ಕನ್ನಡಪ್ರಭ ವಾರ್ತೆ ಮದ್ದೂರು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡುವರೆ ವರ್ಷಗಳಿಂದ ಕೊಪ್ಪ ಹೋಬಳಿ ಅಭಿವೃದ್ಧಿಗೆ 300 ರಿಂದ 400 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪದಲ್ಲಿ ಜಿಲ್ಲಾಡಳಿತ, ಜಿಪಂನಿಂದ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಸಚಿವರು ಮಾತನಾಡಿದರು.
ಕೃಷಿ ಇಲಾಖೆಯಿಂದ ಈ ವರ್ಷದ ಏಪ್ರಿಲ್‌ನಿಂದ ಇಲ್ಲಿಯವರೆಗೂ ಕೊಪ್ಪ ಹೋಬಳಿಯ 520 ಫಲಾನುಭವಿಗಳಿಗೆ 150 ಲಕ್ಷ ರು. ಸಹಾಯಧನ ನೀಡಲಾಗಿದೆ. ವಿವಿಧ ಯೋಜನೆಗಳ ಮೂಲಕ ಕೊಪ್ಪ ಹೋಬಳಿಯಲ್ಲಿ ಇಲ್ಲಿಯವರೆಗೆ 1300 ಹೊಸ ಪೌತಿ ಖಾತೆ, 5800 ಹಳೆ ಪೌತಿ ಖಾತೆ ಹಾಗೂ 150 ಪೊಡಿಗಳನ್ನು ಪೌತಿ ಖಾತೆ ಆಂದೋಲನದ ಮೂಲಕ ಮಾಡಲಾಗಿದೆ. ಕೊಪ್ಪದಲ್ಲಿ ನಾಡಕಚೇರಿ ತೆರೆಯಲು 45 ಲಕ್ಷ ರು. ಮಂಜೂರಾಗಿದ್ದು ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.ಕೃಷಿ ಸಚಿವನಾದ ನಂತರವೂ ಸಹ ಪ್ರತಿ ವಾರ ಕನಿಷ್ಠ ಒಂದು ಬಾರಿಯಾದರೂ ಜಿಲ್ಲೆಗೆ ಬಂದು ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತಿದ್ದೇನೆ. ಕಾನೂನಿನ ಪ್ರಕಾರ ಮಾಡಬಹುದಾದ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದರು.
ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳಲ್ಲಿ ಮಂಡ್ಯ ಜಿಲ್ಲೆಗೆ 10 ಸಾವಿರಕ್ಕೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಜಿಲ್ಲೆಯಲ್ಲಿ 49,330 ಫಲಾನುಭವಿಗಳಿಗೆ ಕೃಷಿ ಇಲಾಖೆಯ ವಿವಿಧ ಯೋಜನೆಗಳಿಂದ 2390.80 ಲಕ್ಷ ರು. ಸಹಾಯಧನ ನೀಡಲಾಗಿದೆ. ಒಬ್ಬರಿಗೆ ಸುಮಾರು 50 ಲಕ್ಷದವರೆಗೂ ಸಬ್ಸಿಡಿ ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 18.31 ಸಾವಿರ ಕಂದಾಯ ಇಲಾಖೆ ದಾಖಲೆ ಹಾಳೆಗಳನ್ನು ಈಗಾಗಲೇ ಸ್ಕ್ಯಾನ್ ಮಾಡಲಾಗಿದೆ. 33 ಸಾವಿರ ಕಂದಾಯ ಪ್ರಕರಣ ಇತ್ಯರ್ಥ ಮಾಡಲಾಗಿದೆ ಎಂದರು.ರಾಜ್ಯದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದವರು ಇಂದು ರಾಷ್ಟ್ರ ಮಟ್ಟದಲ್ಲಿ ಘೋಷಣೆ ಮಾಡಿದ್ದಾರೆ. ಆದರೆ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡಿದಷ್ಟು ಇನ್ಯಾವುದೇ ರಾಜ್ಯಗಳಲ್ಲಿ ನೀಡಿಲ್ಲ. ಪಂಚ ಗ್ಯಾರಂಟಿಗಳ ಮೂಲಕ ಪ್ರತಿ ತಾಲೂಕಿಗೆ ವಾರ್ಷಿಕ 250 ಕೋಟಿ ರು. ಅನುದಾನ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲೂ ಸಹ ಗ್ಯಾರಂಟಿ ಯೋಜನೆ ಮುಂದುವರೆಯುತ್ತದೆ. 2028ರ ಚುನಾವಣೆಯಲ್ಲೂ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪಂಚ ಗ್ಯಾರಂಟಿ ಘೋಷಿಸಲಾಗುವುದು ಎಂದರು.
ಜಿಲ್ಲೆಯ ರೈತರ ಬೇಡಿಕೆಗೆ ಸ್ಪಂದಿಸಿ ಮುಂದಿನ ಸೋಮವಾರದಿಂದ ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ನೋಂದಣಿ ರೈತರಿಂದ ಬಂದಿಲ್ಲವಾದರು ಭತ್ತ ಮತ್ತು ರಾಗಿ ಖರೀದಿ ಪ್ರಾರಂಭಿಸಲಾಗುವುದು ಎಂದರು.ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, 3500 ಕೋಟಿ ಅನುದಾನವನ್ನು
ಜಿಲ್ಲೆಯ ನೀರಾವರಿ ಅಭಿವೃದ್ಧಿಗೆ ಕೃಷಿ ಸಚಿವರು ತಂದಿದ್ದಾರೆ. ಕೊಪ್ಪ ಭಾಗದ ವಿವಿಧ ಕಾಮಗಾರಿಗಳಿಗೆ 137.99 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.ಇದೇ ವೇಳೆ ಸಚಿವರು ನಂತರ ಕೊಪ್ಪ ಹೋಬಳಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಿದರು. ನಂತರ ದರಖಾಸ್ತು ಪೋಡಿ ಆಂದೋಲನದ ಫಲಾನುಭವಿಗಳಿಗೆ ಪತ್ರ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಜಿಲ್ಲಾಧಿಕಾರಿ ಡಾ.ಕುಮಾರ್, ಸಿಇಒ ಕೆ.ಆರ್.ನಂದಿನಿ, ಮಂಡ್ಯ ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ನಿರ್ದೇಶಕ ಬ್ಯಾಂಕ್ ನಿರ್ದೇಶಕ ಕೆ.ಸಿ.ಜೋಗಿಗೌಡ, ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ತಾಪಂ ಆಡಳಿತಾಧಿಕಾರಿ ಡಾ.ಶಿವಲಿಂಗಯ್ಯ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ರಾಮಲಿಂಗಯ್ಯ, ಕೊಪ್ಪ ಗ್ರಾಪಂ ಅಧ್ಯಕ್ಷ ಸಂತೋಷ್ ಕೊಟ್ಟಿಗೆಯಾರ್ ಮತ್ತಿತರರು ಇದ್ದರು.