ಮುಖ್ಯಮಂತ್ರಿಯಾದ ನಮ್ಮ ಸಮುದಾಯದವರು ರಾಜ್ಯದ ಏಳಿಗೆಗೆ ಭದ್ರ ಬುನಾದಿ ಹಾಕಿ ರಾಜ್ಯದ ಸಾಮಾಜಿಕ ಆರ್ಥಿಕ ಔದ್ಯೋಗಿಕಕ್ಕೆ ಶಕ್ತಿ ಕೊಡುವ ಕೆಲಸ ಮಾಡಿದ್ದಾರೆ.
ಕೊಪ್ಪಳ: ಬಣಜಿಗ ಸಮಾಜ ನಾಡಿಗೆ ಅತ್ಯಂತ ಶ್ರೇಷ್ಠ ಕೊಡುಗೆ ನೀಡಿದ್ದು, ಏಳು ಮುಖ್ಯಮಂತ್ರಿಗಳನ್ನು ಸಮಾಜ ನೀಡಿರುವುದೇ ಇದಕ್ಕೆ ಸಾಕ್ಷಿ ಎಂದು ವಿಧಾನ ಪರಿಷತ್ ವಿಶ್ರಾಂತ ಸಭಾಪತಿ ವೀರಣ್ಣ ಮತ್ತಿಕಟ್ಟಿ ಹೇಳಿದರು.
ನಗರದ ಮಧುಶ್ರೀ ಗಾರ್ಡನ್ ನಲ್ಲಿ ಭಾನುವಾರ ಕೊಪ್ಪಳ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಏಳು ಮುಖ್ಯಮಂತ್ರಿಗಳನ್ನು ಬಣಜಿಗ ಸಮುದಾಯ ನೀಡಿದೆ. ಮುಖ್ಯಮಂತ್ರಿಯಾದ ನಮ್ಮ ಸಮುದಾಯದವರು ರಾಜ್ಯದ ಏಳಿಗೆಗೆ ಭದ್ರ ಬುನಾದಿ ಹಾಕಿ ರಾಜ್ಯದ ಸಾಮಾಜಿಕ ಆರ್ಥಿಕ ಔದ್ಯೋಗಿಕಕ್ಕೆ ಶಕ್ತಿ ಕೊಡುವ ಕೆಲಸ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ನಮ್ಮ ಸಮುದಾಯದವರು ಮುಂಚೂಣಿಯಲ್ಲಿದ್ದರು ಎಂದ ಅವರು, ರಾಜಕೀಯದ ತಮ್ಮ ಒಡನಾಡಿಗಳಾದ ಕೊಪ್ಪಳದ ದಿ.ಅಗಡಿ ಸಂಗಣ್ಣ, ವೀರಣ್ಣ ಮುದುಗಲ್ ಎಂ.ಬಿ. ದಿವಟರ್ ಅವರೊಂದಿಗೆ ನೆನಪು ಮೆಲುಕು ಹಾಕಿದರು.
ಕೊಪ್ಪಳದ ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳ ಅನ್ನದಾಸೋಹ, ವಿದ್ಯಾ ದಾನ, ಧಾರ್ಮಿಕ ಕಾರ್ಯಗಳಿಂದ ಕೊಪ್ಪಳ ಈಗ ರಾಜ್ಯದಲ್ಲಿ ಹೆಸರಾಗಿದೆ ಎಂದರು.
ಸಮಾಜದ ಅಭಿವೃದ್ಧಿ ಮಹಿಳೆಯರ ಕೈಯಲ್ಲಿದ್ದು, ಮಕ್ಕಳಿಗೆ ತಾಯಿ ಮೊದಲ ಗುರು ಹಾಗಾಗಿ ತಾಯಂದಿರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಒಳ್ಳೆಯ ಸಂಸ್ಕಾರ ಕೊಡಬೇಕು ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಬಣಜಿಗ ಸಮುದಾಯ ಒಗ್ಗಟ್ಟಿಗೆ ಏಕತೆಗೆ ಹೆಸರಾಗಿ ಶಕ್ತಿಯುತ ಸಮುದಾಯ ಆಗಿದೆ. ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆಯಾಗಿದ್ದೆ ಕೊಪ್ಪಳದಿಂದ ಎಂಬುದು ಹೆಮ್ಮೆಯ ವಿಷಯ. ನಾನು ಮೂರು ಬಾರಿ ಶಾಸಕ ಆಗಲು ಈ ಸಮುದಾಯದ ಕೊಡುಗೆ ಅಪಾರವಾಗಿದೆ. ಬಣಜಿಗ ಸಮುದಾಯದ ಭವನಕ್ಕೆ ಈ ವರ್ಷ ಒಂದು ವರ್ಷ ಕೋಟಿ, ಮುಂದಿನ ವರ್ಷ ಒಂದು ಕೋಟಿ ಅನುದಾನ ಕೊಡುತ್ತೇನೆ. ಸಿದ್ದರಾಮಯ್ಯ ಸರ್ಕಾರ ವಿಶ್ವಗುರು ಬಸವಣ್ಣನವರ ಭಾವಚಿತ್ರ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಕಲು ಮತ್ತು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದರು.
ಜಮಖಂಡಿಯ ಅಶೋಕ ಹಂಚಲಿ ವಿಶೇಷ ಉಪನ್ಯಾಸ ನೀಡಿದರು. ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ವೀರಣ್ಣ ಬುಳ್ಳಾ ಅಧ್ಯಕ್ಷತೆ ವಹಿಸಿದ್ದರು.
ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ, ಎಂಎಲ್ ಸಿ ಹೇಮಲತಾ ನಾಯಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹು-ಧಾ ಮಹಾನಗರ ಪಾಲಿಕೆ ಸಹಾಯಕ ಆಯುಕ್ತ ಅರವಿಂದ ಜಮಖಂಡಿ, ಅಂದಪ್ಪ ಜವಳಿ, ಗವಿಸಿದ್ದಪ್ಪ ಕೊಪ್ಪಳ, ವಿಶ್ವನಾಥ ಬಳ್ಳೊಳ್ಳಿ, ಬಸವರಾಜ ಕಮಲಾಪುರ, ಗುರುರಾಜ ಹಲಗೇರಿ, ಅರವಿಂದ ಅಗಡಿ, ಅಪರ್ಣಾ ಬಳ್ಳೊಳ್ಳಿ , ಮಂಜುನಾಥ ಅಂಗಡಿ, ರೇಖಾ ಕಡ್ಲಿ , ಸುಧಾ ಶೆಟ್ಟರ್, ಚನ್ನಬಸಪ್ಪ ಬೆಲ್ಲದ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.