ವಿಂಟಲ್ ಅಗಸಿ ಹಿಂಡಿ, ಅನ್ನದಿಂದ 8 ಕ್ವಿಂಟಲ್ ಬಾನ ಸಿದ್ಧಗೊಳ್ಳಲಿದೆ.ವೈಚಾರಿಕ ವೈಶಿಷ್ಟ್ಯದ ಮೂಲಕ ಜಾತಿ, ಮತ, ಪಂಥ ಬೇಧಭಾವ ತೊರೆಯುವ ನಿಟ್ಟಿನಲ್ಲಿ ರೊಟ್ಟಿ ಜಾತ್ರೆಯ ಮೂಲಕ ಸಮ ಸಮಾಜ ಕಟ್ಟಲು ಮತ್ತು ಮಠದಲ್ಲಿ ಮಹಾತ್ಮರ, ದಾರ್ಶನಿಕರ, ಸಂತರ, ಆದರ್ಶ ಮೌಲ್ಯಗಳನ್ನು ಶಿವಾನುಭಗಳಲ್ಲಿ ನೆನೆದು ಭಕ್ತರ ನೆತ್ತಿಗೆ ಜ್ಞಾನದ ಬುತ್ತಿ ತುಂಬಿ ಮಹಾತ್ಮರ ವಿಚಾರಧಾರೆಗಳನ್ನು ನವ ಸಮಾಜಕ್ಕೆ ತಿಳಿಸುವ ಕೆಲಸ ನಿರಂತರವಾಗಿ ಮಾಡುತ್ತಿರುವ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯ ಮಹತ್ವಪೂರ್ಣವಾದದ್ದು ಎಂದು ರಾಜ್ಯ ರೈತ ಪ್ರಶಸ್ತಿ ಪುರಸ್ಕೃತ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ ತಿಳಿಸಿದ್ದಾರೆ.ಜಾತ್ಯತೀತ ಸಮಾಜ ಕಟ್ಟುವುದಕ್ಕಾಗಿ, ಸಮಾಜಗಳಲ್ಲಿ ಅಡಗಿರುವ ಅಂಧಕಾರ, ಮೌಢ್ಯ ಹೊಡೆದೋಡಿಸುವ ಸಲುವಾಗಿ ರೊಟ್ಟಿ ಜಾತ್ರೆಯನ್ನು ಲಿಂ.ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ಆರಂಭಿಸಿದರು. ಈ ಬಾರಿ ಡಾ. ತೋಂಟದ ಸಿದ್ದರಾಮ ಶ್ರೀಗಳು ವೈಜ್ಞಾನಿಕ ವೈಚಾರಿಕತೆ ಹೊಂದುವಂತೆ ಮೌಢ್ಯ, ಕಂದಾಚಾರ, ಬಡತನ ನಿರ್ಮೂಲನೆಗೆ ಏಕೈಕ ಶಕ್ತಿ ಶಿಕ್ಷಣ, ಆಧುನಿಕ ಜಾತಿ, ಅನಿಷ್ಟ ಪದ್ಧತಿ ಹೋಗಲಾಡಿಸುವ ದೂರದೃಷ್ಟಿಯ ಮೂಲಕ ಸಮ ಸಮಾಜ ನಿರ್ಮಿಸುವ ಜಾತ್ರೆಯನ್ನಾಗಿಸುತ್ತಿರುವುದು ಸಂತೋಷ ಮೂಡಿಸಿದೆ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಗೌಸಿದ್ಧಪ್ಪ ಬಿಸನಳ್ಳಿ ತಿಳಿಸಿದ್ದಾರೆ.