ಹಿಂದು ಸಮಾಜ ಸಂಘಟಿಸುವುದೇ ಆರ್‌ಎಸ್‌ಎಸ್‌ ಗುರಿ: ರಾಘವೇಂದ್ರ

KannadaprabhaNewsNetwork | Published : May 11, 2025 11:48 PM
Follow Us

ಸಾರಾಂಶ

ಭಾರತದಲ್ಲಿ ಒಂದೆಡೆ ಕ್ರಿಶ್ಚಿಯನ್ನರಿಂದ ಮತಾಂತರ, ಇನ್ನೊಂದೆಡೆ ಭಯೋತ್ಪಾದನೆ ಕೃತ್ಯಗಳು ನಡೆಯುತ್ತಿವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಮ್ಮ ದೇಶ ಹಾಗೂ ಹಿಂದು ಸಮಾಜವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಹಾಗೂ ಮತಾಂತರ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ನಾವು ಮತ್ತಷ್ಟು ಸಾಮರ್ಥ್ಯ ಬೆಳೆಸಿಕೊಳ್ಳಬೇಕು

ಧಾರವಾಡ: ಸಂರ್ಪೂಣ ಹಿಂದು ಸಮಾಜವನ್ನು ಸಂಘಟಿಸುವುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಗುರಿ ಎಂದು ಆರ್​ಎಸ್​ಎಸ್​ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಹೇಳಿದರು.

ಇಲ್ಲಿಯ ಕರ್ನಾಟಕ ಕಾಲೇಜು ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಆರ್​ಎಸ್​ಎಸ್​ನ ಕರ್ನಾಟಕ ಉತ್ತರದ ಸಂಘದ ಶಿಕ್ಷಾ ವರ್ಗ ಸಮಾರೋಪದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಭಾರತದಲ್ಲಿ ಒಂದೆಡೆ ಕ್ರಿಶ್ಚಿಯನ್ನರಿಂದ ಮತಾಂತರ, ಇನ್ನೊಂದೆಡೆ ಭಯೋತ್ಪಾದನೆ ಕೃತ್ಯಗಳು ನಡೆಯುತ್ತಿವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಮ್ಮ ದೇಶ ಹಾಗೂ ಹಿಂದು ಸಮಾಜವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಹಾಗೂ ಮತಾಂತರ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ನಾವು ಮತ್ತಷ್ಟು ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಹಿಂದು ಸಮಾಜ ಸಂಘಟಿತ, ಸಮರ್ಥವಾಗಲಿ, ಪ್ರತಿ ವ್ಯಕ್ತಿಯ ಹೃದಯದಲ್ಲಿ ದೇಶ ಭಕ್ತಿಯ ಭಾವ ಜಾಗೃತವಾಗಲಿ ಎಂಬ ಕಾರಣಕ್ಕೆ ಸಂಘ ಆರಂಭಿಸಲಾಯಿತು. ಸಂಘ ಸಮಾಜದೊಳಗೆ ಒಂದು ಸಂಘಟನೆಯಾಗದೆ, ಸಂಪೂರ್ಣ ಹಿಂದು ಸಮಾಜವನ್ನು ಸಂಘಟಿಸುವ ಕೆಲಸವನ್ನು ಮಾಡಬೇಕು ಎಂಬ ಆಶಯ ಹೊಂದಲಾಗಿತ್ತು. ಅದರಂತೆಯೇ 100 ವರ್ಷಗಳ ಕಾಲ ಸಂಘ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಒಬ್ಬ ವ್ಯಕ್ತಿಯ ವಿಕಾಸಕ್ಕೆ ಬೇಕಿರುವ ಶಿಕ್ಷಣ, ಸಂಸ್ಕಾರ, ವಿಚಾರವನ್ನು ನೀಡುವ ಕೆಲಸ ಈ ಶಿಕ್ಷಾ ವರ್ಗದಲ್ಲಿ ಮಾಡಲಾಗಿದೆ. ಶರೀರ, ಬುದ್ಧಿ, ಮನಸ್ಸು ಹಾಗೂ ಆತ್ಮಕ್ಕೆ ಸಂಸ್ಕಾರ ಸಿಕ್ಕಾಗ ವ್ಯಕ್ತಿಯ ವಿಕಾಸವಾಗಲಿದೆ. ಈ ಎಲ್ಲ ಸಂಸ್ಕಾರಗಳನ್ನು ಶಿಕ್ಷಾ ವರ್ಗದಲ್ಲಿ ನೀಡಲಾಗಿದೆ ಎಂದರು.

ಪಂಚ ಪರಿವರ್ತನೆ: ಆರ್​ಎಸ್​ಎಸ್​ನ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸುವುದಿಲ್ಲ. ಆದರೆ, ಈ ಸಮಯದಲ್ಲಿ ಕಾರ್ಯ ವಿಸ್ತರಣೆಯ ಗುರಿ ಜತೆಗೆ ಪಂಚ ಪರಿವರ್ತನೆ ಕಾರ್ಯವನ್ನು ಹಮ್ಮಿಕೊಂಡಿದೆ. ಕುಟುಂಬ ವ್ಯವಸ್ಥೆ ಗಟ್ಟಿಗೊಳಿಸುವುದು, ಅಸ್ಪೃಶ್ಯತೆ ಆಚರಣೆ ಹೋಗಲಾಡಿಸುವುದು, ಪರಿಸರ ರಕ್ಷಣೆ, ಸ್ವದೇಶಿಗೆ ಆದ್ಯತೆ, ನಾಗರಿಕ ಶಿಷ್ಟಾಚಾರ ಅಳವಡಿಸಿಕೊಳ್ಳುವುದು ಹೀಗೆ 5 ಅಂಶಗಳೊಂದಿಗೆ ಕಾರ್ಯವನ್ನು ಆಯೋಜಿಸಲಾಗಿದೆ. ಸ್ವಯಂ ಸೇವಕರು ಮೊದಲು ತನ್ನ ಕುಟುಂಬದಲ್ಲಿ ಇದನ್ನು ಅಳವಡಿಸಿಕೊಂಡು ನಂತರ ಇಡೀ ಸಮಾಜದಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವುದೇ ಉದ್ಧೇಶವಾಗಿದೆ ಎಂದು ರಾಘವೇಂದ್ರ ಕಾಗವಾಡ ಹೇಳಿದರು.

ಸಮಾಜ ಸೇವಕ ಆನಂದ ಕಡಕೋಳ ಮಾತನಾಡಿದರು. ಪ್ರಾಂತ ಸಂಚಾಲಕ ಬಸವರಾಜ ಡಂಬಳ, ಧಾರವಾಡ ವಿಭಾಗ ಸಂಚಾಲಕ ಗೋವಿಂದಪ್ಪ ಗೌಡಪ್ಪಗೋಳ, ಜಿಲ್ಲಾ ಸಂಚಾಲಕ ಡಾ. ವೇದವ್ಯಾಸ ದೇಶಪಾಂಡೆ ಸೇರಿದಂತೆ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಸಂಘದ ರಾಮನಗೌಡ ಪಾಟೀಲ ಸ್ವಾಗತಿಸಿದರು. ನಿತೀಶ ಅಂಕೋಲೆಕರ ವಂದಿಸಿದರು.