ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ೨೯.೬೫ ಕೋಟಿ ರು. ಖರ್ಚು: ಸಚಿವ ಸಿಆರ್‌ಎಸ್

KannadaprabhaNewsNetwork | Published : Apr 6, 2025 1:47 AM

ಸಾರಾಂಶ

ಡಿಸೆಂಬರ್ ತಿಂಗಳಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಗ್ರಹವಾದ ೩೨.೭೪ ಕೋಟಿ ರು. ಹಣದಲ್ಲಿ ೨೯.೬೫ ಕೋಟಿ ರು. ಹಣ ಖರ್ಚಾಗಿದ್ದು, ೨.೫೩ ಕೋಟಿ ರು. ಉಳಿತಾಯವಾಗಿದೆ. ಸರ್ಕಾರ ಮೊದಲ ಹಂತದಲ್ಲಿ ೨೫ ಕೋಟಿ ರು., ಎರಡನೇ ಹಂತದಲ್ಲಿ ೫ ಕೋಟಿ ರು. ಅನುದಾನ ಬಿಡುಗಡೆ ಮಾಡಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಡಿಸೆಂಬರ್ ತಿಂಗಳಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಗ್ರಹವಾದ ೩೨.೭೪ ಕೋಟಿ ರು. ಹಣದಲ್ಲಿ ೨೯.೬೫ ಕೋಟಿ ರು. ಹಣ ಖರ್ಚಾಗಿದ್ದು, ೨.೫೩ ಕೋಟಿ ರು. ಉಳಿತಾಯವಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಲೆಕ್ಕ-ಪತ್ರಗಳನ್ನು ಪ್ರಕಟಿಸಿ ಮಾತನಾಡಿ, ಸರ್ಕಾರ ಮೊದಲ ಹಂತದಲ್ಲಿ ೨೫ ಕೋಟಿ ರು., ಎರಡನೇ ಹಂತದಲ್ಲಿ ೫ ಕೋಟಿ ರು. ಅನುದಾನ ಬಿಡುಗಡೆ ಮಾಡಿತ್ತು. ಮಳಿಗೆಗಳು, ಪ್ರತಿನಿಧಿಗಳ ನೋಂದಣಿ ಶುಲ್ಕ, ಎಚ್‌ಆರ್‌ಎಂಎಸ್ ನೌಕರರನ್ನು ಹೊರತುಪಡಿಸಿದ ನೌಕರರ ಒಂದು ದಿನದ ವೇತನದ ದೇಣಿಗೆ ಹಾಗೂ ಇತರೆ ದೇಣಿಗೆ ಮೂಲಕ ೧.೨೦ ಕೋಟಿ ರು., ಖಜಾನೆ ವ್ಯಾಪ್ತಿಯ ಸರ್ಕಾರಿ ನೌಕಕರ ಒಂದು ದಿನದ ವೇತನ ದೇಣಿಗೆ ೧.೦೮ ಕೋಟಿ ರು., ಹಣ ಸಂಗ್ರಹವಾಗಿದ್ದಾಗಿ ಹೇಳಿದರು.

ಸಮ್ಮೇಳನಕ್ಕೆ ರಚಿಸಲಾಗಿದ್ದ ೨೮ ಸಮಿತಿಗಳು ೨೯.೬೫ ಕೋಟಿ ರು. ಹಣವನ್ನು ವೆಚ್ಚ ಮಾಡಿದ್ದು, ಇದರಲ್ಲಿ ಸಮ್ಮೇಳನಕ್ಕೆ ವಾಸ್ತವವಾಗಿ ಭರಿಸಿದ ವೆಚ್ಚ ೨೫.೩೯ ಕೋಟಿ ರು., ಜಿಎಸ್‌ಟಿ ಮೊತ್ತ ೩.೧೭ ಕೋಟಿ ರು., ಕೆಎಸ್‌ಎಂಸಿಎ ಮೊತ್ತ ೧.೦೮ ಕೋಟಿ ರುಗಳಾಗಿದೆ ಎಂದು ವಿವರಣೆ ನೀಡಿದರು.

