ವೆಂಕಟೇಶ್ ಕಲಿಪಿ
ಕೃಷಿಹೊಂಡದಲ್ಲಿ ಈಜುಲು ಹೋಗಿ ಬಾಲಕನೋರ್ವ ಸಾವನ್ನಪ್ಪಿದ ದುರ್ಘಟನೆಯ ಹಿನ್ನೆಲೆಯಲ್ಲಿ ಮೃತನ ಕುಟುಂಬಕ್ಕೆ ಹೊಂಡವಿದ್ದ ಜಮೀನಿನ ಮಾಲೀಕರಿಂದ 10 ಲಕ್ಷ ರು. ಪರಿಹಾರ ಕಲ್ಪಿಸಿ ಹೈಕೋರ್ಟ್ ಮಾನವೀಯತೆ ಮರೆದಿದೆ.
ವಿಶೇಷವೆಂದರೆ ಮೃತನ ಪೋಷಕರು ಮತ್ತು ಜಮೀನಿನ ಮಾಲೀಕರು ಕೇವಲ 1.2 ಲಕ್ಷ ರು.ಗೆ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಹೈಕೋರ್ಟ್ ಮಧ್ಯಪ್ರವೇಶಿಸಿ, ಬಾಲಕನ ಜೀವವನ್ನು ಕಡಿಮೆ ಮೊತ್ತಕ್ಕೆ ನಿರ್ಣಯಿಸಲಾಗದು ಎಂಬ ಅಭಿಪ್ರಾಯಕ್ಕೆ ಬಂದಿತ್ತು. ಮುಖ್ಯವಾಗಿ ಮೃತ ಬಾಲಕನ ಪೋಷಕರು ಬಡವರಾಗಿದ್ದು, ಅವರಿಗೆ ಮತ್ತೋರ್ವ ಪುತ್ರನಿದ್ದಾನೆ. ಆತನ ಭವಿಷ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು 10 ಲಕ್ಷ ರು.ಗೆ ಪ್ರಕರಣವನ್ನು ಇತ್ಯರ್ಥಪಡಿಸಿದೆ.ನಿರ್ಲಕ್ಷ್ಯತನದಿಂದ ಬಾಲಕನ ಸಾವಿಗೆ ಕಾರಣವಾದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೃಷಿಹೊಂಡದ ಜಮೀನಿನ ಮಾಲೀಕರಾದ ವಿಜಯಲಕ್ಷ್ಮೀ, ಆ ಜಮೀನನಲ್ಲಿ ನಡೆಯತ್ತಿರುವ ಪಾವಗಡದ ವೀರಮ್ಮನಹಳ್ಲಿ ಗೇಟ್ ಸಮೀಪದ ಹಸಿರು ಕ್ರಾಂತಿ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಜಿ.ಎ. ವೆಂಕಟೇಶ್ ಹಾಗೂ ಮೇಲ್ವಿಚಾರಕ ಡಿ.ವಲ್ಯಾ ನಾಯ್ಕ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
13 ವರ್ಷದ ಬಾಲಕ ತಾಹೀರ್ ಸಾವನ್ನಪ್ಪಿರುವುದಕ್ಕೆ ಪ್ರಕರಣ ಸಂಬಂಧಿಸಿದೆ. ಬಾಲಕ ಈಜುಕೊಳದಲ್ಲಿ ಸಾವನ್ನಪ್ಪಿಲ್ಲ. ಬದಲಾಗಿ ಕೃಷಿ ಚುವುಟಿಕೆಗೆ ನೀರು ಸಂಗ್ರಹಿಸಲು ತೋಡಲಾಗಿದ್ದ ಹೊಂಡದಲ್ಲಿದ್ದ ನೀರಿನಲ್ಲಿ ಮುಳುಗಿ ಉಸಿರಾಡಲಾಗದೆ ಸಾವನ್ನಪ್ಪಿದ್ದಾನೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದತಿಗೆ ಅರ್ಜಿದಾರರು ಕೋರಿದ್ದಾರೆ. ಆರಂಭದಲ್ಲಿ ಅರ್ಜಿದಾರರು ಮೃತ ಬಾಲಕನ ತಾಯಿಗೆ 1.2 ಲಕ್ಷ ರು. ನೀಡಿ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದರು. ಆ ಮೊತ್ತಕ್ಕೆ ನ್ಯಾಯಾಲಯ ಒಪ್ಪಲಿಲ್ಲ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.
