ನೆಲ- ಜಲ, ಅರಣ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ನಾವು ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮ ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರನೆಲ- ಜಲ, ಅರಣ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ನಾವು ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮ ಕುಮಾರ್ ಹೇಳಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೊಡಗು ಅರಣ್ಯ ವೃತ್ತದ ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯ ಕಚೇರಿ ಹಾಗೂ ಶಾಲೆಯ ಇಕೋ ಕ್ಲಬ್ ಮತ್ತು ಎನ್ನೆಸ್ಸೆಸ್, ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ ಹಾಗೂ ಎಸ್ ಡಿಎಂಸಿ ಮತ್ತುಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಂಘಟನಾ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದಲ್ಲಿ ಶಾಲೆಯ ಆವರಣದಲ್ಲಿ ಅರಣ್ಯ ಸಸಿ ನೆಟ್ಟು ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿ ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.

ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಪ್ರಮೋದ್ ಮಾತನಾಡಿ, ಅರಣ್ಯ ಸಸಿ ನೆಟ್ಟು ಬೆಳೆಸುವಲ್ಲಿ ನಾಗರಿಕರ ಸಹಭಾಗಿತ್ವ ಅಗತ್ಯ. ಸೋಮವಾರಪೇಟೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ 1.26 ಲಕ್ಷ ಗಿಡ ನೆಟ್ಟು ಬೆಳೆಸುವ ಉದ್ದೇಶ ಹೊಂದಲಾಗಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.

ಅರಣ್ಯ ಇಲಾಖೆಯ ಡಿಆರ್‌ಎಫ್‌ಒಗಳಾದ ಎಂ. ಗಣೇಶ್, ಎನ್.ಬಿ. ಹರೀಶ್ ಕುಮಾರ್, ಶಾಲಾ ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಎಂ.ಟಿ. ದಯಾನಂದ ಪ್ರಕಾಶ್, ಬಿ.ಎನ್. ಸುಜಾತ, ಬಿ.ಡಿ. ರಮ್ಯ, ಎಸ್.ಎಂ. ಗೀತಾ, ಅನ್ಸಿಲಾ ರೇಖಾ ಮತ್ತಿತರರಿದ್ದರು.

ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಅರಣ್ಯ ಸಿಬ್ಬಂದಿ ಪರಿಸರಕ್ಕೆ ಸಂಬಂಧಿಸಿದ ಪ್ರಚಾರ ಫಲಕಗಳನ್ನು ಹಿಡಿದು ಕೂಡ್ಲೂರು‌ ಗ್ರಾಮದಲ್ಲಿ ಪರಿಸರ ಜಾಗೃತಿ ಮೂಡಿಸಿದರು.