ಮುಳಗುಂದ: ಶರಣ ಸಾಹಿತ್ಯದ ಅಧ್ಯಯನಶೀಲರಾಗಿದ್ದ ರೆವರೆಂಡ್ ಉತ್ತಂಗಿ ಚೆನ್ನಪ್ಪನವರ ಸೇವೆ ಅಪಾರವಾಗಿದೆ. ಅವರು ಮಾಡಿದ ಸಮಾಜ ಸೇವೆ, ಸಾಧನೆ, ತ್ಯಾಗ ಅವಿಸ್ಮರಣೀಯ. ಸಮಾಜದ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಗವಿಮಠ ಹಾಗೂ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ಅನುಭವ ಮಂಟಪ ಅಸತ್ಯ ಎಂದವರಿಗೆ ಸತ್ಯವೆಂದು ಸಾಕ್ಷಿ ಸಮೇತ ಅರಿವು ಮೂಡಿಸಿದವರು. ಶರಣ ಸಾಹಿತ್ಯವನ್ನ ಆಳವಾಗಿ ಅಧ್ಯಯನ ಮಾಡಿ, ಆಧುನಿಕ ಸರ್ವಜ್ಞ ಎಂದೆ ಖ್ಯಾತರಾಗಿದ್ದರು. ತ್ಯಾಗ ಜೀವಿಗಳು, ಸಮಾಜ ಸುಧಾರಕರ ಪರಿಚಯ, ಅವರ ಸೇವೆ ಸ್ಮರಿಸುವ ದತ್ತಿ ಉಪನ್ಯಾಸ ಕಾರ್ಯಕ್ರಮ ಶ್ಲಾಘನೀಯ ಎಂದರು.
ಸಾಹಿತಿ ರಮೇಶ ಕಲ್ಲನಗೌಡರ ಮಾತನಾಡಿ, ಉತ್ತಂಗಿ ಚೆನ್ನಪ್ಪನವರ ಕ್ರಿಶ್ಚಿಯನ್ ಧರ್ಮ ಪಾಲಕರಾಗಿದ್ದರೂ ಲಿಂಗಾಯತ ಶರಣ ಸಾಹಿತ್ಯದ ಕುರಿತು ಸಾಕಷ್ಟು ಅಧ್ಯಯನ ಮಾಡಿ ಅದರ ಉಳಿವಿಗೆ ಶ್ರಮಿಸಿದರು ಎಂದರು.ವೈದ್ಯ ಡಾ. ಎಸ್.ಬಿ. ಶೆಟ್ಟರ ಚವಡಿ ಪ್ರತಿಷ್ಠಾನ ಉದ್ಘಾಟಿಸಿ ಮಾತನಾಡಿದರು. ಡಾ. ಅಶೋಕ ಗೋದಿ, ಡಾ. ಎಸ್.ಕೆ. ಜೋಶಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಸಾಪ ಘಟಕದ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಣ್ಣ ನೀಲಗುಂದ, ಬಿಎಂಎಸ್ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ,ಶಿವಕುಮಾರ ಚವಡಿ, ಹೋಬಳಿ ಘಟಕದ ಅಧ್ಯಕ್ಷ ಎಸ್.ಸಿ. ಚವಡಿ ಮೊದಲಾವದರು ಇದ್ದರು. ಈ ವೇಳೆ ಚವಡಿ ಕುಟುಂಬದವರಿಂದ ಕೋಟುಮಚಗಿ ಗ್ರಾಮದ ಗ್ರಂಥಾಲಯ ನಿರ್ಮಾಣಕ್ಕೆ ಭೂಮಿ ದಾನಪತ್ರ ಹಸ್ತಾಂತರಿಸಿದರು. ಆಕಾಶವಾಣಿ ಕಲಾವಿದ ಪ್ರಸಾದ ಸುತಾರ ಅವರಿಂದ ಸಂಗೀತ ನಡೆಯಿತು.