ಡ್ರೋಣ್ ಮೂಲಕ ಸರ್ವೇ ಮಾಡಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ರಾಜ್ಯದ ಕ್ರಷರ್ ಮಾಲೀಕರು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗಣಿಗಾರಿಕೆ ಮಾಡಿ ಸರ್ಕಾರಕ್ಕೆ ನಷ್ಟವುಂಟು ಮಾಡಿದ್ದಾರೆಂದು ರಾಜಧನ ವಸೂಲಿಗೆ ಮುಂದಾಗಿದೆ.
ಬಸವರಾಜ ಹಿರೇಮಠ
ಧಾರವಾಡ:
ರಾಜ್ಯ ಸರ್ಕಾರ ಕ್ರಷರ್ ಮಾಲೀಕರಿಗೆ ಭಾರೀ ಮೊತ್ತದ ದಂಡ ವಿಧಿಸುವ ಮೂಲಕ ಶಾಕ್ ನೀಡಿದೆ.
ಡ್ರೋಣ್ ಮೂಲಕ ಸರ್ವೇ ಮಾಡಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ರಾಜ್ಯದ ಕ್ರಷರ್ ಮಾಲೀಕರು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗಣಿಗಾರಿಕೆ ಮಾಡಿ ಸರ್ಕಾರಕ್ಕೆ ನಷ್ಟವುಂಟು ಮಾಡಿದ್ದಾರೆಂದು ರಾಜಧನ ವಸೂಲಿಗೆ ಮುಂದಾಗಿದೆ. ಸಂಚಿತ ಲೆಕ್ಕಪರಿಶೋಧನಾ ಪ್ರಮಾಣಕ್ಕಿಂತ ಹೆಚ್ಚಾಗಿ ಮತ್ತು ಗಡಿ ಒತ್ತುವರಿ ಮೂಲಕ ಅನಧಿಕೃತವಾಗಿ ಕಟ್ಟಡ ಕಲ್ಲನ್ನು ತೆಗೆದು ಸಾಗಾಣಿಕೆ ಮಾಡಿದ್ದಕ್ಕಾಗಿ ಈಗಾಗಲೇ ವಿಧಿಸಿದ್ದ ಒಂದು ಬಾರಿಯ ತೀರ್ಮಾನ (ಒಟಿಎಸ್) ಯೋಜನೆ ಅಡಿ ಈ ರಾಜಧನ ತುಂಬಲು ಕ್ರಷರ್ ಮಾಲೀಕರಿಗೆ ಸರ್ಕಾರ ನೋಟಿಸ್ ನೀಡಿದ್ದು, ಕ್ರಷರ್ ಮಾಲೀಕರ ನಿದ್ದೆಗೆಡೆಸಿದೆ.
₹ 115.5 ಕೋಟಿ ದಂಡ:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಕ್ರಷರ್ ಮಾಲೀಕರಿಗೆ ಈ ನೋಟಿಸ್ ಜಾರಿಯಾಗಿದೆ. ಈ ಪೈಕಿ ಧಾರವಾಡ ಜಿಲ್ಲೆಯ ಒಟ್ಟು 189 ಕ್ರಷರ್‌ಗಳ ಪೈಕಿ 109 ಕ್ರಷರ್‌ಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ್ದು ₹ 115.5 ಕೋಟಿ ರಾಜಧನ ನೀಡುವಂತೆ ಸೂಚಿಸಲಾಗಿದೆ. ನಿಗದಿತ ಭೂಮಿಯೊಳಗೆ ಹೆಚ್ಚುವರಿ ಗಣಿಗಾರಿಕೆ ಮಾಡಿದ್ದರೆ ಒಂದು ಟನ್ ಜಲ್ಲಿಕಲ್ಲಿಗೆ ₹ 70 ಹಾಗೂ ಅನಧಿಕೃತವಾಗಿ ಗಣಿಗಾರಿಕೆ ಮಾಡಿದ್ದರೆ ಟನ್ ವೊಂದಕ್ಕೆ ₹ 140 ರಾಜಧನ ಕಟ್ಟಲು ಈ ನೋಟಿಸ್‌ನಲ್ಲಿ ಸೂಚಿಸಿದ್ದು, ಕ್ರಷರ್ ಮಾಲೀಕರಿಗೆ ಆರ್ಥಿಕ ಸಂಕಷ್ಟ ಶುರುವಾಗಿದೆ. ನೋಟಿಸ್ ಜಾರಿಯಾಗದ 80 ಕ್ರಷರ್ ಮಾಲೀಕರು ಕಲ್ಲು ಮತ್ತು ಗಣಿಗಾರಿಕೆ ಪ್ರದೇಶದಲ್ಲಿ ತಾಂತ್ರಿಕ ಸಮಸ್ಯೆಯಾಗಿದ್ದು, ಬರುವ ದಿನಗಳಲ್ಲಿ ಅವರಿಗೂ ನೋಟಿಸ್ ಹೋಗಲಿದೆ. ನೋಟಿಸ್ ಜಾರಿಯಾದ ಕ್ರಷರ್ ಮಾಲೀಕರಿಗೆ ರಾಜಧನ ತುಂಬಲು ಆರು ತಿಂಗಳ ಅವಕಾಶವಿದೆ ಎಂದು ಹಿರಿಯ ಭೂ ವಿಜ್ಞಾನಿ ಉಮೇಶ ಬುಗರಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಬೆಚ್ಚಿ ಬಿದ್ದ ಮಾಲೀಕರು:
