ಕನ್ನಡಪ್ರಭ ವಾರ್ತೆ ಮೈಸೂರುನಗರದ ಅರಮನೆ ಆವರಣದಲ್ಲಿ ಡಿ. 20 ರಂದು ಸಂಜೆ 4 ಗಂಟೆಗೆ ಸ್ತುತಿ ಶಂಕರ- ಸ್ತೋತ್ರ ಮಹಾ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಸುಮಾರು 20 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸ್ತುತಿ ಶಂಕರ ಸಂಚಾಲನ ಸಮಿತಿ ಕಾರ್ಯಾಧ್ಯಕ್ಷ ಸುಧಾಕರ ಶೆಟ್ಟಿ ತಿಳಿಸಿದರು.ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಭಾರತೀ ತೀರ್ಥ ಸ್ವಾಮೀಜಿಯ ಸನ್ಯಾಸ ಸ್ವೀಕಾರದ 50ನೇ ವರ್ಷದ ಅಂಗವಾಗಿ ಸುವರ್ಣ ಭಾರತೀ ಶೀರ್ಷಿಕೆ ಅಡಿಯಲ್ಲಿ ಈ ಕಲ್ಯಾಣವೃಷ್ಠಿ ಮಹಾಭಿಯಾನ ಸ್ತೋತ್ರ ಸಮರ್ಪಣಾ ಕಾರ್ಯಕ್ರಮವನ್ನು ಸ್ತುತಿ ಶಂಕರ ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.ಶೃಂಗೇರಿ ಜಗದ್ಗುರು ಶಂಕರಾಚಾರ್ಯ ವಿಧು ಶೇಖರ ಭಾರತೀ ಸನ್ನಿಧಾನಂಗಳವರ ಸಾನ್ನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕೆ.ಆರ್. ನಗರ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧೀಶರಾದ ವೇದಾಂತ ಭಾರತೀ ಸ್ವಾಮೀಜಿ, ಬ್ರಹ್ಮಾನಂದ ಭಾರತೀ ಸ್ವಾಮೀಜಿ, ರಾಜ ವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಹಕಾರ ನೀಡುತ್ತಿದ್ದಾರೆ. ಜಿಲ್ಲೆಯಾದ್ಯಂತ ಕಳೆದ ಒಂದು ವರ್ಷದಿಂದ ಮಾತೆಯರು, ಮಹನೀಯರು, ವಿದ್ಯಾರ್ಥಿಗಳು ಸೇರಿ ಶ್ರೀ ಶಂಕರಾಚಾರ್ಯ ವಿರಚಿತ ಕಲ್ಯಾಣವೃಷ್ಟಿಸ್ತವ ಶಿವ ಪಂಚಾಕ್ಷರಿ ನಕ್ಷತ್ರ ಮಾಲಾ ಹಾಗೂ ಲಕ್ಷ್ಮೀ ನೃಸಿಂಹ ಕರುಣಾರಸ ಸ್ತೋತ್ರ ಅಭ್ಯಾಸ ಮಾಡಿದ್ದು, ಅಂದಿನ ಕಾರ್ಯಕ್ರಮದಲ್ಲಿ ಈ ರೀತಿಯ ಸುಮಾರು 30 ಸಾವಿರ ಮಂದಿ ಅರಮನೆ ಆವರಣದಲ್ಲಿ ಸೇರಿ ಪಠಿಸುವುದಾಗಿ ಹೇಳಿದರು.ಇವರಿಗೆ ಮ್ಯಾಟ್, ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಅರಮನೆ ಪೂರ್ವ ಮುಖ್ಯ ದ್ವಾರ, ಉತ್ತರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದ್ವಾರ, ದಕ್ಷಿಣದ ವರಾಹ ದ್ವಾರಗಳ ಮೂಲಕ ಪ್ರವೇಶವಿದೆ ಎಂದು ಅವರು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಆರ್. ರಘು, ಶ್ರೀಹರಿ ದ್ವಾರಕಾನಾಥ್, ಮಂಜುನಾಥ್ ಶ್ರೀವತ್ಸ ಇದ್ದರು.