ಕೈಗಾರಿಕಾ ಘಟಕಗಳು ಮತ್ತು ವಿವಿಧ ಸಂಘ-ಸಂಸ್ಥೆಗಳಿಂದ ದೇಣಿಗೆ ಹೊರತುಪಡಿಸಿ ಸಂಸ್ಥೆಯವರೇ ಪ್ರಾಯೋಜಕತ್ವ ವಹಿಸಿಕೊಂಡಿದ್ದು, ಜಿಲ್ಲಾಡಳಿತದಿಂದ ಯಾವುದೇ ಹಣವನ್ನು ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಾಧುಕೋಕಿಲ ಮತ್ತು ರಾಜೇಶ್ ಕೃಷ್ಣನ್ ತಂಡ ನಡೆಸಿಕೊಟ್ಟ ನುಡಿಜಾತ್ರೆಯ ಸ್ವರ ಯಾತ್ರೆ ತಂಡಕ್ಕೆ ಕೆಎಂಎಫ್, ಮನ್‌ಮುಲ್, ಸ್ಥಳೀಯ ಪತ್ರಿಕೆಗಳಿಗೆ ಸಮ್ಮೇಳನದ ಜಾಹೀರಾತು ವ್ಯವಸ್ಥೆಯನ್ನು ಮೈಷುಗರ್ ಕಾರ್ಖಾನೆ, ನುಡಿಜಾತ್ರೆಯ ಸ್ವರಯಾತ್ರೆ ಅರ್ಜುನ್ ಜನ್ಯ ಮತ್ತು ತಂಡಕ್ಕೆ ಶ್ರೀರಂಗಪಟ್ಟಣದ ಎಂ.ಕೆ.ಆಗ್ರೋಟೆಕ್ ಲಿಮಿಟೆಡ್, ಗೆಜ್ಜಲಗೆರೆಯ ಶಾಹಿ ಎಕ್ಸ್‌ಪೋರ್ಟ್ ಹಾಗೂ ಎನ್‌ಎಸ್‌ಎಲ್ ಷುಗರ್ ಕಾರ್ಖಾನೆ ವಹಿಸಿಕೊಂಡಿದ್ದವು. ಆತಗೂರು ಶಾಸನ, ಕಮಾನು ನಿರ್ಮಾಣಕ್ಕೆ ವಿವಿಧ ಬ್ಯಾಂಕ್‌ಗಳು ಹಾಗೂ ಕೈಗಾರಿಕೆಗಳು ಹಣ ಪಾವತಿಸಿದ್ದಾಗಿ ಹೇಳಿದರು.

ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರತಿ ಸಮಿತಿಯವರು ವಿವರವಾಗಿ ಸಲ್ಲಿಸಿರುವ ಬಿಲ್‌ಗಳು, ವಿವಿಧ ಸಮಿತಿಗಳಳು ಪಡೆದಿರುವ ಸರಕು-ಸೇವೆಗಳಿಗೆ ಅನುಗುಣವಾಗಿ ಪೂರಕ ದಾಖಲೆಗಳು ಹಾಗೂ ದೃಢೀಕರಣಗಳನ್ನು ನಿಯಮಾನುಸಾರ ಕೂಲಂಕುಷವಾಗಿ ಪರಿಶೀಲಿಸಿ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಸಂಸ್ಥೆಯವರು ತಯಾರಿಸಿ ಬಿಲ್ ಪಾವತಿಸಬಹುದೆಂದು ದೃಢೀಕರಣ ನೀಡಿದ ನಂತರ ಕೆ-೨ ಮೂಲಕ ಸಂಪೂರ್ಣ ಬಿಲ್ ಪಾವತಿ ಮಾಡಲಾಗಿದೆ ಎಂದರು.

