ವಿಜಯ ದಶಮಿ ಉತ್ಸವ, ಸಾವಿರಾರು ಗಣವೇಷಧಾರಿಗಳು ಭಾಗಿಕನ್ನಡಪ್ರಭ ವಾರ್ತೆ ಕಾರವಾರ
ನೂರು ವರ್ಷಗಳನ್ನು ಪೂರೈಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾವಿರಾರು ಗಣವೇಷಧಾರಿಗಳು ವಿಜಯ ದಶಮಿ ಉತ್ಸವದ ಅಂಗವಾಗಿ ನಗರದ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು.ಹಿಂದು ಹೈಸ್ಕೂಲಿನಿಂದ ಆರಂಭವಾದ ಪಥ ಸಂಚಲನ ಗೀತಾಂಜಲಿ ಚಿತ್ರಮಂದಿರ, ಸವಿತಾ ವೃತ್ತ, ಮಾರುತಿ ಗಲ್ಲಿ, ಗ್ರೀನಸ್ಟ್ರೀಟ್, ಪಿಕಳೆ ರಸ್ತೆ, ಕಾಲರುದ್ರೇಶ್ವರ ದೇವಾಲಯ ರಸ್ತೆ, ಕೆಂಚಾ ರಸ್ತೆ, ಕಾಜುಬಾಗ, ಶಂಕರ ಮಠ ರಸ್ತೆ, ಹಬ್ಬುವಾಡ ರಸ್ತೆ ಮೂಲಕ ಹಿಂದು ಹೈಸ್ಕೂಲ್ ಮೈದಾನದಲ್ಲಿ ಸಮಾರೋಪಗೊಂಡಿತು.
ಸಮವಸ್ತ್ರ ಧರಿಸಿ ಶಿಸ್ತಿನಿಂದ ಹೆಜ್ಜೆ ಹಾಕಿದ ಗಣವೇಷಧಾರಿಗಳು ಗಮನ ಸೆಳೆದರು. ಅಭೂತಪೂರ್ವ ಪಥ ಸಂಚಲನದಲ್ಲಿ ಕಾರವಾರ ತಾಲೂಕಿನ ಗ್ರಾಮೀಣ ಭಾಗದಿಂದಲೂ ಸಾಕಷ್ಟು ಜನರು ಪಾಲ್ಗೊಂಡಿದ್ದರು. ಮಹಿಳೆಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಈ ಸಂದರ್ಭ ಆರ್‌ಎಸ್‌ಎಸ್‌ನ ಕರ್ನಾಟಕ ಪ್ರಾಂತದ ಜೇಷ್ಠ ಪ್ರಚಾರಕ ಸು.ರಾಮಣ್ಣ, ನಾವೆಲ್ಲರೂ ಹಿಂದು, ನಾವೆಲ್ಲರೂ ಬಂಧು, ನಾವೆಲ್ಲರೂ ಒಂದು ಎಂದು ಘೋಷಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯನ್ನು ಒಡೆಯಲು ಹಲವರು ಪ್ರಯತ್ನಿಸಿದರು. ಆದರೆ ಯಾರೂ ಸಫಲರಾಗಲಿಲ್ಲ. ಆರ್‌ಎಸ್‌ಎಸ್ ಮತ್ತಿಷ್ಟು ಪ್ರಬಲ ಸಂಘಟನೆಯಾಗಿ ಹೊರಹೊಮ್ಮಿತು. ದೇಶಭಕ್ತ ಸಂಘಟನೆ ಇಂದು ಸಮರೋಪಾದಿಯಲ್ಲಿ ಸಂಘಟಿತವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.ಪಥ ಸಂಚಲನದಲ್ಲಿ ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಅಶೋಕ ಪೈ, ನಾಗರಾಜ ನಾಯಕ, ಪರ್ಬತ್ ನಾಯ್ಕ, ಶಿವಾನಂದ ಶಾನಭಾಗ ಮತ್ತಿತರರು ಪಾಲ್ಗೊಂಡಿದ್ದರು.
