-ಎಸಿ ಡಾ. ಮೈತ್ರಿ ಭೇಟಿ, ಸ್ವಚ್ಛತೆ ಪರಿಶೀಲನೆ। ಜ್ಯೂಸ್ ಸೆಂಟರ್ ಸೀಜ್
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದುರ್ಗಿಗುಡಿಯ ರಾಘವೇಂದ್ರ ಸ್ವಾಮಿ ಮಠದ ಎದುರಿನಲ್ಲಿರುವ ಜ್ಯೂಸ್ ಸೆಂಟರ್‌ನಲ್ಲಿ ಕೊಳೆತ ಹಣ್ಣುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಜ್ಯೂಸ್ ಸೆಂಟರ್‌ನ್ನು ಸೀಜ್ ಮಾಡಿದ ಘಟನೆ ನಡೆದಿದೆ.ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದಲ್ಲಿ ಮಂಗಳವಾರ ನಡೆದ ಆಹಾರ ಮಳಿಗೆಗಳ ತಪಾಸಣೆಯಲ್ಲಿ ತನು ಜ್ಯೂಸ್ ಸೆಂಟರ್‌ನಲ್ಲಿ ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಲೋಪಗಳು ಕಂಡುಬಂದಿವೆ.
ದಾಳಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಡಾ.ಮೈತ್ರಿ ಅವರು, ಆಹಾರ ಮಳಿಗೆಗಳಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ ಮಾರ್ಗಸೂಚಿಗಳಂತೆ ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಹಲವು ಆಹಾರ ಮಳಿಗೆಗಳಲ್ಲಿ ಸ್ವಚ್ಛತೆಯ ಕೊರತೆ ಕಂಡು ಬಂದಿದ್ದು, ವಿಶೇಷವಾಗಿ ಅಡುಗೆ ಪ್ರದೇಶ, ಪಾತ್ರೆ ತೊಳೆಯುವ ಸ್ಥಳ ಹಾಗೂ ಇತರ ಪ್ರದೇಶಗಳಲ್ಲಿ ಗಲೀಜು ಕಂಡುಬಂದಿದೆ. ಕೆಲವು ಕಡೆ ಜಿರಳೆಗಳು ಓಡಾಡುತ್ತಿರುವುದು ಕೂಡ ಪತ್ತೆಯಾಗಿದೆ ಎಂದು ತಿಳಿಸಿದರು.
ಈ ಅವಧಿಯ ಬಳಿಕ ಮತ್ತೆ ಪರಿಶೀಲನೆ ನಡೆಸಲಾಗುವುದು. ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಆಹಾರ ಪರವಾನಗಿ ರದ್ದುಪಡಿಸಲು ಯಾವುದೇ ಹಿಂಜರಿಕೆ ಇಲ್ಲ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ: ಕೆಲವು ಕಡೆ ಕೊಳೆತ ಮೀನು ಪತ್ತೆಯಾಗಿದ್ದು, ಅದರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ಆಹಾರ ಸುರಕ್ಷತೆ ಕುರಿತು ಈಗಾಗಲೇ ಆಹಾರ ಸುರಕ್ಷತಾ ಸಂಸ್ಥೆಯಿಂದ ಕಾರ್ಯಾಗಾರ ನಡೆಸಿ, ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಆಹಾರ ಮಳಿಗೆಗಳ ಮಾಲೀಕರಿಗೆ ತರಬೇತಿ ಮತ್ತು ಮಾರ್ಗಸೂಚಿಗಳನ್ನು ನೀಡಲಾಗಿದೆ. ಆದರೂ ಕೆಲವು ಕಡೆ ನಿರ್ಲಕ್ಷ್ಯ ಮುಂದುವರಿದಿರುವುದು ಕಂಡುಬಂದಿದ್ದು, ಇದನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಸ್ಟ್ರೀಟ್ ಫುಡ್ ಸೆಂಟರ್‌ಗಳ ಮೇಲೂ ನಿಗಾ: ಪಾನಿಪುರಿ, ಚಾಟ್ಸ್, ಬೋಂಡಾ-ಬಜ್ಜಿ ಸೇರಿದಂತೆ ರಸ್ತೆ ಬದಿಯ ಆಹಾರ ಮಳಿಗೆಗಳ ಮೇಲೂ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಟಿಹೆಚ್‌ಓ ತಂಡ ನಿಯಮಿತವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದರು.ಆಹಾರ ಪದಾರ್ಥಗಳಲ್ಲಿ ಬಣ್ಣಗಳು, ಟೇಸ್ಟಿಂಗ್ ಪೌಡರ್ ಹಾಗೂ ಇತರ ಪದಾರ್ಥಗಳ ಬಳಕೆಯ ಮೇಲೂ ನಿಗಾ ವಹಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಆಹಾರ ಮಾರಾಟ ಮಾಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
15 ದಿನಗಳ ಬಳಿಕ ಮತ್ತೆ ಪರಿಶೀಲನೆ: 15 ದಿನಗಳ ಬಳಿಕ ಇದೇ ಪ್ರದೇಶಗಳಲ್ಲಿ ಫಾಲೋಅಪ್ ತಪಾಸಣೆ ನಡೆಸಲಾಗುವುದು. ಈ ಹಿಂದೆ ಪರಿಶೀಲನೆ ನಡೆಸಿದ್ದ ಹೋಟೆಲ್‌ಗಳು ಹಾಗೂ ಇತರ ಆಹಾರ ಕೇಂದ್ರಗಳ ಮೇಲೂ ನಿರಂತರ ನಿಗಾ ಮುಂದುವರಿಯಲಿದೆ.ಆಹಾರ ಮಾದರಿಗಳ ಪರೀಕ್ಷಾ ವರದಿಯಲ್ಲಿ ನಕಾರಾತ್ಮಕ ಫಲಿತಾಂಶ ಬಂದರೆ, ಸಂಬಂಧಪಟ್ಟ ಮಳಿಗೆಗಳ ವಿರುದ್ಧ ಸೀಜರ್ ಹಾಗೂ ಪರವಾನಗಿ ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪೋಟೋ: 15ಎಸ್‌ಎಂಜಿಕೆಪಿ09ಶಿವಮೊಗ್ಗ ನಗರದ ದುರ್ಗಿಗುಡಿಯ ರಾಘವೇಂದ್ರ ಸ್ವಾಮಿ ಮಠದ ಎದುರಿನಲ್ಲಿರುವ ತನು ಜ್ಯೂಸ್ ಸೆಂಟರ್‌ಗೆ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದಲ್ಲಿ ಮಂಗಳವಾರ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಲಾಯಿತು.