1 ರಸ್ತೆ ಗುಂಡಿ ಮುಚ್ಚಲು 1 ಲಕ್ಷ ರು. ಖರ್ಚು : ಛಲವಾದಿ

KannadaprabhaNewsNetwork |  
Published : Apr 30, 2026, 03:30 AM ISTUpdated : Apr 30, 2026, 05:32 AM IST
Chalavadi T Narayanaswamy

ಸಾರಾಂಶ

ನಗರದ ಚಾಮರಾಜಪೇಟೆಯ ರಸ್ತೆಗಳಲ್ಲಿ 150 ಗುಂಡಿಗಳ ಪೈಕಿ 140 ಗುಂಡಿ ಮುಚ್ಚಲು ಬರೋಬ್ಬರಿ 1.40 ಕೋಟಿ ರು. ಖರ್ಚು ಮಾಡಲಾಗಿದೆ. ಅಂದರೆ, 1 ಗುಂಡಿ ಮುಚ್ಚಲು 1 ಲಕ್ಷ ರು. ಖರ್ಚು ತೋರಿಸಿದ್ದಾರೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

 ಬೆಂಗಳೂರು :  ನಗರದ ಚಾಮರಾಜಪೇಟೆಯ ರಸ್ತೆಗಳಲ್ಲಿ 150 ಗುಂಡಿಗಳ ಪೈಕಿ 140 ಗುಂಡಿ ಮುಚ್ಚಲು ಬರೋಬ್ಬರಿ 1.40 ಕೋಟಿ ರು. ಖರ್ಚು ಮಾಡಲಾಗಿದೆ. ಅಂದರೆ, 1 ಗುಂಡಿ ಮುಚ್ಚಲು 1 ಲಕ್ಷ ರು. ಖರ್ಚು ತೋರಿಸಿದ್ದಾರೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಬುಧವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಮುಚ್ಚಿರುವ ಗುಂಡಿಗಳು 20 ಅಡಿ, 10 ಅಡಿ ಅಥವಾ 5 ಅಡಿ ಇರಬಹುದೇ? ಇವರಿಗೆ ನಾಚಿಕೆ ಆಗುವುದಿಲ್ಲವೇ? ಜನ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ತಿಳಿದಿದ್ದೀರಾ? ನೀವು ಹಾಕುವುದು ತೇಪೆ ಕೆಲಸ. ಒಂದು ಗುಂಡಿ ಮುಚ್ಚಲು ಗರಿಷ್ಠ 5000 ರು. ಆಗಬಹುದು. ಆದರೆ, 1 ಲಕ್ಷ ರು. ಎಂದು ಲೆಕ್ಕ ತೋರಿಸಿದ್ದಾರೆ ಎಂದು ಕಿಡಿಕಾರಿದರು.

ಒಂದು ಪ್ರದೇಶಕ್ಕೆ ಒಂದೊಂದು ದರ : 

ರಾಜಾಜಿನಗರದಲ್ಲಿ 250 ರಸ್ತೆ ಗುಂಡಿಗಳ ಪೈಕಿ 232 ಮುಚ್ಚಿದ್ದು, 60,344 ರು. ಸರಾಸರಿ ಲೆಕ್ಕ ತೋರಿಸಿದ್ದಾರೆ. ಗೋವಿಂದರಾಜನಗರದಲ್ಲಿ 374 ರಸ್ತೆ ಗುಂಡಿಗಳ ಪೈಕಿ 366 ಮುಚ್ಚಿದ್ದು, 1.80 ಕೋಟಿ ರು. ಅಂದರೆ, ಪ್ರತಿ ಗುಂಡಿಗೆ 49 ಸಾವಿರ ರು. ಖರ್ಚು ತೋರಿಸಿದ್ದಾರೆ. ಜಯನಗರದಲ್ಲಿ 403 ರಸ್ತೆ ಗುಂಡಿಗಳ ಪೈಕಿ 382 ಮುಚ್ಚಿದ್ದು, ಪ್ರತಿ ಗುಂಡಿಗೆ 47 ಸಾವಿರ ರು. ಖರ್ಚಾಗಿ ಎಂದು ತೋರಿಸಿದ್ದಾರೆ. ಇಲ್ಲೆಲ್ಲಾ ಏಕೆ ಒಂದು ಲಕ್ಷ ರು.ಗಿಂತ ಕಡಿಮೆ ಮಾಡಿದ್ದಾರೆ. ರಿಯಲ್‌ ಎಸ್ಟೇಟ್‌ ಮಾದರಿಯಲ್ಲಿ ಒಂದೊಂದು ಪ್ರದೇಶಕ್ಕೆ ಒಂದೊಂದು ದರ ಮಾಡಿದ್ದಾರಾ ಎಂದು ಪ್ರಶ್ನಿಸಿದರು. ಗುಂಡಿಗಳ ಕಾರಣ ಅಪಘಾತಗಳಲ್ಲಿ ಎಷ್ಟು ಜನರು ಸತ್ತಿದ್ದಾರೆಂದು ಕೇಳಿದರೆ, ಇವರ ಪ್ರಕಾರ ಅದು ಸೊನ್ನೆ. ಗಂಭೀರ ಗಾಯಾಳುಗಳ ಪ್ರಕರಣದ ಸಂಖ್ಯೆಯೂ ಸೊನ್ನೆ. ಪರಿಹಾರ ನೀಡಿದ ಪ್ರಕರಣಗಳ ಸಂಖ್ಯೆಯೂ ಸೊನ್ನೆ. ಅಂದರೆ ಬೆಂಗಳೂರಿನಲ್ಲಿ ಏನೂ ಆಗಿಯೇ ಇಲ್ಲವೇ ಎಂದು ಛಲವಾದಿ ಕೇಳಿದರು.

