ಕನ್ನಡಪ್ರಭ ವಾರ್ತೆ ರಾಮನಾಥಪುರಈ ದೇಶದಲ್ಲಿ ಹುಟ್ಟಿದವರೆಲ್ಲರೂ ಹಿಂದೂಗಳು, ಶಾಂತಿ, ಶಿಸ್ತು ನಮ್ಮ ಸಂಘಟನೆಯ ಧ್ಯೇಯ. ನಮ್ಮ ನಡವಳಿಕೆ ಮೇಲ್ಪಂಕ್ತಿಯಾಗಿರಬೇಕು ಎಂಬ ಎಚ್ಚರ ಸದಾ ನಮ್ಮನ್ನು ಜಾಗೃತಿಗೊಳಿಸಲಿ ಎಂದು ಗ್ರಾಮ ವಿಕಾಸ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯರಾದ ಹೊ. ಸು. ರಮೇಶ್ ತಿಳಿಸಿದರು. ರಾಮನಾಥಪುರದ ಶ್ರೀ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಆವರಣದಿಂದ ನೂರಾರು ಕಾರ್ಯಕರ್ತರು ಗಣವೇಶ ಸಹಿತ ಪಥ ಸಂಚನದಲ್ಲಿ ಘೋಷ್, ಪೂರ್ಣಕುಂಭ, ಭಾರತ ಮಾತೆ ಭಾವಚಿತ್ರದೊಂದಿಗೆ ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಹೆಜ್ಜೆ ಹಾಕುತ್ತಾ ಶ್ರೀ ಪಟ್ಟಾಭಿರಾಮ ಗ್ರಾಮಾಂತರ ಪ್ರೌಢಶಾಲೆಯ ಆವರಣಕ್ಕೆ ಅಗಮಿಸಿದ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನೂರು ವರ್ಷ ದಾಟಿದ ಆರ್‌ಎಸ್‌ಎಸ್ ಸ್ವಯಂ ಸೇವಕ ಸಂಘ ಸ್ವಯಂ ಸೇವಕರು ಕಾರ್ಯ ನಿರ್ವಹಿಸಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೂ ಅಲ್ಲದೇ ವಿವಿಧ ಸನ್ಯಾಸಿಗಳು, ವಿವಿಧ ಮಠಾಧಿಪತಿಗಳು ಸೇರಿ ಇಂದು ಹಿಂದೂ ಸಮಾಜದ ಸಂಸ್ಕಾರ ಉಳಿಸಲು ಹತ್ತು ಹಲವಾರು ವಿಚಾರಗಳನ್ನು ನಿರ್ಣಯ ಮಾಡಿದ್ದಾರೆ ಎಂದರು.