ಹಾನಗಲ್ಲ: ಸಾರ್ವಜನಿಕರ ಸಹಭಾಗಿತ್ವದ ೫೦ ಹಾಗೂ ೫೦ರ ಯೋಜನೆಯಡಿ ತಾಲೂಕಿನಲ್ಲಿ ೩.೬೦ ಕೋಟಿ ರು. ವೆಚ್ಚದಲ್ಲಿ ೧೨೮ ಸರ್ಕಾರಿ ಶಾಲೆಗಳಿಗೆ ಸರ್ಕಾರದ ಅನುದಾನವನ್ನು ಹೊರತುಪಡಿಸಿ ಅಗತ್ಯ ಸೌಲಭ್ಯ ಒದಗಿಸಲಾಗಿದ್ದು, ಇದು ರಾಜ್ಯದಲ್ಲಿಯೇ ಗಮನ ಸೆಳೆದ ಶಾಲಾಭಿವೃದ್ಧಿ ಯೋಜನೆಯಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ನಾವು ಮಾಡುವ ಕಾರ್ಯದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ಈ ದೇಶಕ್ಕೆ ಭದ್ರ ಬುನಾದಿ ಹಾಕಬೇಕಾದರೆ ಶಿಕ್ಷಣದ ವ್ಯವಸ್ಥೆ ಸುಧಾರಿಸಬೇಕಿದೆ. ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು ಶಾಲೆಗಳ ಸುಧಾರಣೆಗೆ ಸೇರಿಸುವಷ್ಟೇ ಹಣವನ್ನು ವೈಯಕ್ತಿಕವಾಗಿ ನೀಡಲಾಗುತ್ತಿದೆ. ಇದರಿಂದ ಡೆಸ್ಕ್, ಸ್ಮಾರ್ಟ್ ಕ್ಲಾಸ್, ವಿಜ್ಞಾನ ಮತ್ತು ಗಣಿತ ಉಪಕರಣ ಸೇರಿದಂತೆ ಅಗತ್ಯ ಸಾಮಗ್ರಿ ಒದಗಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ಪರಿವರ್ತನ ಕಲಿಕಾ ಕೇಂದ್ರ ಆರಂಭಿಸಲಾಗಿದೆ. ಬದಲಾದ ಇಂದಿನ ಕಾಲಘಟ್ಟದಲ್ಲಿ ಬರೀ ಪಠ್ಯಪುಸ್ತಕ ಓದುವುದರಿಂದ ಸಾಧನೆ ಸಾಧ್ಯವಿಲ್ಲ. ಹಾಗಾಗಿ ಕಂಪ್ಯೂಟರ್ ಲ್ಯಾಬ್ ಸ್ಥಾಪಿಸಿ ಜಾಗತಿಕ ವಿದ್ಯಮಾನಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ ಎಂದರು.
ಶಿ ಫಾರ್ ಸೊಸೈಟಿಯ ಸಂಸ್ಥಾಪಕಿ ಹರ್ಷಿಣಿ ವೆಂಕಟೇಶ ಮಾತನಾಡಿ, ಡಿಜಿಟಲ್ ಕರ್ನಾಟಕ ಕನಸಿನ ಸಾಕಾರಕ್ಕೆ ಕೆಲಸ ಮಾಡುತ್ತಿದ್ದೇವೆ. ಸಾಕಷ್ಟು ಕಷ್ಟಪಟ್ಟು ದಾನಿಗಳಿಂದ ನೆರವು ಸಂಗ್ರಹಿಸಿ ಗ್ರಾಮೀಣ ಭಾಗದಲ್ಲಿ ಕಂಪ್ಯೂಟರ್ ಲ್ಯಾಬ್ ಆರಂಭಕ್ಕೆ ಮುಂದಾಗಿದ್ದೇವೆ. ಹಾನಗಲ್ ತಾಲೂಕಿನಲ್ಲಿ ನಮ್ಮೊಂದಿಗೆ ಶಾಸಕ ಶ್ರೀನಿವಾಸ ಮಾನೆ ಅವರೂ ಸಹ ಕೈ ಜೋಡಿಸಿ, ಅರ್ಧ ಹಣ ವೈಯಕ್ತಿಕವಾಗಿ ನೀಡಿದ್ದಾರೆ. ರಾಜ್ಯದ ೨೦ ಜಿಲ್ಲೆಗಳಲ್ಲಿ ೪೯ ಲ್ಯಾಬ್ ಆರಂಭಿಸಲಾಗಿದ್ದು, ಶಾಸಕ ಶ್ರೀನಿವಾಸ ಮಾನೆ ಅವರ ಸಹಕಾರದಲ್ಲಿ ತಾಲೂಕಿನಲ್ಲಿ ಶೈಕ್ಷಣಿಕವಾಗಿ ಮತ್ತಷ್ಟು ಕೆಲಸ ಮಾಡುವ ಉತ್ಸಾಹವಿದೆ. ಇಂತಹ ಶಾಸಕರು ಅಪರೂಪ ಮತ್ತು ವಿರಳ ಎಂದರು.ಶಿ ಫಾರ್ ಸೊಸೈಟಿಯ ನಿರ್ದೇಶಕಿ ಸಂಧ್ಯಾ ವೆಂಕಟರಾಮನ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮರಗಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಶಂಕ್ರಣ್ಣ ತಾವರಗೇರಿ, ಶ್ರೀಕಾಂತ ಹರಳೇಶ್ವರ, ಸಿದ್ದನಗೌಡ ಪಾಟೀಲ, ತಿಮ್ಮಣ್ಣ ಅಲಿಲವಾಡ, ಭರಮಗೌಡ ಪಾಟೀಲ, ನಾಗೇಂದ್ರ ಮುದ್ದಕ್ಕನವರ, ಮಲ್ಲೇಶಪ್ಪ ಸಾವಿಕೇರಿ, ಮುಖಂಡರಾದ ಉಮೇಶ ದಾನಪ್ಪನವರ, ರಾಮಚಂದ್ರಪ್ಪ ಚಿಕ್ಕೇರಿ, ಸೋಮಣ್ಣ ವಾಲಿಕಾರ, ಶಿವಣ್ಣ ಗೊಲ್ಲರ, ಉಮೇಶ ದೊಡ್ಡಮನಿ, ಬಸಣ್ಣ ವಾಲಿಕಾರ, ಕ್ಷೇತ್ರ ಸಮನ್ವಯಾಧಿಕಾರಿ ನಾಗೇಂದ್ರಪ್ಪ ಡಿ., ಇಸಿಒ ಬಿ.ಎನ್. ಸಂಗೂರ, ಮುಖ್ಯಶಿಕ್ಷಕ ಮಹೇಶ ನಾಯಕ, ಡಾ.ವಿರುಪಾಕ್ಷಗೌಡ ಇದ್ದರು.