ಬರೋಬ್ಬರಿ 31 ಪ್ರಕರಣವಿದ್ದ ರೌಡಿ ಶೀಟರ್‌ ಕೊನೆಗೂ ಅಂದರ್‌!

KannadaprabhaNewsNetwork |  
Published : Feb 19, 2026, 03:00 AM IST
ಆರೋಪಿ ಸಫ್ವಾನ್‌ ಹುಸೈನ್‌ | Kannada Prabha

ಸಾರಾಂಶ

ಮಂಗಳೂರು ನಗರ ಮಾತ್ರವಲ್ಲದೆ ಉಡುಪಿ, ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಬರೋಬ್ಬರಿ 31 ಪ್ರಕರಣಗಳ ಆರೋಪಿ, ಕಳೆದ 9 ವರ್ಷದಿಂದ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ ಹಳೆಯಂಗಡಿಯ ಕೊಪ್ಪಳ ಹೌಸ್‌ನ ಸಫ್ವಾನ್‌ ಹುಸೈನ್‌ (42) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು: ಮಂಗಳೂರು ನಗರ ಮಾತ್ರವಲ್ಲದೆ ಉಡುಪಿ, ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಬರೋಬ್ಬರಿ 31 ಪ್ರಕರಣಗಳ ಆರೋಪಿ, ಕಳೆದ 9 ವರ್ಷದಿಂದ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ ಹಳೆಯಂಗಡಿಯ ಕೊಪ್ಪಳ ಹೌಸ್‌ನ ಸಫ್ವಾನ್‌ ಹುಸೈನ್‌ (42) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಎರಡು ಕೊಲೆ, 4 ಕೊಲೆ ಯತ್ನ, ಗ್ಯಾಂಗ್‌ ರೇಪ್‌, 17 ದರೋಡೆ, ಅಪಹರಣ, ಸುಲಿಗೆ, ಪೊಲೀಸ್‌ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ಸರಗಳ್ಳತನ, ಹಲ್ಲೆ, ಜೈಲಿನಲ್ಲಿ ಸಹ ಕೈದಿಗಳ ಮೇಲೆ ಹಲ್ಲೆ, ಅಕ್ರಮ ಕೂಟ ಸೇರಿ ಹಲ್ಲೆ, ಕೊಲೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ, ದರೋಡೆಗೆ ಸಂಚು ಇತ್ಯಾದಿ ಪ್ರಕರಣಗಳು ಈತನ ಮೇಲಿವೆ. ಈತನನ್ನು ಆಂಧ್ರಪ್ರದೇಶದ ರಾಯಚೋಟಿಯಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದರು.ಗಂಭೀರ ಪ್ರಕರಣಗಳು: ಸಫ್ವಾನ್‌ ಹುಸೈನ್‌ ವಿರುದ್ಧ ಮೂಲ್ಕಿ ಠಾಣೆ ವ್ಯಾಪ್ತಿಯಲ್ಲಿ 2008ರಲ್ಲಿ ಪ್ರವೀಣ್‌ ಎಂಬವರ ಅಪಹರಣ, ದರೋಡೆ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ 2020ರಲ್ಲಿ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕಾರ್ಕಳ ಠಾಣೆ ವ್ಯಾಪ್ತಿಯಲ್ಲಿ 2008ರಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ 3 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಈತನ ವಿರುದ್ಧ 13 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. 2017ರಲ್ಲಿ ಸುರತ್ಕಲ್‌ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ, ಕೊಲೆ ಮಾಡಿ ಆಗುಂಬೆ ಘಾಟಿಯಲ್ಲಿ ಎಸೆದ ಪ್ರಕರಣದಲ್ಲಿ ನೇರ ಭಾಗಿಯಾಗಿ ತಲೆಮರೆಸಿಕೊಂಡಿದ್ದ.

ನ್ಯಾಯಾಲಯದಿಂದ ತೀರ್ಪು ಪ್ರಕಟವಾದರೂ ಈತ ಶಿಕ್ಷೆಗೆ ಒಳಪಡದೆ ತಪ್ಪಿಸಿಕೊಂಡಿದ್ದ. ಈತನ ವಿರುದ್ಧ ಇನ್ನೂ 13 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಅಲ್ಲದೆ ಬೇರೆ ರಾಜ್ಯಕ್ಕೆ ತೆರಳಿ ನಕಲಿ ಗುರುತಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಬಗ್ಗೆಯೂ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಸುಧೀರ್‌ ರೆಡ್ಡಿ ತಿಳಿಸಿದರು.

ಗುಂಪು ಅತ್ಯಾಚಾರದಲ್ಲಿ ಭಾಗಿ: ದೇರಳಕಟ್ಟೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಗುಂಪು ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸಫ್ವಾನ್‌. ಆ ಪ್ರಕರಣದ ಇತರ ಆರೋಪಿಗಳ ವಿಚಾರಣೆ ಕೊನೆ ಹಂತಕ್ಕೆ ಬಂದಿದೆ. ಇದೀಗ ಪ್ರಮುಖ ಆರೋಪಿ ಸಿಕ್ಕಿದ್ದು, ವಿಚಾರಣೆ ಆರಂಭವಾಗಲಿದೆ.

ಹೆಸರು ಬದಲಿಸಿದ್ದ: ಪೊಲೀಸರಿಂದ ತಪ್ಪಿಸಿಕೊಂಡಿದ್ದ ಆರೋಪಿ ಸಫ್ವಾನ್‌ ಹುಸೈನ್‌ ಆಂಧ್ರಪ್ರದೇಶಕ್ಕೆ ತೆರಳಿ ತನ್ನ ಹೆಸರನ್ನು ಉಮ್ಮರ್‌ ಮುಹಮ್ಮದ್‌ ನಾಸಿರ್‌ ಎಂದು ಬದಲಾಯಿಸಿ ನಕಲಿ ಹೆಸರಿನಲ್ಲಿ ಆಧಾರ್‌, ಪಾಸ್‌ಪೋರ್ಟ್‌ ಮಾಡಿಸಿಕೊಂಡಿದ್ದ. ಅಲ್ಲದೆ 2016ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ. ಸೌದಿ ಅರೇಬಿಯಾದಲ್ಲಿದ್ದು, ಮಂಗಳೂರು ಮೂಲದ ವ್ಯಾಪಾರಿಗಳಿಗೆ ಹಣಕ್ಕಾಗಿ ಬೆದರಿಸಿದ ಬಗ್ಗೆ ದೂರುಗಳಿವೆ. ತನಿಖೆಯಲ್ಲಿ ದೊರೆತ ಮಾಹಿತಿ ಪ್ರಕಾರ, ನಕಲಿ ಹೆಸರಿನಲ್ಲಿ ಆತ ವಿದೇಶದಲ್ಲಿ ಸಣ್ಣ ಪುಟ್ಟ ಕೆಲಸಗಳ ಜತೆ ಚಾಲಕ ವೃತ್ತಿ ಮಾಡಿಕೊಂಡು ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಈ ಪ್ರಕರಣವನ್ನು ಡಿಸಿಪಿಯವರು ಸವಾಲಾಗಿ ಸ್ವೀಕರಿಸಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್‌ ಆಯುಕ್ತ ಸುಧೀರ್‌ ರೆಡ್ಡಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊರಗರು ಮುಖ್ಯ ವಾಹಿನಿಗೆ ಬರಲು ಪೂರ್ಣ ಸಹಕಾರ: ಗಂಟಿಹೊಳೆ
ಧರ್ಮದ ಹಾದಿಯಲ್ಲಿ ಸಾಗಿದರೆ ಪುಣ್ಯದ ಫಲ