ಭಾವಿ ಪತ್ನಿಯಿಂದಲೇ ರೌಡಿಶೀಟರ್‌ ಬರ್ಬರ ಹತ್ಯೆ

KannadaprabhaNewsNetwork | Published : Mar 27, 2025 1:03 AM

ಸಾರಾಂಶ

ಕಳೆದ ಮಾ. 23ರ ಭಾನುವಾರ ಆ್ಯಂಡರ್ ಸನ್‌ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಶಿವಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್‌ನ ಕೆಎನ್‌ಜೆ ಮತ್ತು ಎಸ್ ಬ್ಲಾಕ್‌ನ ಯುವತಿ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆಜಿಎಫ್

ಕಳೆದ ಮಾ. 23ರ ಭಾನುವಾರ ಆ್ಯಂಡರ್ ಸನ್‌ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಶಿವಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್‌ನ ಕೆಎನ್‌ಜೆ ಮತ್ತು ಎಸ್ ಬ್ಲಾಕ್‌ನ ಯುವತಿ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರೌಡಿ ಶೀಟರ್ ಶಿವಕುಮಾರ್‌ನನ್ನು ಲಾಂಗ್‌ಗಳಿಂದ ಕೊಚ್ಚಿ ಕೊಲೆ ಮಾಡಿದ ೨೪ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮೃತ ಶಿವಕುಮಾರ್ ಸ್ನೇಹಿತೆ ಸೇರಿ 4 ಮಂದಿ ಆರೋಪಿಗಳೆಲ್ಲರೂ ಅಪ್ರಾಪ್ತರು ಎನ್ನಲಾಗಿದೆ.

ಇನ್ನೆರಡು ತಿಂಗಳಲ್ಲಿ ಮೃತ ರೌಡಿ ಶೀಟರ್ ಶಿವಕುಮಾರನನ್ನು ಮದುವೆಯಾಗಲಿದ್ದ ಭಾವಿ ಪತ್ನಿಯೇ ‘ಜಾಲಿ ರೈಡ್ ಹೋಗೋಣ’ ಎಂದು ನಂಬಿಸಿ ಕರೆದುಕೊಂಡು ಹೋಗಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.

