ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಗೆ ಭಾನುವಾರ ಆಗಮಿಸಿದ ಪೂರ್ವ ಆಫ್ರಿಕಾದ ರೊವಾಂಡಾ ದೇಶದ ಹೈಕಮಿಷನರ್ ಜಾಕ್ವೆಲಿನ್ ಮುಕಂಜಿರಾ ಅವರು ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಜಾಕ್ವೆಲಿನ್ ಅವರನ್ನು ಬರಮಾಡಿಕೊಂಡರು. ವಿಧಾನಸಭೆ, ವಿಧಾನ ಪರಿಷತ್ ಸಭಾಂಗಣ, ಸೆಂಟ್ರಲ್, ಸಮಿತಿ ಸಭಾಂಗಣ, ಸಚಿವ ಸಂಪುಟ ಸಭಾಂಗಣವನ್ನು ವೀಕ್ಷಿಸಿದರು.ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಾರ್ಯಚಟುವಟಿಕೆಗಳ ಮತ್ತು ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಳ ಅಧಿವೇಶನ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವಿವರಿಸಿದರು. ಲೋಕೋಪಯೋಗಿ ಇಲಾಖೆಯ ಉತ್ತರ ವಲಯದ ಮುಖ್ಯ ಎಂಜಿನಿಯರ್ ಎಚ್. ಸುರೇಶ್, ಅಪರ ಜಿಲ್ಲಾಧಿಕಾರಿ ವಿಜಕುಮಾರ ಹೊನಕೇರಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್. ಸೊಬರದ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ ಹುಲಜಿ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾಂ ಶುಗರ್ಸ್ ಗೆ ಭೇಟಿ:ಬೆಳಗಾವಿ: ತಾಲೂಕಿನ ಹುದಲಿ ಗ್ರಾಮದಲ್ಲಿನ ಬೆಳಗಾಂ ಶುಗರ್ ಸಕ್ಕರೆ ಕಾರ್ಖಾನೆಗೆ ಭಾನುವಾರ ಪೂರ್ವ ಆಫ್ರಿಕಾದ ರೊವಾಂಡಾ ದೇಶದ ಹೈ ಕಮಿಷನರ್ ಜಾಕ್ವೆಲಿನ್ ಮುಕಂಜಿರಾ ಮತ್ತು ರಾಜತಾಂತ್ರಿಕ ಮೋಹನ ಸುರೇಶ ಅವರ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿತು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ವ್ಯವಸ್ಥಾಪಕ ನಿರ್ದೇಶಕ ರಾಹುಲ ಜಾರಕಿಹೊಳಿ, ಚೇರ್ಮನ್, ಸಿ.ಎಫ್.ಒ ಪ್ರದೀಪಕುಮಾರ ಇಂಡಿ, ಹಿರಿಯ ಉಪಾಧ್ಯಕ್ಷ. ಎಲ್.ಆರ್. ಕಾರಗಿ, ಪಿ .ಡಿ. ಹಿರೇಮಠ, ಹಣಕಾಸು ವಿಭಾಗದ ಉಪಾಧ್ಯಕ್ಷ ಡಿ.ಆರ್. ಪವಾರ, ತಾಂತ್ರಿಕ ವಿಭಾಗದ ಉಪಾಧ್ಯಕ್ಷ. ವಿ.ಎಂ ತಳವಾರ, ಎ.ಎಸ್. ರಾಣಾ ತಂಡದ ಜೊತೆಗಿದ್ದರು.ನಿಯೋಗ ಕಾರ್ಖಾನೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ, ಕಾರ್ಯಚಟುವಟಿಕೆ ವೀಕ್ಷಿಸಿ, ಕಾರ್ಖಾನೆ ಅಭಿವೃದ್ಧಿಪಡಿಸುವಲ್ಲಿ ಆಡಳಿತ ಮಂಡಳಿಯ ಕಾರ್ಯವೈಖರಿ ಶ್ಲಾಘಿಸಿ, ಸ್ವಚ್ಛತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಸಂಸ್ಥಾಪಕ ಅಧ್ಯಕ್ಷ, ಸಚಿವ ಸತೀಶ ಜಾರಕಿಹೊಳಿ ನಿಯೋಗವನ್ನು ಸ್ವಾಗತಿಸಿ ಮಾತನಾಡಿ, ಪೂರ್ವ ಆಫ್ರಿಕಾದ ರೊವಾಂಡಾ ದೇಶದ ಹೈ ಕಮಿಷನರ್ ಜಾಕ್ವೆಲಿನ್ ಮುಕಂಜಿರಾ ನಿಯೋಗದ ಭೇಟಿಯಿಂದ ರೊವಾಂಡಾ ಮತ್ತು ಬೆಳಗಾವಿಯ ನಡುವಿನ ವ್ಯಾಪಾರ ಸಂಬಂಧ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಹೇಳಿದರು. ಬೆಳಗಾಂ ಶುಗರ್ಸ್ ಕಾರ್ಖಾನೆಯ ಹಿರಿಯ, ಕಿರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.