ಅಪಘಾತದಿಂದ ಪ್ರತಿ ದಿನ 31 ಮಂದಿ ಸಾವು:

ಇತ್ತೀಚಿನ ಅಧ್ಯಯನ ವರದಿ ಪ್ರಕಾರ ಕರ್ನಾಟಕದಲ್ಲಿ ರಸ್ತೆ ಅಪಘಾತಗಳಲ್ಲಿ ಪ್ರತಿದಿನ ಸರಾಸರಿ 31 ಜನರು ಮೃತಪಟ್ಟರೆ, 86 ಮಂದಿ ಗಾಯಗೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಈ ರಸ್ತೆ ಗುಂಡಿಗಳಿಂದ 891 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳೇ ನಿಮ್ಮ ಕಣ್ಣುಗಳಿಗೆ ತೊಂದರೆ ಇದ್ದರೆ ನಾರಾಯಣ ನೇತ್ರಾಲಯಕ್ಕೆ ಹೋಗಿ ಸರಿ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಸುಳ್ಳು, ವಂಚನೆಯ ಈ ರಾಜ್ಯ ಸರ್ಕಾರವು ಕಸ ಸಂಗ್ರಹಕ್ಕೆ ಸೆಸ್‌ ಹಾಕಿದೆ. ಆದರೆ, ಕಸ ಸಂಗ್ರಹಣೆ ನಡೆಯುತ್ತಿಲ್ಲ. ಬೀದಿ ಬೀದಿಗಳಲ್ಲಿ ಕಸದ ರಾಶಿಗಳು ಬಿದ್ದಿವೆ. ಬೆಂಗಳೂರು ಮಹಾನಗರದಲ್ಲಿ ಈ ಹಿಂದೆ 198 ವಾರ್ಡ್‌ಗಳಿದ್ದವು. 33 ತ್ಯಾಜ್ಯ ನಿರ್ವಹಣಾ ಪ್ಯಾಕೇಜ್‌ ಮಾಡಿದ್ದರು. ಈಗ ಬೆಂಗಳೂರು ಮಹಾನಗರವನ್ನು 5 ಭಾಗ ಮಾಡಿದ್ದು, ಪ್ಯಾಕೇಜ್‌ ಸಹ ಐದು ಭಾಗ ಆಬೇಕಲ್ಲವೇ? ಅದು ಏಕೆ ಮಾಡಿಲ್ಲ ಎಂದು ಛಲವಾದಿ ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕಿಡಿಗೇಡಿತನಕ್ಕೆ ಕ್ಷಮೆ ಇಲ್ಲ: ಹೈಕೋರ್ಟ್‌ ಕಿಡಿ
112 ಎಐ ಬಹುಭಾಷ ಆಯ್ಕೆ ವ್ಯವಸ್ಥೆಗೆ ಡಾ.ಜಿ.ಪರಮೇಶ್ವರ್‌ ಚಾಲನೆ