ಸಂವಿಧಾನ ವಿರೋಧಿಸಿದ್ದ ಆರೆಎಸ್ಸೆಸ್‌: ಸಿದ್ದು

KannadaprabhaNewsNetwork |  
Published : Oct 19, 2025, 01:00 AM IST
9 | Kannada Prabha

ಸಾರಾಂಶ

ಸಂಘ ಪರಿವಾರ ಮತ್ತು ಆರ್‌ಎಸ್ಎಸ್‌ನವರು ಡಾ। ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ್ದರು. ಈಗಲೂ ವಿರೋಧಿಸುತ್ತಿದ್ದಾರೆ. ಹೀಗಾಗಿ, ಇವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಸಂಘ ಪರಿವಾರ ಮತ್ತು ಆರ್‌ಎಸ್ಎಸ್‌ನವರು ಡಾ। ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ್ದರು. ಈಗಲೂ ವಿರೋಧಿಸುತ್ತಿದ್ದಾರೆ. ಹೀಗಾಗಿ, ಇವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಮೈಸೂರು ವಿವಿಯ ಡಾ। ಬಿ.ಆರ್.ಅಂಬೇಡ್ಕರ್ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ರಜತ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಂಬೇಡ್ಕರ್ ಅವರ ಹೆಸರಲ್ಲಿ ಬಿಜೆಪಿಯವರು, ಸಂಘ ಪರಿವಾರದವರು ಅಪಪ್ರಚಾರ ಮಾಡುತ್ತಿದ್ದಾರೆ. ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಸತ್ಯ ಏನೆಂದರೆ ‘ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಮತ್ತು ಡಾಂಗೆ’ ಎಂದು ಸ್ವತಃ ಅಂಬೇಡ್ಕರ್ ಅವರೇ ತಮ್ಮದೇ ಹಸ್ತಾಕ್ಷರದಲ್ಲಿ ಬರೆದಿದ್ದಾರೆ. ಇಂತಹ ಸತ್ಯಗಳನ್ನು ಸಮಾಜದ ಮುಂದಿಟ್ಟು, ಸಂಘ ಪರಿವಾರದ ಸುಳ್ಳುಗಳನ್ನು ಬಹಿರಂಗಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ ಮೇಲೆ ಶೂ ಎಸೆದಿರುವ ಪ್ರಸಂಗ, ಸನಾತನಿಗಳು, ಪಟ್ಟಭದ್ರರು ಸಮಾಜದಲ್ಲಿ ಇನ್ನೂ ಇದ್ದಾರೆ ಎನ್ನುವುದಕ್ಕೆ ಸಾಕ್ಷಿ. ಶೂ ಎಸೆತವನ್ನು ದಲಿತರಷ್ಟೇ ಅಲ್ಲ, ಪ್ರತಿಯೊಬ್ಬರೂ ವಿರೋಧಿಸಬೇಕು. ಹೀಗಾದಾಗ ಮಾತ್ರ ಸಮಾಜ ಬದಲಾವಣೆಯ ಹಾದಿಯಲ್ಲಿದೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು ಎಂದರು.

ಜಾತಿ ವ್ಯವಸ್ಥೆ ಇರುವವರೆಗೆ ಮೀಸಲಾತಿ ಬೇಕು:

ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು. ಜಾತಿ ವ್ಯವಸ್ಥೆ ಇರುವವರೆಗೆ ಸಮಾನತೆ ಬರಲು ಸಾಧ್ಯವಿಲ್ಲ. ಬಸವಣ್ಣ ಅವರು ಜಾತಿ ವ್ಯವಸ್ಥೆ ತೊಡೆದು ಹಾಕುವಂತೆ 850 ವರ್ಷಗಳ ಹಿಂದೆಯೇ ಹೇಳಿದ್ದರು. ಆದರೆ, ಇನ್ನೂ ಸಾಧ್ಯವಾಗಿಲ್ಲ. ಅಂಬೇಡ್ಕರ್ ಅವರು ಸಹ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದ್ದರು ಎಂದು ಹೇಳಿದರು.

ಎಲ್ಲರಿಗೂ ಸಮಾನ ಅವಕಾಶಗಳು ಸಿಗದೇ ಇದ್ದುದರಿಂದ ಅಸಮಾನತೆ ಸೃಷ್ಟಿಯಾಗಿದೆ. ವಿದ್ಯೆ ಯಾರಪ್ಪನ ಮನೆ ಆಸ್ತಿ ಅಲ್ಲ. ಅವಕಾಶಗಳು ಸಿಗಬೇಕು ಅಷ್ಟೇ. ಅವಕಾಶ ಸಿಕ್ಕಾಗ ವಿದ್ವಾಂಸರಾಗುತ್ತಾರೆ, ಜ್ಞಾನಿ ಆಗುತ್ತಾರೆ. ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿದ ಮಹಾನ್ ಚೇತನ ಎಂದು ಶ್ಲಾಘಿಸಿದರು.

ನಾನು ಅಂಬೇಡ್ಕರ್ ವಾದದಲ್ಲಿ, ಬಸವಣ್ಣನವರ ತತ್ವದಲ್ಲಿ, ಗೌತಮ ಬುದ್ಧ ಅವರ ವಿಚಾರಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ನಾವು ಸ್ವಾಭಿಮಾನಿಗಳಾಗಬೇಕು. ಗುಲಾಮಗಿರಿಯನ್ನು ತೊಡೆದು ಹಾಕಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