ಕಲಬುರಗಿ / ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ವಿಜಯದಶಮಿ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ನಡೆಸಿದ ಆಕರ್ಷಕ ಪಥ ಸಂಚಲನ ಸಾರ್ವಜನಿಕರ ಗಮನ ಸೆಳೆಯಿತು.
ಇದೇ ವೇಳೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತವರು ಕ್ಷೇತ್ರ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ, ಹುಬ್ಬಳ್ಳಿ, ನಂಜನಗೂಡು, ಬಾಗಲಕೋಟೆ, ಶಿವಮೊಗ್ಗ ಸೇರಿ ರಾಜ್ಯದ ಇತರೆಡೆಯೂ ಆರ್‌ಎಸ್‌ಎಸ್ ಮಾರ್ಚ್ ಫಾಸ್ಟ್ ಶಾಂತಿಯುತವಾಗಿ ನಡೆಯಿತು.
ಕಲಬುರಗಿಯಲ್ಲಿ ಆರ್‌ಎಸ್‌ಎಸ್ ಆಯೋಜನೆ ಮಾಡಿದ್ದ ಭಾನುವಾರದ ಪಥ ಸಂಚಲನಕ್ಕೆ 18 ಷರತ್ತುಗಳನ್ನು ವಿಧಿಸಿ ನಗರ ಪೊಲೀಸ್ ಇಲಾಖೆ ಅನುಮತಿ ನೀಡಿತ್ತು. ಕಲಬುರಗಿಯ ನೆಹರು ಗಂಜ್‌ನಲ್ಲಿರುವ ಎಪಿಎಂಸಿ ಮಾರುಕಟ್ಟೆ ಅಂಗಳದಿಂದ ಶರಣಬಸವೇಶ್ವರರ ಜಾತ್ರಾ ಮೈದಾನದವರೆಗೆ ಸುಮಾರು 3 ಗಂಟೆಗಳ ಕಾಲ ನಡೆದ ಪಥ ಸಂಚಲನ ಶಾಂತಿಯುತವಾಗಿ ಮುಕ್ತಾಯವಾಯಿತು. ಪಥ ಸಂಚಲನದಲ್ಲಿ ಆರ್‌ಎಸ್‌ಎಸ್‌ನ ನೂರಾರು ಗಣವೇಷಧಾರಿಗಳು ಭಾಗಿಯಾಗಿದ್ದರು. ಪಥ ಸಂಚಲನದಲ್ಲಿ ತಾಯಿ ಭಾರತಮಾತೆಯ ಆಳೆತ್ತರದ ಪುಷ್ಪಮಾಲೆಯ ಭಾವಚಿತ್ರ ಗಮನ ಸೆಳೆಯಿತು.
ಹುಬ್ಬಳ್ಳಿಯಲ್ಲಿ ಮಹಾನಗರ ಘಟಕದ ನೇತೃತ್ವದಲ್ಲಿ ನೆಹರು ಮೈದಾನದಿಂದ ಎರಡು ತಂಡಗಳಲ್ಲಿ ಹೊರಟ ಗಣವೇಷಧಾರಿಗಳು ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿದರು. ಪಥಸಂಚಲನದ ವೇಳೆ ಭಾರತಮಾತೆ, ಸ್ವಾಮಿ ವಿವೇಕಾನಂದರು ಹಾಗೂ ಆರ್‌ಎಸ್‌ಎಸ್ ಗಣವೇಷಧಾರಿಗಳ ವೇಷದಲ್ಲಿ ಸಿದ್ಧಗೊಂಡಿದ್ದ ಮಕ್ಕಳು ವಿಶೇಷ ಗಮನ ಸೆಳೆದರು. ರಸ್ತೆ ಬದಿಯಲ್ಲಿ ನಿಂತು ಪಥಸಂಚಲನವನ್ನು ಸ್ವಾಗತಿಸಿದ ಮಕ್ಕಳ ವೇಷಭೂಷಣಗಳು ನೋಡುಗರ ಆಕರ್ಷಣೆಯ ಕೇಂದ್ರವಾಗಿದ್ದವು. ಪಥಸಂಚಲನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಉದ್ಯಮಿ ಡಾ.ವಿ.ಎಸ್.ವಿ.ಪ್ರಸಾದ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.
