ಕಸದ ಟೆಂಡರ್‌ನಲ್ಲಿ 660 ಕೋಟಿ ಅಕ್ರಮ: ರಮೇಶ್‌

KannadaprabhaNewsNetwork |  
Published : Nov 26, 2026, 04:00 AM IST
ನೂತನ ಪ್ರಾಚಾರ್ಯ ಡಾ.ಅಮೋಘಸಿದ್ಧ ಹಂಜಗಿಗೆ ಸನ್ಮಾನ | Kannada Prabha

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ನಗರ ಪಾಲಿಕೆಗಳ ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ ಸಂಬಂಧ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ(ಬಿಎಸ್‌ಡಬ್ಲ್ಯೂಎಂಎಲ್‌) ಟೆಂಡರ್ ಪ್ರಕ್ರಿಯೆಯಲ್ಲಿ ಸುಮಾರು 660 ಕೋಟಿ ರು. ಮೊತ್ತದ ಬೃಹತ್‌ ಹಗರಣ ನಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ನಗರ ಪಾಲಿಕೆಗಳ ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ ಸಂಬಂಧ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ(ಬಿಎಸ್‌ಡಬ್ಲ್ಯೂಎಂಎಲ್‌) ಟೆಂಡರ್ ಪ್ರಕ್ರಿಯೆಯಲ್ಲಿ ಸುಮಾರು 660 ಕೋಟಿ ರು. ಮೊತ್ತದ ಬೃಹತ್‌ ಹಗರಣ ನಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌.ರಮೇಶ್‌ ಈ ಆರೋಪ ಮಾಡಿದ್ದಾರೆ. ಈ ಹಗರಣ ಸಂಬಂಧ ಬಿಎಸ್‌ಡಬ್ಲ್ಯೂಎಂಎಲ್‌ ಸಿಇಓ ಕರೀಗೌಡ, ಸಿಜಿಎಂ ರಾಜೇಶ್‌ ಎಸ್‌.ವಿ. ಮತ್ತು ಡಿಜಿಎಂ ಚಂದ್ರಶೇಖರ್‌ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ದಾಖಲೆ ಸಹಿತ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ದೂರು ನೀಡಿದ್ದಾರೆ.

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ ಸಂಬಂಧ ಬಿಎಸ್‌ಡಬ್ಲ್ಯೂಎಂಎಲ್‌ ಸಂಸ್ಥೆ 33 ಪ್ಯಾಕೇಟ್‌ಗಳ ಟೆಂಡರ್‌ ಆಹ್ವಾನಿಸಿತ್ತು. ನಂತರ 22 ಪ್ರತ್ಯೇಕ ಟೆಂಡರ್‌ ಆಹ್ವಾನಿಸಲಾಗಿದೆ. ಕಾರ್ಮಿಕರ ಭವಿಷ್ಯ ನಿಧಿ ಇಲಾಖೆ ತನ್ನ ನಡಾವಳಿಯಲ್ಲಿ ಡಿಫಾಲ್ಟ್‌ ಗುತ್ತಿಗೆದಾರರ ಪಟ್ಟಿ ಪ್ರಕಟಿಸಿದ್ದು, ಈ ಗುತ್ತಿಗೆದಾರರಿಗೆ ಯಾವುದೇ ಟೆಂಡರ್‌ ನೀಡಬಾರದು ಎಂದು ನಮೂದಿಸಿದೆ. ಆದರೂ ಬಿಎಸ್‌ಡಬ್ಲ್ಯೂಎಂಎಲ್‌ ಸಂಸ್ಥೆ ಈ ಡಿಫಾಲ್ಟ್‌ ಗುತ್ತಿಗೆದಾರರಿಗೆ ಟೆಂಡರ್‌ ನೀಡಿದೆ. ಈ ಸಂಬಂಧ ಐದು ನಗರ ಪಾಲಿಕೆಗಳ ಆಯುಕ್ತರು ಮೇಲ್ಮನವಿ ಸಲ್ಲಿಸಿದ್ದು, ಇದರಿಂದ ಪಾಲಿಕೆಗಳಿಗೆ 90 ಕೋಟಿ ರು. ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.

