ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕೆಲವರು ಮದುವೆ ಹುಡುಗನ ವೇಷದೊಂದಿಗೆ ಸೇರಿದ ರೈತರು, ಕೃಷಿಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಳ್ಳಬೇಕೆಂದಿರುವ ಯುವ ರೈತರಿಗೆ ಹೆಣ್ಣು ಸಿಗುತ್ತಿಲ್ಲ. ಹೆಣ್ಣು ಮಕ್ಕಳ ಪೋಷಕರು ಕೃಷಿ ಮಾಡುವ ರೈತನ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಇದರಿಂದ ಯುವ ರೈತರಿಗೆ ಬದುಕಿನ ಗ್ಯಾರಂಟಿ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ಕಡೆ ನಿರುದ್ಯೋಗ ಸಮಸ್ಯೆ, ರಾಜ್ಯ ಸರ್ಕಾರದಿಂದ ಯಾವುದೇ ಸರ್ಕಾರಿ ಕೆಲಸಕ್ಕೆ ನೇಮಕಾತಿಯಾಗಿಲ್ಲ. ಸರ್ಕಾರದ ನೀತಿಯಿಂದಾಗಿ ಖಾಸಗಿ ಕಂಪನಿಗಳು ಕರ್ನಾಟಕಕ್ಕೆ ಉದ್ಯಮ ಸ್ಥಾಪನೆಗಾಗಿ ಬರುತ್ತಿಲ್ಲ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲ. ಇತ್ತ ಬೆಳೆ ಬೆಳೆಯಲು ನೀರು ಇಲ್ಲ. ಕೃಷಿಯನ್ನು ನಂಬಿಕೊಂಡವರ ಬದುಕು ಮೂರಾಬಟ್ಟೆಯಾಗಿದೆ ಎಂದು ದೂರಿದರು.ಕೃಷಿ ನಂಬಿಕೊಂಡು ಬದುಕು ನಡೆಸುತ್ತಿರುವ ಯುವ ರೈತರಿಗೆ ಹೆಣ್ಣು ಕೊಡುತ್ತಿಲ್ಲ. ಇದರಿಂದ ಯುವ ರೈತರಿಗೆ ಬದುಕಿನ ಗ್ಯಾರಂಟಿ ಇಲ್ಲವಾಗಿದೆ. ಹಾಗಾಗಿ ಸರ್ಕಾರ ಶಾದಿ ಭಾಗ್ಯದ ಮಾದರಿಯಲ್ಲಿ ರೈತರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರದಿಂದ 5 ಲಕ್ಷ ರು.ಗಳ ಪ್ರೋತ್ಸಾಹ ಧನವನ್ನು ನೀಡುವ ಮೂಲಕ ರೈತ ಮಕ್ಕಳನ್ನು ಮದುವೆಯಾಗಲು ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಉತ್ತರ ಕರ್ನಾಟಕ, ಹಳೆಮೈಸೂರು ಭಾಗ ಎನ್ನುವ ತಾರತಮ್ಯವಿಲ್ಲದೆ ಅಖಂಡ ಕರ್ನಾಟಕಕ್ಕೆ ಈ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.