ಬೆಳಗಾವಿಯಲ್ಲಿ ನಡೆದ ಪಥಸಂಚಲನದಲ್ಲಿ ಸಾವಿರಾರು ಗಣವೇಷಧಾರಿ ಸ್ವಯಂಸೇವಕರು ಬ್ಯಾಂಡ್ ನಿನಾದದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ಸಿಎಂ ಡಿ.ಕೆ.ಶಿವಕುಮಾರ್ ತವರು, ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದಲ್ಲಿ ನಡೆದ ಆರ್‌ಎಸ್‌ಎಸ್ ಪಥ ಸಂಚಲನ ಜನರ ಗಮನ ಸೆಳೆಯಿತು. ಆರ್‌ಎಸ್‌ಎಸ್‌ನ ತುಮಕೂರು ವಿಭಾಗದ ಪ್ರಚಾರಕ ಮಧು ಅವರು ವಿಜಯದಶಮಿ ಹಾಗೂ ರಾಷ್ಟ್ರೀಯ ಪಥಸಂಚಲನ ಕಾರ್ಯಕ್ರಮ ಕುರಿತು ದಿಕ್ಸೂಚಿ ಭಾಷಣ ಮಾಡಿದರು.
ಪಥಸಂಚಲನ ಪ್ರಯುಕ್ತ ನಗರ ಭಾನುವಾರ ಸಂಪೂರ್ಣ ಕೇಸರಿಮಯವಾಗಿತ್ತು. ಸಂಜೆ 4 ಗಂಟೆ ವೇಳೆಗೆ ನಗರದ ಬಸವೇಶ್ವರ ಮೈದಾನದಿಂದ ಎರಡು ಪ್ರತ್ಯೇಕ ಮಾರ್ಗದ ಘೋಷ ಪಥಸಂಚಲನಗಳು ಹೊರಟವು. ಪ್ರತಿ ಮಾರ್ಗದಲ್ಲಿ ತಲಾ ಮೂರು ಘೋಷ್ ವಾಹಿನಿಗಳಿದ್ದವು. ಪಥಸಂಚಲನ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಊರುಗಳಿಂದ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಕ್ರಾಂತಿಕಾರಿಗಳ ವೇಷಭೂಷಣದಲ್ಲಿ ಮಕ್ಕಳು ಮಿಂಚಿದರು.
ಮೈಸೂರಲ್ಲಿ ನಡೆದ ಪಥಸಂಚಲನದಲ್ಲಿ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಸೇರಿ ಹಲವರು ಗಣವೇಷದಾರಿಗಳಾಗಿ ಪಾಲ್ಗೊಂಡಿದ್ದರು. ತೆರೆದ ಜೀಪ್‌ನಲ್ಲಿ ಆರ್‌ಎಸ್‌ಎಸ್ ಸ್ಥಾಪಕರ ಭಾವಚಿತ್ರ, ಕೇಸರಿಧ್ವಜ ಕಟ್ಟಲಾಗಿತ್ತು. ಎರಡು ಬ್ಯಾಂಡ್ ಸೆಟ್ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಬೆಂಗಳೂರಿನ ಜಯನಗರದಲ್ಲಿ ಆಯೋಜಿಸಿದ್ದ ಪಥ ಸಂಚಲನದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪಾಲ್ಗೊಂಡಿದ್ದರು.
