ಕನ್ನಡಪ್ರಭ ವಾರ್ತೆ, ತುಮಕೂರು
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಕ್ಯಾಲೆಂಡರ್ ವರ್ಷದ ಜನವರಿ ಮಾಹೆಯಿಂದ 2025 ರ ಮಾರ್ಚ್ 27ರವರೆಗೆ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 112 ಪ್ರಕರಣಗಳಲ್ಲಿ 140 ನೊಂದ ಪರಿಶಿಷ್ಟ ಜಾತಿಯ ಸಂತ್ರಸ್ತರಿಗೆ 97,38,500 ರು ಹಾಗೂ 29 ಪ್ರಕರಣಗಳಲ್ಲಿ 36 ಪರಿಶಿಷ್ಟ ವರ್ಗದ ಸಂತ್ರಸ್ತರಿಗೆ 21,75,000 ರು ಗಳ ಪರಿಹಾರವನ್ನು ಮಂಜೂರು ಮಾಡಲಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ದಲಿತ ಮುಖಂಡರ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಈವರೆಗೂ 300 ಕ್ಕೂ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು ವರದಿಯಾಗಿರುವುದಲ್ಲದೆ, ದಿನೇ ದಿನೇ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದರಿಂದ ದಲಿತರ ದೌರ್ಜನ್ಯ ಪ್ರಕರಣಗಳು ವರದಿಯಾದಾಗ ಪೊಲೀಸ್ ಅಧಿಕಾರಿಗಳು ತಕ್ಷಣವೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.ಜಿಲ್ಲೆಯ ಪಾವಗಡ ತಾಲೂಕು ನಾಗಲಮಡಿಕೆ ಹೋಬಳಿಯಲ್ಲಿರುವ ಸೋಲಾರ್ ಕಂಪನಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವವರಿಗೆ ಸರ್ಕಾರ ನಿಗದಿಪಡಿಸಿರುವ ವೇತನವನ್ನು ನೀಡುತ್ತಿಲ್ಲವೆಂದು ದಲಿತ ಸಮುದಾಯದ ಮುಖಂಡರು ಸಭೆಯಲ್ಲಿ ಒತ್ತಾಯಿಸಿದಾಗ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿಗಳು, ಸರ್ಕಾರ ನಿಗದಿಪಡಿಸಿದಂತೆ ಕಾರ್ಮಿಕ ಇಲಾಖೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವವರಿಗೆ ನಿಯಮಾನುಸಾರ ಕನಿಷ್ಠ ವೇತನವನ್ನು ನಿಗದಿಪಡಿಸಿ ಪಾವತಿ ಮಾಡಬೇಕೆಂದು ಕಾರ್ಮಿಕ ಅಧಿಕಾರಿ ತೇಜಾವತಿ ಅವರಿಗೆ ಸೂಚನೆ ನೀಡಿದರು.ಇದೇ ರೀತಿ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೂ ಸರಿಸಮನಾದ ವೇತನವನ್ನು ನೀಡಬೇಕೆಂದು ಸಂಬಧಿಸಿದ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಂಜೀವಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಉಪ ವಿಭಾಗಾಧಿಕಾರಿಗಳಾದ ಗೌರವ್ ಕುಮಾರ್ ಹಾಗೂ ಗೋಟೂರು ಶಿವಪ್ಪ, ಆಹಾರ ಮತ್ತು ನಾಗರೀಕ ಜಂಟಿ ನಿರ್ದೇಶಕ ಮಂಟೇಸ್ವಾಮಿ, ತಹಶೀಲ್ದಾರ್ ರಾಜೇಶ್ವರಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಗೂ ದಲಿತ ಸಮುದಾಯದ ಮುಖಂಡರು, ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯರು ಹಾಜರಿದ್ದರು.