ಅಂತಿಮವಾಗಿ 10 ಲಕ್ಷ ಹಣವನ್ನು ಮೃತನ ಬಾಲಕನ ತಾಯಿ ಹೆಸರಿನಲ್ಲಿ ನಿಶ್ವಿತ ಠೇವಣಿ ರೂಪದಲ್ಲಿ ಬ್ಯಾಂಕ್‌ನಲ್ಲಿ ಇಟ್ಟಿದ್ದಾರೆ. ಆ ಕುರಿತ ದಾಖಲೆ ಸಲ್ಲಿಸುವ ಮೂಲಕ ಅನಿರ್ದೇರ್ಜಿದಾರರು ನ್ಯಾಯಾಲಯದ ಶನ ಪಾಲಿಸಿದ್ದಾರೆ. ಇದರಿಂದ ನಿಶ್ವಿತ ಠೇವಣಿಯಿಂದ ಬರುವ ಬಡ್ಡಿಯನ್ನು ಪ್ರತಿ ತಿಂಗಳು ಮೃತ ಬಾಲಕನ ತಾಯಿ ಬ್ಯಾಂಕಿನಿಂದ ಡ್ರಾ ಮಾಡಬಹುದು. ನಂತರ 5 ವರ್ಷಗಳ ನಂತರ ಆಕೆ ಬಯಸಿದಾಂತೆ ಖಾತೆಯನ್ನು ಪರಿವರ್ತಿಸಬಹುದು ಎಂದು ಸೂಚಿಸಿರುವ ಪೀಠ, ಅರ್ಜಿದಾರರ ವಿರುದ್ಧದ ಎಫ್ಐಆರ್ ರದ್ದುಪಡಿಸಿದೆ.
ಪಾವಗಡ ಪೊಲೀಸ್ ಠಾಣೆಗೆ 2026ರ ಮೇ 9ರಂದು ನೂರಿ ಎಂಬಾಕೆ ದೂರು ನೀಡಿದ್ದರು. ನನ್ನ ಗಂಡ ರಿಜ್ವಾನ್, ಹಿರಿಯ ಪುತ್ರ ತಾಹಿರ್ (13) ಮತ್ತು ಕಿರಿಯ ಪುತ್ರ ಸಾದಿಕ್ (10) ಮೇ 9ರಂದು ಮಧ್ಯಾಹ್ನ 2.15ಕ್ಕೆ ಹಸಿರು ಕ್ರಾಂತಿ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಆವರಣದ ಈಜುಕೊಳದಲ್ಲಿ (ವಿಚಾರಣೆ ವೇಳೆ ಕೃಷಿಹೊಂಡವೆಂದು ನ್ಯಾಯಾಲಯಕ್ಕೆ ತಿಳಿಸಲಾಯಿತು) ಈಜಾಡಲೆಂದು ಹೋಗಿದ್ದರು. ಈ ವೇಳೆ ಪುತ್ರ ತಾಹೀರ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕ್ಲಬ್ ಜಾಗದ ಉಸ್ತುವಾರಿ ವಲ್ಯಾ ನಾಯ್ಕ, ನನ್ನ ಗಂಡ ಹಾಗೂ ಪುತ್ರನಿಂದ 300 ರು. ಸ್ವೀಕರಿಸಿ, ಈಜುಕೊಳದಲ್ಲಿ ಈಜಾಡಲು ಬಿಟ್ಟಿದ್ದಾರೆ. ಆದರೆ, ಜೀವ ರಕ್ಷಕ ಉಪಕರಣ ನೀಡಿಲ್ಲ. ತರಬೇತುದಾರರನ್ನು ಸ್ಥಳದಲ್ಲಿ ನೇಮಿಸಿಲ್ಲ. ಈ ನಿರ್ಲಕ್ಷ್ಯ ವಹಿಸಿದ್ದರಿಂದ ಪುತ್ರ ಸಾವನ್ನಪ್ಪಿದ್ದಾನೆ ಎಂದು ನೂರಿ ಆರೋಪಿಸಿದ್ದರು. ಅದನ್ನು ಆಧರಿಸಿ, ಬಿಎನ್‌ಎಸ್ 106(1) ಅಡಿಯಲ್ಲಿ ನಿರ್ಲಕ್ಷ್ಯ ಅಥವಾ ಅವಘಡದಿಂದ (ಅಪಘಾತದಿಂದ) ಬೇರೆಯವರ ಸಾವಿಗೆ ಕಾರಣವಾಗುವ ಅಪರಾಧದಡಿ ಅರ್ಜಿದಾರರ ವಿರುದ್ಧ ಪಾವಗಡ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.