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಬಂದಿರುವ ನೋಟಿಸ್‌ಗಳನ್ನು ನೋಡಿ ಕ್ರಷರ್‌ಗಳ ಮಾಲೀಕರು ಬೆಚ್ಚಿ ಬಿದ್ದಿದ್ದಾರೆ. ಕೆಲವರಿಗೆ ಲಕ್ಷ ರುಪಾಯಿಗಳ ಲೆಕ್ಕದಲ್ಲಿದ್ದರೆ ಮತ್ತೆ ಕೆಲವರಿಗೆ ಕೋಟಿ ವರೆಗೂ ರಾಜಧನ ತುಂಬಬೇಕೆಂಬ ನೋಟಿಸ್ ಇದೆ. ಈಗಾಗಲೇ ಪ್ರತಿ ವರ್ಷ ರಾಜಧನ ತುಂಬುತ್ತಿದ್ದರೂ ಮತ್ತೆ ಹೆಚ್ಚುವರಿ ಗಣಿಗಾರಿಕೆಯ ಹೆಸರಿನಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ, ಆರು ತಿಂಗಳಲ್ಲಿ ರಾಜಧನ ತುಂಬದೇ ಹೋದಲ್ಲಿ ಐದು ಪಟ್ಟು ತುಂಬಬೇಕು ಎನ್ನುವ ಸರ್ಕಾರದ ನಿರ್ಧಾರವನ್ನು ಕ್ರಷರ್ ಮಾಲೀಕರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಧಾರವಾಡ ಜಿಲ್ಲಾ ಕ್ರಷರ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ರಘು ಲಕ್ಕಣ್ಣವರ, ಸರ್ಕಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಕ ಹೆಚ್ಚುವರಿ ಲಕ್ಷಗಟ್ಟಲೇ ರಾಜಧನ ತುಂಬಬೇಕೆಂಬ ನೋಟಿಸ್ ನೀಡಿದ್ದು ಅವೈಜಾನಿಕ ಕ್ರಮ. ಕ್ರಷರ್ ಮಾಲೀಕರು ಕೂಡಲೇ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಲ್ಲದೇ ಜಲ್ಲಿಕಲ್ಲಿನ ದರ ಏರದೇ ಇದ್ದರೂ ಅದನ್ನು ತಯಾರಿಸಲು ಬಳಸುವ ಅನೇಕ ವಸ್ತುಗಳ ದರ ಮೂರು ಪಟ್ಟು ಹೆಚ್ಚಾಗಿದೆ. ಹೀಗಾಗಿ ಸದ್ಯಕ್ಕೆ ಈ ವ್ಯವಹಾರದಲ್ಲಿ ಮೊದಲಿನಂತೆ ಲಾಭವಿಲ್ಲ. ಹಲವಾರು ವರ್ಷಗಳಿಂದ ಈ ಕಲ್ಲು ಮತ್ತು ಗಣಿ ಮೇಲಿನ ಅವಲಂಬನೆಯಿಂದ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಇದೀಗ ಸರ್ಕಾರ ಈ ರೀತಿ ಲಕ್ಷಗಟ್ಟಲೇ ರಾಜಧನದ ಬೇಡಿಕೆ ಇಟ್ಟರೆ ಎಲ್ಲಿಂದ ಕೊಡಬೇಕು ಎಂದು ಪ್ರಶ್ನಿಸಿದರು.
ಒಟ್ಟಿನಲ್ಲಿ ಗಣಿ ಇಲಾಖೆಯ ಈ ನಿರ್ಧಾರ ಒಂದು ಕಡೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಿದರೆ, ಮತ್ತೊಂದೆಡೆ ಕ್ರಷರ್ ಮಾಲೀಕರಿಗೆ ತೀವ್ರ ಆರ್ಥಿಕ ಸಂಕಷ್ಟ ತಂದಿದ್ದು ಮಾತ್ರ ನಿಜ.ರಾಜ್ಯ ಸರ್ಕಾರ ತನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಹಾಗೂ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲು ಕ್ರಷರ್ ಮಾಲೀಕರಿಗೆ ರಾಜಧನದ ದಂಡ ವಿಧಿಸುವುದು ಅವೈಜ್ಞಾನಿಕ ಕ್ರಮ. ಈ ಬಗ್ಗೆ ಕ್ರಷರ್ ಮಾಲೀಕರು ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.