ರಾಬರ್ಟ್ಸನ್‌ಪೇಟೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ಮಾಡುತ್ತಿರುವ ಹುಡುಗಿಯೊಂದಿಗೆ ಮೃತ ಶಿವಕುಮಾರ್ ಮದುವೆ ನಿಶ್ಚಯವಾಗಿತ್ತು. ಶಿವಕುಮಾರ್‌ನೊಂದಿಗೆ ಮದುವೆಯಾಗಲು ಇಷ್ಟವಿಲ್ಲದ ಆರೋಪಿ ಯುವತಿಯು ತನ್ನದೇ ಕಾಲೇಜಿನಲ್ಲಿ ಓದುತ್ತಿರುವ ಮೂವರು ಆರೋಪಿ ಯುವಕರೊಂದಿಗೆ ಚರ್ಚಿಸಿ ತನಗೆ ಮದುವೆಯಾಗಲು ಇಷ್ಟವಿಲ್ಲದ ಕಾರಣದಿಂದ ತನಗೆ ಅಡ್ಡವಾಗಿರುವ ಶಿವಕುಮಾರ್‌ನನ್ನು ನಗರದ ಶ್ರೀ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲೇ ಹತ್ಯೆ ಮಾಡುವ ಪ್ಲ್ಯಾನ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಜಾತ್ರೆ ವೇಳೆ ಶಿವಕುಮಾರ್ ಜೊತೆಯಲ್ಲಿ ಆತನ ಸೇಹ್ನಿತರು ಇದ್ದಿದ್ದರಿಂದ ಹತ್ಯೆ ಮಾಡಲು ಸಾಧ್ಯವಾಗಿರಲಿಲ್ಲ. ನಂತರ ಕಾಮಸಮುದ್ರ ರಸ್ತೆಯಲ್ಲಿರುವ ಆಂತೋಣಿಯರ್ ಚರ್ಚ್ ವ್ಯಾಪ್ತಿ ನಡೆಯುತ್ತಿದ್ದ ಜಾತ್ರೆಯ ನೆಪವೊಡ್ಡಿ ಪ್ಲ್ಯಾನ್ ಮಾಡಿ ಮೃತ ರೌಡಿ ಶಿವಕುಮಾರ್‌ನ ಸ್ನೇಹಿತೆ ತನ್ನ ಮನೆಯಲ್ಲಿ ಮೀನು ಸಾರು ಮಾಡಿಕೊಂಡು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾಳೆ. ನಂತರ ಕೊಲೆಗೈಯ್ಯುವ ಜಾಗದಲ್ಲಿ ಯುವತಿಯು ಆರೋಪಿಗಳನ್ನು ತನ್ನ ಸ್ನೇಹಿತರು ಎಂದು ಪರಿಚಯ ಮಾಡಿಕೊಟ್ಟಿದ್ದಳು. ನಂತರ ಯುವತಿ ಸ್ನೇಹಿತರು ಅಲ್ಲಿಂದ ತೆರಳುವ ನಾಟಕವಾಡಿ ಹಿಂದಿನಿಂದ ಬಂದು ಲಾಂಗ್‌ನಿಂದ ಶಿವಕುಮಾರ್ ತಲೆಗೆ ಹೊಡೆದಿದ್ದಾರೆ. ಸಿನಿಮೀಯ ರೀತಿಯಲ್ಲಿ ಶಿವಕುಮಾರ್ ಸ್ನೇಹಿತೆಯನ್ನು ಬೆದರಿಸುವ ನಾಟಕವಾಡಿದ್ದಾರೆ. ಆಕೆ ಅಲ್ಲಿಂದ ತೆರಳಿದ ನಂತರ ಈತನ ಮೇಲೆ ಅಟ್ಯಾಕ್ ಮಾಡಲಾಗಿದ್ದು, ತಪ್ಪಿಸಿಕೊಂಡು ಕಾಡಿನಲ್ಲಿ ಮೃತ ಶಿವಕುಮಾರ್ ಓಡಿದ್ದಾನೆ ಮತ್ತು ರಸ್ತೆಯಲ್ಲಿ ಕಾರೊಂದು ಬಂದಾಗ ಆತನ ಬಳಿ ಮೃತ ಶಿವಕುಮಾರ್ ಸಹಾಯಕ್ಕಾಗಿ ಬೇಡಿಕೊಂಡಿದ್ದು, ಆರೋಪಿಗಳು ಅಲ್ಲಿಯೇ ಇದ್ದು ಕಾರು ಚಾಲಕನನ್ನು ಬೆದರಿಸಿದ ಹಿನ್ನೆಲೆಯಲ್ಲಿ ಆತ ನೇರವಾಗಿ ಆ್ಯಂಡರ್ ಸನ್‌ಪೇಟೆ ಪೊಲೀಸ್ ಠಾಣೆಗೆ ತೆರಳಿ ತಾನು ಕಂಡಿದ್ದ ಸನ್ನಿವೇಶ ವಿವರಿಸಿದ್ದಾನೆ ಎನ್ನಲಾಗಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಶವ ಪತ್ತೆಗಾಗಿ ಶೋಧ ನಡೆಸಿದ್ದಾರೆ. ಇತ್ತ ಸ್ಥಳದಿಂದ ಓಡಿ ಬಂದ ಶಿವಕುಮಾರ್ ಸ್ನೇಹಿತೆ ಮಾತ್ರ ತನ್ನನ್ನು ಮಾಸ್ಕ್ ಧರಿಸಿದ್ದ ಆಗಂತುಕರು ಹೊಡೆದು ಓಡಿಸಿದರು ಎಂದು ಕಟ್ಟುಕಥೆ ಕಟ್ಟಿದ್ದಾಳೆ.

ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿಗಳ ಚಲನವಲನಗಳ ಬಗ್ಗೆ ಸಿಸಿಟಿವಿ ಫೂಟೇಜ್ ನಲ್ಲಿ ಪತ್ತೆ ಹಚ್ಚಿ ಮೂರು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹತ್ಯೆಯ ಸೂತ್ರಧಾರಿ ಶಿವಕುಮಾರ್ ಸ್ನೇಹಿತೆಯೇ ಎಂದು ಒಪ್ಪಿಕೊಂಡಿದ್ದು, ಬಳಿಕ ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಎಲ್ಲ ವಿಚಾರ ಬಯಲಿಗೆ ಬಂದಿದೆ ಎಂದು ಹೇಳಲಾಗಿದೆ.

ಇನ್ಸ್ಪೆಕ್ಟರ್ ಮಾರ್ಕಂಡಯ್ಯ, ಆ್ಯಂಡರ್‌ಸನ್‌ಪೇಟೆ ಪಿಎಸ್‌ಐ ಮಂಜುನಾಥ್, ಕಾಮಸಮುದ್ರ ಪಿಎಸ್‌ಐ ಕಿರಣ್, ಪೇದೆಗಳಾದ ಸುನೀಲ್, ಜಬೀರ್ ಪಾಷ, ರಮೇಶ್ ಜೀವರ್ಗಿ, ಮಂಜುನಾಥ್ ಮೊದಲಾದವರು ಪ್ರಕರಣ ಬೇಧಿಸುವಲ್ಲಿ ತೊಡಗಿದ್ದರು.

Share this article