ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನವನದಲ್ಲಿ ಮಂಗಳವಾರ ಪೆಟ್ರೋಲ್ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಮೃತ ರೈತನ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಕೆ.ಆರ್.ಪೇಟೆ ತಾಲೂಕು ಮೂಡನಹಳ್ಳಿಯ ಮಂಜೇಗೌಡ (55) ಆತ್ಮಹತ್ಯೆಗೆ ಯತ್ನಿಸಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟ ಹಿನ್ನೆಲೆಯಲ್ಲಿ ಸಚಿವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಮೃತ ರೈತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೃತ ಮಂಜೇಗೌಡರು ಕೆ.ಆರ್. ಪೇಟೆ ತಾಲೂಕಿನ ಮಲ್ಲೇನಹಳ್ಳಿಯ ಸ.ನಂ. 103ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಬೀಳು ಜಾಗದಲ್ಲಿ ಕಲ್ಲುಗಳನ್ನು ತೆಗೆದು ವ್ಯವಸಾಯ ಮಾಡುತ್ತಿದ್ದರು. ಸದರಿ ಜಾಗ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಇಲಾಖೆ ಸಿಬ್ಬಂದಿ ಸ.ನಂ. 103 ರಲ್ಲಿ ವ್ಯವಸಾಯ ಮಾಡಬಾರದು ಎಂದು ತಿಳಿಸಿದ್ದರು.ಮಂಜೇಗೌಡ ತಮ್ಮ ಕುಟುಂಬದಲ್ಲಿ 10 ಜನ ವಾಸವಾಗಿದ್ದು, ಯಾವುದೇ ಜಮೀನು ಇಲ್ಲ ಎಂದು ಮನವಿ ಸಲ್ಲಿಸಿದ್ದಾರೆ. ಆದರೆ, ದಾಖಲೆಗಳನ್ನು ಪರಿಶೀಲಿಸಿ ನೋಡಿದಾಗ ಮಂಜೇಗೌಡರ ಹೆಸರಿನಲ್ಲಿ ಒಟ್ಟು 4 ಎಕರೆ 1 ಗುಂಟೆ ಪಹಣಿಯಿರುವುದು ಕಂಡು ಬಂದಿದೆ ಎಂದು ಹೇಳಿದರು.
ಮಂಜೇಗೌಡ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ2014ರ ಆ.14 ರಲ್ಲಿ 3.50 ಲಕ್ಷ ರು. ಬೆಳೆ ಸಾಲ ಪಡೆದಿದ್ದು ಪ್ರಸ್ತುತ 7, 79,613 ರು. ಬಾಕಿ ಸಾಲ ಪಾವತಿ ಮಾಡದೇ ಉಳಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಕುಟುಂಬಸ್ಥರು ಸಚಿವರಿಗೆ ನೀಡಿದರು. ನಂತರ ಮೃತ ರೈತನ ಕುಟುಂಬಸ್ಥರಿಗೆ ಸಚಿವರು 5 ಲಕ್ಷ ರು. ಪರಿಹಾರ ಘೋಷಿಸಿದರು. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಹೆಚ್ಚುವರಿ ಪರಿಹಾರ ನೀಡುವುದಾಗಿ ಭರವಸೆ ಕೊಟ್ಟರು.ಮೃತ ರೈತನ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸದರಿ ಜಾಗವನ್ನು ಜಂಟಿ ಸರ್ವೇ ನಡೆಸಿ ಸ್ಥಳವೇನಾದರೂ ಅರಣ್ಯ ಇಲಾಖೆಗೆ ಒಡೆತನಕ್ಕೆ ಸೇರದಿದ್ದರೆ ಸದರಿ ಜಾಗವನ್ನು ಕುಟುಂಬಸ್ಥರಿಗೆ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್ ಸೇರಿದಂತೆ ಇತರರು ಇದ್ದರು.