ಬಿಎಸ್‌ಡಬ್ಲ್ಯೂಎಂಎಲ್‌ ಸಂಸ್ಥೆಯ ಈ ಟೆಂಡರ್‌ ಸಂಬಂಧ ಕ್ಯಾಬಿನೆಟ್ ಸಬ್‌ ಕಮಿಟಿ ಟಿಪ್ಪಣೆಯಲ್ಲಿ ಶೇ.4.86ರಷ್ಟಿದ್ದ ದರವನ್ನು ಕೆಪಿಪಿಪಿ ಪೋರ್ಟ್‌ಲ್‌ನಲ್ಲಿ ಅಪ್ಲೋಡ್‌ ಮಾಡಿದ ಬಿಡ್‌ದಾರರಿಗೆ ನಿಯಮ ಬಾಹಿರವಾಗಿ ಶೇ.14ರಷ್ಟು ಹೆಚ್ಚುವರಿ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಇದರಿಂದ ಆರ್ಥಿಕ ಇಲಾಖೆಗೆ ಅತ್ಯಧಿಕ ಆರ್ಥಿಕ ಹೊರೆಯಾಗಲಿದೆ ಎಂದು ಆರ್ಥಿಕ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ. ಅಂಜುಂ ಪರ್ವೇಜ್‌ ಅಧ್ಯಕ್ಷತೆಯ ಸಮಿತಿ 3.5 ಕೋಟಿ ರು. ಹೆಚ್ಚುವರಿ ಹೊರೆಯನ್ನು ಬೆಂಗಳೂರಿನ ನಾಗರಿಕರು ಭರಿಸಬೇಕು ಎಂದು ವರದಿ ನೀಡಿದೆ ಎಂದು ಗಮನ ಸೆಳೆದಿದ್ದಾರೆ.

ಬಿಎಸ್‌ಡಬ್ಲ್ಯೂಎಂಎಲ್‌ ಸಂಸ್ಥೆಯ ಅಧಿಕಾರಿಗಳ ತುಘಲಕ್‌ ದರ್ಬಾರಿನಿಮದ ಕೇವಲ 22 ಪ್ಯಾಕೇಜ್‌ಗಳ ಗುತ್ತಿಗೆದಾರರಿಗೆ 659.36 ಕೋಟಿ ರು. ಮೊತ್ತವನ್ನು ಪಾವತಿಸಬೇಕಾಗುತ್ತದೆ. ವಾಸ್ತವದಲ್ಲಿ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ಬಿಡ್ಡುದಾರರು 7 ವರ್ಷಗಳ ಅವಧಿಗೆ 3,844.19 ಕೋಟಿ ರು. ನಮೂದಿಸಿದ್ದಾರೆ. ಆದರೆ, ಬಿಎಸ್‌ಡಬ್ಲ್ಯೂಎಂಎಲ್‌ ಸಂಸ್ಥೆಯ ಕಾನೂನು ಬಾಹಿರ ಆದೇಶದಿಂದ 7 ವರ್ಷಗಳ ಅವಧಿಗೆ 4,504.32 ಕೋಟಿ ರು. ಪಾವತಿಸಬೇಕಾಗಿದೆ. ಇದರಿಂದ ಬಿಎಸ್‌ಡಬ್ಲ್ಯೂಎಂಎಲ್‌ ಸಂಸ್ಥೆಗೆ 659.36 ಕೋಟಿ ರು. ಬೃಹತ್‌ ಮೊತ್ತ ನಷ್ಟವಾಗಲಿದೆ ಎಂದು ಆರೋಪಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಆದೇಶವೊಂದರ ಪ್ರಕಾರ ಟೆಂಡರ್‌ ಸಲ್ಲಿಸಿದ ನಂತರ ಯಾವುದೇ ಮಾರ್ಪಾಡು ಮಾಡುವಂತಿಲ್ಲ. ಆದರೂ ಬಿಎಸ್‌ಡಬ್ಲ್ಯೂಎಂಎಲ್‌ ಸಂಸ್ಥೆಯ ಸಿಇಓ ಕರೀಗೌಡ ಮತ್ತು ಡಿಜಿಎಂ ಚಂದ್ರಶೇಖರ್‌ ಕಾನೂನು ಬಾಹಿರವಾಗಿ ಹಲವು ಅಂಶಗಳನ್ನು ಟೆಂಡರ್‌ ಪ್ರಕ್ರಿಯೆಯಲ್ಲಿ ಮಾರ್ಪಾಡು ಮಾಡಿದ್ದಾರೆ. ಇದು ಸುಪ್ರೀಂ ಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಈ ಹಗರಣ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಮೇಶ್‌ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ಕಮಹಾದೇವಿ ವಿಶ್ವವಿದ್ಯಾಲಯ ಇತರ ವಿಶ್ವವಿದ್ಯಾಲಯಗಳಿಗೆ ಮಾದರಿ
ಪದವಿ ಕಾಲೇಜು ಸ್ಥಾಪನೆಗೆ ₹೪ ಕೋಟಿ ಸಿಎಸ್‌ಆರ್ ನೆರವು