ಕೊಪ್ಪಳ: ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಕೌಶಲ್ಯವು ಅತ್ಯಂತ ಅಗತ್ಯವಾಗಿದೆ. ಇದನ್ನು ಅರಿತರೇ ಆರ್ಯುವೇದ ಸುಲಭವಾಗುತ್ತದೆ ಎಂದು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಉಪ ಕುಲಪತಿ ಡಾ. ಬಿ.ಸಿ.ಭಗವಾನ್ ಹೇಳಿದರು.
ನಾನು ಶಸ್ತ್ರಚಿಕಿತ್ಸಕನಾದ ಕಾರಣ ಆಯುರ್ವೇದದ ಸೂತ್ರ ಚಿಕಿತ್ಸೆಯ ಮಹತ್ವ ಅರ್ಥಮಾಡಿಕೊಂಡಿದ್ದೇನೆ. ಆಯುರ್ವೇದವು ಪೂರ್ಣ ಚಿಕಿತ್ಸಾ ಪದ್ಧತಿಯಾಗಿದ್ದು, ಅಂತಾರಾಷ್ಟ್ರೀಯ ಮಾನ್ಯತೆ ಪಡೆಯುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ರಾಜ್ಯಾದ್ಯಂತ ಕೌಶಲ್ಯ ಮತ್ತು ಸಿಮ್ಯುಲೇಶನ್ ಲ್ಯಾಬ್ ಸ್ಥಾಪಿಸಲು ಯೋಜನೆ ರೂಪಿಸಿದೆ. ನಶಾಮುಕ್ತ ಭಾರತ ಹಾಗೂ ಅಂಗಾಂಗ ದಾನ ಅಭಿಯಾನಕ್ಕೂ ಚಾಲನೆ ನೀಡಲಾಗಿದೆ ಎಂದರು.ಎನ್.ಸಿ.ಐ.ಎಸ್.ಎಂ (ನವದೆಹಲಿ) ಬೋರ್ಡ್ ಆಫ್ ಆಯುರ್ವೇದದ ಮಾಜಿ ಅಧ್ಯಕ್ಷ ಡಾ.ಬಿ.ಎಸ್.ಪ್ರಸಾದ ಮಾತನಾಡಿ, ಸುಶೃತ ಯೋಗ್ಯಸೂತ್ರೀಯ ಕಲಿಕಾ ಪದ್ಧತಿ ಎಲ್ಲ ಆಯುರ್ವೇದ ಮಹಾ ವಿದ್ಯಾಲಯಗಳು ಅಳವಡಿಸಿಕೊಳ್ಳಬೇಕು. ವೈದ್ಯಕೀಯ ಶಿಕ್ಷಕರು ವಿಮರ್ಶಾತ್ಮಕ ಚಿಂತನೆ ಹಾಗೂ ಸಮಸ್ಯೆ ಪರಿಹಾರದಲ್ಲಿ ನಿಪುಣತೆ ಗಳಿಸಬೇಕು ಎಂದರು.
ಮಹೇಶ್ ಮುದಗಲ್ ಮಾತನಾಡಿ, ಶ್ರೀಗವಿಮಠವು ಸಾಮಾಜಿಕ ಆರೋಗ್ಯ ಸೇವೆಯಲ್ಲಿ ವಿಶಿಷ್ಟ ಪಾತ್ರ ವಹಿಸುತ್ತಿದೆ. ಗವಿಮಠದ ಮೌಲ್ಯಗಳು ಮತ್ತು ಸೇವಾ ಪರಂಪರೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಆಯುರ್ವೇದ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ಡಾ. ಎ.ಐ. ಸಣಕಲ್, ಡಾ. ಲಕ್ಷ್ಮಣಾಚಾರ್ಯ ಡಿಂಗಾರೆ, ಡಾ. ಮಮತಾ ಕೆ.ವಿ, ಡಾ. ಸಿದ್ದೇಶ ಆರಾಧ್ಯಮಠ ಅವರಿಗೆ ಕೌಶಲ್ಯರತ್ನ ಪ್ರಶಸ್ತಿಗಳು ಪ್ರದಾನ ಮಾಡಲಾಯಿತು. ಡಾ.ದಿಲಿಪ್ ಪುರಾಣಿಕ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಲಾಯಿತು.
ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ ವಿದ್ಯಾರ್ಥಿಗಳು ಮತ್ತು ವೈದ್ಯರಿಗೆ ಉತ್ತಮ ಪ್ರಬಂಧ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸೆನೆಟ್ ಸದಸ್ಯರಿಗೆ ಸನ್ಮಾನಿಸಲಾಯಿತು.ಡಾ. ಕೆ.ಬಿ. ಹಿರೇಮಠ, ಡಾ.ಸಿದ್ದನಗೌಡ ಪಾಟೀಲ ಹಾಗೂ ಡಾ.ಎಸ್.ಕೆ. ಬನ್ನಿಗೋಳ ಪಾಲ್ಗೊಂಡಿದ್ದರು.
ಎರಡು ದಿನಗಳ ವಿಚಾರ ಸಂಕಿರಣದ ವರದಿಯನ್ನು ಡಾ.ಗವಿಸಿದ್ದನಗೌಡ ಪಾಟೀಲ ಮಂಡಿಸಿದರು. ಡಾ.ಗಂಗಾಧರ ಮುದಗಲ್ ಸ್ವಾಗತಿಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಗವಿಸಿದ್ದೇಶ ಹಿರೇಮಠ ಮಾತನಾಡಿದರು. ಡಾ.ನೇಹಾ ಹಾಗೂ ಡಾ. ಐಶ್ವರ್ಯ ನಿರೂಪಿಸಿದರು.