ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದಲ್ಲಿನ ತಾಪಂ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ಅದೇ ಸ್ಥಳದಲ್ಲಿ ಸುಸಜ್ಜಿತ ತಾಪಂ ನೂತನ ಕಟ್ಟಡ ನಿರ್ಮಿಸಲು ಸರ್ಕಾರದಿಂದ 5 ಕೋಟಿ ರು. ಮಂಜೂರು ಮಾಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ತಾಪಂ ಕಟ್ಟಡ ನಿರ್ಮಾಣಕ್ಕೆ ಮೊದಲ ಹಂತವಾಗಿ 1 ಕೋಟಿ ರು. ಹಣ ಬಿಡುಗಡೆಯಾಗಿದೆ ಎಂದರು.
ಹಲವು ವರ್ಷಗಳಿಂದ ತಾಪಂ ಕಚೇರಿ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಅಧಿಕಾರಿಗಳ ಸಭೆ ನಡೆಸಲು ಸೂಕ್ತ ಸಭಾಂಗಣವಿಲ್ಲ. ಶಾಸಕರು ಕೂರಲು ಒಂದು ಕೊಠಡಿ ಇಲ್ಲ. ಹಾಗಾಗಿ ಈ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಸುಸಜ್ಜಿತವಾಗಿ ಕಟ್ಟಡ ನಿರ್ಮಿಸಬೇಕೆಂದು ತೀರ್ಮಾನಿಸಿ ಸರ್ಕಾರದಿಂದ ಅಗತ್ಯ ಅನುದಾನ ಮಾಡಿಸಿದ್ದೇನೆ ಎಂದರು.ಜಿಪಂ ಸಿಇಒ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕಟ್ಟಡದ ನೀಲಿನಕ್ಷೆಯಲ್ಲಿರುವ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿ ಸುಸಜ್ಜಿತವಾದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು.
ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಬೆಳ್ಳೂರು ಹೋಬಳಿ ವಿವಿಧ ಗ್ರಾಮಗಳಿಗೆ ಭೇಟಿಕೊಟ್ಟು ಅಲ್ಲಿನ ಮೂಲ ಸೌಕರ್ಯಗಳ ಕುರಿತು ಸ್ಥಳೀಯ ಜನರಿಂದ ಅಗತ್ಯ ಮಾಹಿತಿ ಪಡೆದುಕೊಳ್ಳಲಾಗಿದೆ. ಇಂದು ನಡೆಸಿದ ಸಭೆಯಲ್ಲಿ ತಾಪಂ, ಕಂದಾಯ ಹಾಗೂ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಜನರು ಅಹವಾಲು ಸಲ್ಲಿಸಿದ್ದಾರೆ. ಈ ಪೈಕಿ ಕೆಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗಿದೆ ಎಂದರು.ಇನ್ನುಳಿದ ಅಹವಾಲು ಅರ್ಜಿಗಳನ್ನು ಆಯಾ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿ ಜನರನ್ನು ಕಚೇರಿಗಳಿಗೆ ಅಲೆದಾಡಿಸದೆ ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಜನ ಜಾನುವಾರುಗಳ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸಾಕಷ್ಟು ಎಚ್ಚರಿಕೆ ವಹಿಸಿದ್ದೇವೆ. ಸದ್ಯ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಬಗ್ಗೆ ವರದಿಯಾಗಿಲ್ಲ. ಆದರೂ ಕೂಡ ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವವರೆಗೂ ತಾಲೂಕು ಮತ್ತು ಜಿಲ್ಲೆಯ ಯಾವುದೇ ಹಳ್ಳಿಯಲ್ಲಿಯೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ತಾಪಂ ಇಓ ಪ್ರತಿ ವಾರ ಮೇಲುಸ್ತುವಾರಿ ವಹಿಸಿ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ನಿರ್ದೇಶಿಸಿದರು.ಮಾ.21 ರಿಂದ ಆರಂಭವಾಗುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ 6 ಕೇಂದ್ರಗಳಲ್ಲಿ 2324 ಮಂದಿ ವಿದ್ಯಾರ್ಥಿಗಳು ರೀಕ್ಷೆ ಬರೆಯಲಿದ್ದಾರೆ. ಮಕ್ಕಳು ಭಯಪಡದೆ ಪರೀಕ್ಷೆ ಬರೆಯುವ ಕುರಿತು ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರಿಗೆ ಕಾರ್ಯಾಗಾರ ನಡೆಸಿ ತರಬೇತಿ ನೀಡಲಾಗಿದೆ. ರಾಜ್ಯದಲ್ಲಿಯೇ ಜಿಲ್ಲೆಗೆ ಉತ್ತಮ ಫಲಿತಾಂಶ ಬರುವಂತೆ ಜಿಲ್ಲೆಯ ಎಲ್ಲಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಧೈರ್ಯವಾಗಿ ತಾಳ್ಮೆಯಿಂದ ಪರೀಕ್ಷೆ ಬರೆದು ಅತಿ ಹೆಚ್ಚು ಅಂಕದೊಂದಿಗೆ ಉತ್ತೀರ್ಣರಾಗಬೇಕೆಂದು ಶುಭಹಾರೈಸಿದರು.
ತಾಲೂಕಿನಲ್ಲಿಯೂ ಕೂಡ ಗಾಂಜಾ ಮಾರಾಟ ಹೆಚ್ಚಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ನಿಯಂತ್ರಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡಲಾಗುತ್ತಿದೆ. ಗಾಂಜಾ ಮಾರಾಟ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಎಸ್‌ಪಿ ಅವರಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದರು.ಈ ವೇಳೆ ಜಿಪಂ ಸಿಇಒ ಕೆ.ಆರ್.ನಂದಿನಿ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಕೆಆರ್‌ಡಿಎಲ್‌ನ ಇಇ ಸೋಮಶೇಖರ್, ಸೆಸ್ಕಾಂ ಇಇ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್, ಸಿಪಿಐ ನಿರಂಜನ್, ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ಅರ್ಚನಾ, ಅರಣ್ಯಾಧಿಕಾರಿ ಸಂಪತ್‌ಪಟೇಲ್, ಸಿಡಿಪಿಓ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಪುರಸಭೆ ಅಧ್ಯಕ್ಷ ಅಲಿ ಅನ್ಸರ್‌ಪಾಷ ಸೇರಿದಂತೆ ಹಲವರು ಇದ್ದರು.