ವೇದಿಕೆ ನಿರ್ಮಾಣ ಸಮಿತಿ ೭,೨೦,೩೩,೭೬೫ ರು., ವೇದಿಕೆ ನಿರ್ವಹಣಾ ಸಮಿತಿ, ೪,೫೦,೩೦೦ ರು., ವಸತಿ ಸಮಿತಿ- ೧,೬೨,೦೭,೦೬೧ ರು., ಆಹಾರ ಸಮಿತಿ- ೬,೧೧,೯೦,೧೮೮ ರು., ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿ-೨೮,೨೪,೮೨೩ ರು., ಕುಡಿಯುವ ನೀರು ಸಮಿತಿ-೪೦,೩೫,೨೮೨ ರು., ಧ್ವಜ ನಿರ್ವಹಣಾ ಸಮಿತಿ-೮೦,೭೧೦ ರು., ನಗರ ಅಲಂಕಾರ ಸಮಿತಿ-೬೦,೫೨, ೮೦೦ ರು., ಪ್ರಚಾರ ಸಮಿತಿ-೧,೦೭,೮೮,೧೨೦ ರು., ಮಾಧ್ಯಮ ಸಮನ್ವಯ ಸಮಿತಿ-೮೦,೭೦,೭೯೦ ರು., ಸಾಂಸ್ಕೃತಿಕ ಸಮಿತಿ-೬೬,೫೩,೬೯೬ ರು., ಮೆರವಣಿಗೆ ಸಮಿತಿ-೫೯,೯೭,೯೮೬ ರು., ಸ್ಮರಣಿಕೆ ಸಮಿತಿ-೨೫,೯೯,೪೯೪ ರು., ಪುಸ್ತಕ ಸಮಿತಿ-೨೪,೨೦,೩೦೮ ರು., ಸ್ಮರಣ ಸಂಚಿಕೆ ಸಮಿತಿ-೧೬,೧೩,೯೮೪ ರು., ಪಾಸ್ ಮತ್ತು ಬ್ಯಾಡ್ಜ್ ಸಮಿತಿ-೮,೦೭,೦೮೦ ರು., ಮಹಿಳಾ ಸಮಿತಿ-೨,೪೦,೫೪೫ ರು., ಸ್ವಯಂಸೇವಕರು ಮತ್ತು ಉಸ್ತುವಾರಿ ಸಮಿತಿ-೧೧,೧೦,೦೦೦ ರು., ಸಾರಿಗೆ ಸಮಿತಿ-೭೮,೮೩,೬೫೮ ರು., ವಸ್ತು ಪ್ರದರ್ಶನ ಸಮಿತಿ-೪,೦೨,೫೪೩ ರು., ನೋಂದಣಿ ಸಮಿತಿ-೫೨,೪೦,೭೭೧ ರು., ಸಮ್ಮೇಳನ ಜಾಗದ ಪೂರ್ವಭಾವಿ ಹಾಗೂ ಯಥಾಸ್ಥಿತಿಗೊಳಿಸುವ ಕಾಮಗಾರಿ ವೆಚ್ಚ-೨೮,೦೩,೭೭೮ ರು., ಸಾಹಿತ್ಯ ಸಮ್ಮೇಳನ ಕಚೇರಿ ನವೀಕರಣ-೧,೫೦,೦೦೦ ರು., ಕಚೇರಿ ವೆಚ್ಚ-೪,೦೧,೭೮೫ ರು., ಕನ್ನಡ ಜ್ಯೋತಿ ರಥ ನಿರ್ವಹಣಾ ಸಮಿತಿ-೩೪,೭೦,೫೪೦ ರು., ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ಆಸನ ವ್ಯವಸ್ಥೆ-೫೩,೭೦,೦೦೦ ರು., ಕನ್ನಡ ಸಾಹಿತ್ಯ ಪರಿಷತ್ತಿನ ಪಾರಂಪರಿಕ ಚಟುವಟಿಕೆಗಳ ವೆಚ್ಚ-೨,೫೦,೦೦,೦೦೦ ರು. ವೆಚ್ಚ ಮಾಡಿರುವುದಾಗಿ ಹೇಳಿದರು.