ಗೋಕರ್ಣದಲ್ಲಿ ವಿಜಯ ದಶಮಿ ಉತ್ಸವ ಕಾರ್ಯಕ್ರಮರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರತಿಯೊಂದು ಚಟುವಟಿಕೆಯೂ ರಾಷ್ಟ್ರಹಿತದ ಉದ್ದೇಶದಿಂದ ಕೂಡಿದ್ದು, ಇಂದು ನಾವು ಹಿಂದೂ ರಾಷ್ಟ್ರ, ನಾವೆಲ್ಲ ಹಿಂದೂ ಎಂದು ಹೇಳಲು ಆರ್‌ಎಸ್ಎಸ್‌ನ ಶತಮಾನದ ಕಾರ್ಯದ ಫಲವಾಗಿದೆ ಎಂದು ಕರ್ನಾಟಕ ಉತ್ತರದ ಸಹಬೌದ್ಧಿಕ ರಾಮಚಂದ್ರ ಏಡಿಕೆ ಹೇಳಿದರು.ಶನಿವಾರ ಸಂಜೆ ಮೇಲಿನಕೇರಿಯ ವೀರಶೈವ ಮಠದ ಸಭಾವನದಲ್ಲಿ ನಡೆದ ಸಂಘದ ಗೋಕರ್ಣ ಮಂಡಲ ವ್ಯಾಪ್ತಿಯ ವಿಜಯ ದಶಮಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ನೂರು ವರ್ಷದ ಹಿಂದೆ ವಿಜಯ ದಶಮಿಯಂದು ಸ್ಥಾಪನೆಯಾದ ಸಂಘ ಅನೇಕ ಸವಾಲನ್ನ ಸ್ವೀಕರಿಸಿ ದೇಶಾಭಿಮಾನದಿಂದ ಬೃಹತ್ ಸಂಘಟನೆಯಾಗಿ ಬೆಳೆಯಿತು. ದೇಶದ ಸಂಸ್ಕೃತಿ, ಪರಂಪರೆ ಉಳಿವು ಧರ್ಮ ರಕ್ಷಣೆಗೆ ಬದ್ಧವಾಗಿ ಇಂದಿನವರೆಗೂ ನಡೆಯುತ್ತಿದೆ. ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರ ಆದರ್ಶಗಳು ರಾಷ್ಟ್ರ ಕಾರ್ಯಕ್ಕೆ ಪ್ರೇರಣೆಯಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವೇ. ಚಂದ್ರಶೇಖರ ಅಡಿಮೂಳೆ ಮಾತನಾಡಿ, ಹಿಂದೂ ಧರ್ಮದ ರಕ್ಷಣೆಗೆ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಅತಿದೊಡ್ಡ ಕಾರ್ಯ ಮಾಡುತ್ತಿದೆ ಎಂದರು. ಗೋಕರ್ಣ ಮಂಡಲದ ಸಂಘದ ಸಂಚಾಲಕ ಗೋವಿಂದ ಕೆಸನ್ಮನೆ ವೇದಿಕೆಯಲ್ಲಿದ್ದರು. ವಿದ್ವಾನ ಗಣೇಶ್ವರ ದೀಕ್ಷಿತ ಸ್ವಾಗತಿಸಿದರು. ವಿದ್ವಾನ ಶ್ರೀನಾಗ ಅಡಿಮೂಳೆ ವಂದಿಸಿದರು.ಸ್ವಯಂ ಸೇವಕರಾದ ವೇ. ಉದಯ ಮಯ್ಯರ್, ಕುಮಾರ ಮಾರ್ಕಾಂಡೆ, ಗಣಪತಿ ಅಡಿ, ನಾಗೇಶ ಗೌಡ, ಮಹೇಶ ಶೆಟ್ಟಿ, ಸತೀಶ ದೇಶಭಂಡಾರಿ, ಡಾ. ಶೀಲಾ ಹೊಸ್ಮನೆ, ನಿರ್ಮಾಲಾ ಮಾರ್ಕಾಂಡೆ, ಉಷಾ ಪ್ರಸಾದ, ಕಾರ್ತಿಕ ಅಡಿ, ರಮೇಶ ಗೌಡ, ಪ್ರಭಾಕರ ಪ್ರಸಾದ, ನಿತ್ಯಾನಂದ ಶೆಟ್ಟಿ, ರಾಮೆಶ್ವರ ಕುರ್ಲೆ ಮತ್ತಿತರರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.