ಇದೇ ವೇಳೆ, ಹೊಸಪೇಟೆ, ಶಿವಮೊಗ್ಗ, ರಾಮನಗರ, ಚನ್ನಪಟ್ಟಣ, ಬಳ್ಳಾರಿ, ಕಾರವಾರ, ಶಿರಸಿ, ತಿಪಟೂರು, ಗುಂಡ್ಲುಪೇಟೆ ಸೇರಿದಂತೆ ರಾಜ್ಯದ ಇತರೆಡೆಯೂ ಆಕರ್ಷಕ ಪಥ ಸಂಚಲನಗಳು ನಡೆದವು.
ಸುತ್ತೂರು ಶ್ರೀ ಭಾಗಿ:ಮೈಸೂರು ಜಿಲ್ಲೆ ನಂಜನಗೂಡಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಹಾಗೂ ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಪಾಲ್ಗೊಂಡಿದ್ದರು. ಶ್ರೀಕಂಠೇಶ್ವರ ದೇವಾಲಯದ ಮುಂಭಾಗದ ಆವರಣದಿಂದ ವಿದ್ಯಾವರ್ಧಕ ಶಾಲಾ ಮೈದಾನದವರೆಗೆ ಗಣವೇಷಧಾರಿಗಳ ಪಥಸಂಚಲನ ನಡೆಯಿತು.ಬಳಿಕ, ವಿದ್ಯಾವರ್ಧಕ ಶಾಲಾ ಮೈದಾನದಲ್ಲಿ ಬೌದ್ಧಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಸುತ್ತೂರು ಶ್ರೀ, ನೂರು ವರ್ಷಗಳ ಹಿಂದೆ ಸಣ್ಣ ಚಳವಳಿಯಾಗಿ ಆರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ದೇಶ-ವಿದೇಶಗಳಲ್ಲಿ ಸೇವಾ ನದಿಯಾಗಿ ಹರಿಯುತ್ತಿದೆ. ಸಮಾಜದಲ್ಲಿ ಸೇವಾ ಮನೋಭಾವ ಬೆಳೆಸುವ ಮೂಲಕ ರಾಷ್ಟ್ರದ ಉನ್ನತಿಗೆ ಕೊಡುಗೆ ನೀಡುತ್ತಿದೆ ಎಂದು ಅಭಿಪ್ರಾಯಪಟ್ಟರು.ಬೀದರ್‌ನಲ್ಲಿ ಪಥ ಸಂಚಲನ ಅ.31ಕ್ಕೆ ಮುಂದೂಡಿಕೆ:
ಬೀದರ್‌ನಲ್ಲಿ ಭಾನುವಾರ ನಡೆಯಬೇಕಿದ್ದ ಆರ್‌ಎಸ್‌ಎಸ್ ಪಥಸಂಚಲನ ಮುಂದೂಡಿಕೆಯಾಗಿದ್ದು, ಅ.31ರಂದು ಪಥ ಸಂಚಲನಕ್ಕೆ ಅನುಮತಿ ನೀಡಲಾಗಿದೆ. ನಗರದ ಸರಸ್ವತಿ ವಿದ್ಯಾಮಂದಿರದಿಂದ ಭಾನುವಾರ ಮಧ್ಯಾಹ್ನ 3ಕ್ಕೆ ಗಣವೇಷಧಾರಿ ಸ್ವಯಂಸೇವಕರಿಂದ ಪಥಸಂಚಲನಕ್ಕೆ ಅನುಮತಿ ಕೇಳಲಾಗಿತ್ತು. ಆದರೆ, ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆಯ ಕಾರಣದಿಂದ ಪಥಸಂಚಲನದ ದಿನಾಂಕ ಮುಂದೂಡಿಕೆಯಾಗಿ ಅ.31ರಂದು ಪೊಲೀಸ್ ಇಲಾಖೆ ಅನುಮತಿ ನೀಡಿದೆ ಎಂದು ಸ್ವಯಂ ಸೇವಕ ಸಂಘದ ಸದಸ್ಯರು ಮಾಹಿತಿ ನೀಡಿದ್ದಾರೆ.