ಗೋಷ್ಠಿಯಲ್ಲಿ ಜಿಪಂ ಸಿಇಓ ಕೆ.ಆರ್.ನಂದಿನಿ, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಸಮ್ಮೇಳನದ ಮಾಜಿ ಸಂಚಾಲಕಿ ಮೀರಾ ಶಿವಲಿಂಗಯ್ಯ ಹಾಜರಿದ್ದರು.ಲೆಕ್ಕ-ಪತ್ರ ನೀಡಲು ವಿಳಂಬವಾಗಿಲ್ಲ: ಡಾ.ಕುಮಾರ

ಸಮ್ಮೇಳನದ ಲೆಕ್ಕಪತ್ರ ನೀಡುವುದಕ್ಕೆ ವಿಳಂಬವಾಗಿಲ್ಲ. ಸಮ್ಮೇಳನದ ಸಂಪೂರ್ಣ ವೆಚ್ಚವನ್ನು ಭರಿಸಿದ ನಂತರ ಲೆಕ್ಕಪತ್ರವನ್ನು ಮಂಡಿಸಬೇಕು. ಆರ್ಥಿಕ ವರ್ಷಾಂತ್ಯದ ತಿಂಗಳಲ್ಲಿ ಎಲ್ಲಾ ಬಿಲ್ಲುಗಳನ್ನು ಖಜಾನೆಗೆ ನೀಡಬೇಕಿದ್ದು, ಮಾ.೨೮ಕ್ಕೆ ಬಿಲ್ಲುಗಳ ಸಲ್ಲಿಕೆ ಕಾರ್ಯ ಅಂತಿಮಗೊಂಡಿದೆ. ಹೀಗಾಗಿ ಲೆಕ್ಕಪತ್ರ ನೀಡಲು ವಿಳಂಬವಾಗಿಲ್ಲ ಎಂಬುದನ್ನು ಜಿಲ್ಲಾಧಿಕಾರಿ ಡಾ.ಮಾರ ಸ್ಪಷ್ಟಪಡಿಸಿದರು.

ಸಮ್ಮೇಳನಕ್ಕೆ ರಚಿಸಲಾಗಿದ್ದ ೨೮ ಸಮಿತಿಗಳಿಂದ ವೆಚ್ಚವಾದ ಬಿಲ್‌ಗಳ ಮಾಹಿತಿಯನ್ನು ತರಿಸಿಕೊಂಡು ಯಾರು ಯಾರಿಗೆ ಎಷ್ಟೆಷ್ಟು ಹಣ ಸಂದಾಯವಾಗಿದೆ, ಸಂದಾಯವಾಗಬೇಕಿರುವ ಬಾಕಿ ಹಣ ಎಷ್ಟು, ಜಿಎಸ್‌ಟಿ ಬಾಬ್ತು, ಕೈಗಾರಿಕಾ ಘಟಕಗಳು, ವಿವಿಧ ಸಂಘ-ಸಂಸ್ಥೆಗಳು, ಪ್ರಾಯೋಜಕತ್ವ ವಹಿಸಿಕೊಂಡವರಿಂದ ಲೆಕ್ಕ-ಪತ್ರಗಳನ್ನೆಲ್ಲಾ ತರಿಸಿಕೊಂಡು ಪಾರದರ್ಶಕವಾಗಿ ಲೆಕ್ಕಪತ್ರ ಮಂಡಿಸಲಾಗಿದೆ ಎಂದು ಹೇಳಿದರು.ಟೀಕೆಗಳಿಗೆ ಹೆದರುವ ಅಗತ್ಯವಿಲ್ಲ: ಚಲುವರಾಯಸ್ವಾಮಿ

