ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ 89611 ರೈತರಿಗೆ 113.23 ಕೋಟಿ ರು. ಬೆಳೆ ವಿಮೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳೆ ವಿಮೆ ಹಣ ಬಿಡುಗಡೆಯಲ್ಲಿ ಅಡಕೆ ಬೆಳೆಗೆ ಹೆಚ್ಚಿನ ಪ್ರಮಾಣದ ಹಣ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಮಾವು, ಕಾಳುಮೆಣಸು, ಶುಂಠಿ ಬೆಳೆಗೆ ಬೆಳೆ ವಿಮೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತಿರುವ ಈ ಸಂದರ್ಭದಲ್ಲಿ ಕೆಲವಡೆಯಿಂದ ದೂರು ಕೇಳಿ ಬರುತ್ತಿದೆ. ಕೆಲವಡೆ ಒಟ್ಟು ಬೆಳೆ ವಿಮೆಗೆ ಪ್ರಿಮಿಯಂ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ. 12.50 ಹಾಗೂ ರೈತರಿಂದ ಶೇ.5ರಷ್ಟು ಹಣವನ್ನು ಕಟ್ಟಲಾಗಿದೆ. ಆದರೆ, ಈಗ ಬಿಡುಗಡೆ ಮಾಡಲಾಗಿರುವ ಹಣ ರೈತ ಕಟ್ಟಿದ ಹಣವೂ ಬಂದಿಲ್ಲ ಎಂದು ದೂರುಗಳು ಬರುತ್ತಿರುವುದರಿಂದ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಜಿಲ್ಲೆಗೆ ಇನ್ನೂ 100 ಕೋಟಿ ರು. ಬರಬೇಕಿದೆ. ನಮಗೆ ಅನ್ಯಾಯವಾಗಿದೆ ಎಂದು ದೂರಿದರು.ಜಿಲ್ಲೆಯಲ್ಲಿ ಮಳೆ ಮಾಪನ ಕೇಂದ್ರಗಳು ಹಾಳಾಗಿವೆ. ಎಲ್ಲಿ ಮಳೆ ಮಾಪನ ಹಾಳಾಗಿದೆ, ಅಲ್ಲಿ ಸುತ್ತಮುತ್ತ ಪ್ರದೇಶದ ಕಡಿಮೆ ಮಳೆಯಾಗಿರುವ ಪ್ರದೇಶದಲ್ಲಿ ಮಳೆ ಮಾಪನವನ್ನು ತೆಗೆದುಕೊಳ್ಳಲಾಗುತ್ತಿದೆ. ವಿಮಾ ಕಂಪನಿ ತನ್ನ ಅನುಕೂಲಕ್ಕೆ ತಕ್ಕಂತೆ ಮಳೆ ಮಾಪನ ಮಾಡಿಕೊಳ್ಳುತ್ತಿದೆ. ಇದರಿಂದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಟೀಕಿಸಿದರು.
ಈ ತಪ್ಪನ್ನು ಸರಿ ಮಾಡಿಕೊಳ್ಳಲಿಲ್ಲ ಎಂದರೆ ಮುಂದೆಯೂ ರೈತರಿಗೆ ಅನ್ಯಾಯವಾಗುತ್ತದೆ. ಕೈ ತಪ್ಪಿನಿಂದ ಈ ರೀತಿ ತಪ್ಪಾಗಿದೆಯೋ ಇಲ್ಲ ವಿಮಾ ಕಂಪನಿ ಮಾನದಂಡವೇ ಆದೆ ರೀತಿ ಇದೆಯೋ ನನಗೆ ಗೊತ್ತಿಲ್ಲ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ದೊಡ್ಡದಿದೆ ಹೀಗಾಗಿ ಬೆಳೆ ವಿಮೆ ವಿಚಾರದಲ್ಲಿ ರೈತರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.ಈಗ ಮೆಕ್ಕೆಜೋಳ ಕೊಯ್ಲು ಆಗಿದೆ. ಈ ಸಂದರ್ಭದಲ್ಲೇ ಮೆಕ್ಕೆಜೋಳದ ಬೆಲೆ ಕುಸಿದಿದೆ. ಕುರ್ಚಿ ಕಾಳಗದಲ್ಲೇ ರಾಜ್ಯ ಸರ್ಕಾರ ಕಾಲ ಕಳೆಯುತ್ತಿದ್ದು, ಶೀಘ್ರದಲ್ಲೇ ಖರೀದಿ ಕೇಂದ್ರ ಆರಂಭಿಸಿ ಮೆಕ್ಕೆಜೋಳ ಖರೀದಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಮತ್ತಿತರರು ಹಾಜರಿದ್ದರು.