ಟೀಕೆಗಳಿಗೆಲ್ಲಾ ಹೆದರುವ ಅಗತ್ಯವಿಲ್ಲ. ತಪ್ಪು ಮಾಡಿದ್ದರೆ ಹೆದರಬೇಕಿತ್ತು. ಪಾರದರ್ಶಕವಾಗಿ ಲೆಕ್ಕ-ಪತ್ರ ಮಂಡಿಸಲಾಗಿದೆ. ಸರ್ಕಾರದ ನಿಯಮಾನುಸಾರವಾಗಿಯೇ ಪ್ರಕ್ರಿಯೆಗಳನ್ನು ನಡೆಸಬೇಕು. ಸಾರ್ವಜನಿಕರ ಹಣ ಖರ್ಚು ಮಾಡುವಾಗ ಜವಾಬ್ದಾರಿಯುತವಾಗಿರಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಸಮ್ಮೇಳನ ಅಭೂತಪೂರ್ವವಾಗಿ ಯಶಸ್ಸು ಕಂಡಿದೆ. ಎಲ್ಲೆಡೆಯಿಂದ ಸಮ್ಮೇಳನಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಚರಿತ್ರಾರ್ಹ ಸಮ್ಮೇಳನವೆಂಬ ಖ್ಯಾತಿ ಗಳಿಸಿದೆ. ಎಲ್ಲರೂ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಕೆಲವರು ಸಮ್ಮೇಳನದ ಯಶಸ್ಸನ್ನು ಕಂಡು ಹೆಮ್ಮೆಪಡುವ ಬದಲು ದುರುದ್ದೇಶಪೂರ್ವಕವಾಗಿ ಟೀಕೆ ಮಾಡುತ್ತಾರೆ. ಅವರಿಗೂ ಧನ್ಯವಾದಗಳು ಎಂದರು.

ಉಳಿಕೆ ಹಣ ೨.೫೩ ಕೋಟಿ ರು. ಹಣದ ಜೊತೆಗೆ ೨ ಕೋಟಿ ರು. ಸೇರಿಸಿ ಕನ್ನಡ ಭವನವನ್ನು ನಿರ್ಮಾಣ ಮಾಡಲಾಗುವುದು. ಭವನ ನಿರ್ಮಾಣಕ್ಕೆ ಈಗಾಗಲೇ ಚಿಕ್ಕಮಂಡ್ಯದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಆದಷ್ಟು ಬೇಗ ಸ್ಥಳ ಅಂತಿಮಗೊಳಿಸುವುದು ಎಂದರು.ಮಹೇಶ್ ಜೋಶಿ ಲೆಕ್ಕ ಬಾಕಿ

ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ೨.೫೦ ಕೋಟಿ ರು.ಗೆ ಲೆಕ್ಕ ಕೊಡುವುದು ಬಾಕಿ ಇದೆ. ಅದನ್ನು ಆದಷ್ಟು ಬೇಗ ತರಿಸಿಕೊಳ್ಳಲಾಗುವುದು. ಇಂದಿನ ಗೋಷ್ಠಿಗೆ ಅವರನ್ನೂ ಆಹ್ವಾನಿಸಲಾಗಿತ್ತು. ಕಾರಣಾಂತರಗಳಿಂದ ಬಂದಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಂಡ್ಯಕ್ಕೆ ಬರುವುದಕ್ಕೆ ಜೋಶಿ ಅವರಿಗೆ ಯಾವ ಭಯವೇನೂ ಇಲ್ಲ. ಅವರನ್ನು ಭಯಪಡಿಸುವವರು ಇಲ್ಲಿ ಯಾರೂ ಇಲ್ಲ. ಒಮ್ಮೆ ಪೊಲೀಸ್ ಭದ್ರತೆ ಕೇಳಿದರೆ ದೊರಕಿಸಲಾಗುವುದು ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಸ್ಮರಣ ಸಂಚಿಕೆಯನ್ನು ಆದಷ್ಟು ಬೇಗ ಬಿಡುಗಡೆಗೊಳಿಸುವುದಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ನುಡಿದರು.

Share this article