ಹೂವಿನಹಡಗಲಿ: ರಾಜ್ಯದಲ್ಲಿ ನೆರೆ ಹಾವಳಿಗೆ ರೈತರು ತತ್ತರಿಸಿದ್ದು ಅವರ ಸಂಕಷ್ಟಕ್ಕೆ ಆಸರೆಯಾಗದ, ರಾಜ್ಯದ ಜನರ ಹಾದಿ ತಪ್ಪಿಸಲು ಸಚಿವ ಪ್ರಿಯಾಂಕ ಖರ್ಗೆ, ಆರ್‌ಎಸ್‌ಎಸ್ ಬ್ಯಾನ್ ಮಾಡುವಂತೆ ಸಿಎಂಗೆ ಪತ್ರ ಬರೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಶಾಸಕ ಕೃಷ್ಣ ನಾಯ್ಕ ಹೇಳಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ರೈತರಿಗೆ ಮುಷ್ಠಿಯಷ್ಟು ಕಾಳು ಕೈಗೆ ಸಿಗದೆ ಅಪಾರ ಹಾನಿ ಅನುಭವಿಸಿದ್ದಾರೆ, ಆದರೆ, ಸಚಿವರು ಅವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಪತ್ರ ಬರೆಯದೇ ಆರ್‌ಎಸ್‌ಎಸ್ ಕಾರ್ಯ ಚಟುವಟಿಕೆ ಮಾಡಲು ಸರ್ಕಾರದ ಜಾಗ ನೀಡಬಾರದು ಎಂದು ಪತ್ರ ಬರೆದಿದ್ದಾರೆ. ಈ ಸಂಘ ಪರಿವಾರವನ್ನು ಇಂದಿರಾಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿಯಿಂದಲೇ ಬ್ಯಾನ್ ಮಾಡಲು ಆಗಿಲ್ಲ, ಇಂತಹ ಕೆಲಸಕ್ಕೆ ನೀವು ಕೈ ಹಾಕಿದರೆ ದೇಶದಲ್ಲಿ ಕಾಂಗ್ರೆಸ್‌ನ್ನು ಜನರೇ ಬ್ಯಾನ್ ಮಾಡುತ್ತಾರೆಂದು ಎಚ್ಚರಿಸಿದರು.ರಸ್ತೆ ಹೊಂಡಮಯ: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಎಲ್ಲ ರಸ್ತೆಗಳು ಹೊಂಡಮಯವಾಗಿವೆ. ಜನರು ಓಡಾಡಲು ರಸ್ತೆಗಳಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ಶಾಲಾ-ಕಾಲೇಜುಗಳು ಸೋರುತ್ತಿವೆ, ಈರುಳ್ಳಿ ಬೆಳೆಗಾರರಿಗೆ ಬೆಲೆ ಸಿಗದೇ ಬೆಳೆ ನಾಶ ಮಾಡುತ್ತಿದ್ದಾರೆ, ಇಂತಹ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ಪತ್ರ ಬರೆಯುತ್ತಿಲ್ಲ. ಆದರೆ ಜನರ ಹಾದಿ ತಪ್ಪಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ದೂರಿದರು.
ಸಮ ಸಮಾಜ ನಿರ್ಮಾನವೆಂದು ಬೊಬ್ಬೆ ಹೊಡೆಯುತ್ತಿರುವ ಸಿಎಂ ಸಿದ್ದರಾಮಯ್ಯ, ಅನ್ಯ ವಿಷಯಕ್ಕೆ ಸಮಯ ಹಾಳು ಮಾಡುತ್ತಿದ್ದಾರೆ, ಇಂತಹ ಸಚಿವರಿಗೆ ಬುದ್ಧಿ ಹೇಳಬೇಕಿತ್ತು. ಅದನ್ನು ಮಾಡುತ್ತಿಲ್ಲವೆಂದು ಕಿಡಿಕಾರಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಸಂಜೀವರೆಡ್ಡಿ ಮಾತನಾಡಿ, ಆರ್‌ಎಸ್‌ಎಸ್ ಬ್ಯಾನ್ ಮಾಡುತ್ತೇನೆಂದು ಹೇಳಿದವರು ವಿಫಲವಾಗಿ ಮಣ್ಣು ಪಾಲಾಗಿದ್ದಾರೆ. ಇವರಿಗೆ ತಾಕತ್ತು ಇದ್ದರೆ ಬ್ಯಾನ್ ಮಾಡಲಿ ಎಂದು ಸಚಿವರಿಗೆ ಸವಾಲು ಹಾಕಿದರು.
ಮೊದಲು ದೇಶದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿಗತಿ ನೋಡಿಕೊಳ್ಳಿ. ದೇಶದ ಜನರೇ ಕಾಂಗ್ರೆಸ್‌ನ್ನು ಬ್ಯಾನ್ ಮಾಡುವಂತಹ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಜವಾಹರಲಾಲ್ ನೆಹರು, ಸಂಘದ ಕಾರ್ಯ ಚಟುವಟಿಕೆ ಮತ್ತು ಚೀನಾ ಯುದ್ಧದಲ್ಲಿ ಸಂಘದ ಭಾಗವಹಿಸುವಿಕೆ ನೋಡಿ, ಗಣ ರಾಜ್ಯೋತ್ಸವ ಸಂದರ್ಭದಲ್ಲಿ ಸಂಘದವರನ್ನು ಫೆರೇಡ್‌ನಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದರು. ಇಂತಹ ವಿಷಯಗಳನ್ನು ಸಚಿವ ಪ್ರಿಯಾಂಕ ಖರ್ಗೆ ಗಮನಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸಂಘ ಪರಿವಾರದ ಶಾಖೆಗಳಿದೆ ಭೇಟಿ ನೀಡಿ ಸಂಘದವರಿಗೆ ಹರಸಿ ಬಂದಿದ್ದಾರೆ. ಒಂದಿಷ್ಟು ಇತಿಹಾಸವನ್ನು ಸಚಿವರು ಅರಿತುಕೊಳ್ಳಲಿ ಎಂದು ಹೇಳಿದರು.ಸಚಿವರ ಈ ಪತ್ರದಿಂದ ಕಾಂಗ್ರೆಸ್ ಸರ್ಕಾರದಲ್ಲಿ ತಮ್ಮ ಸಚಿವ ಸ್ಥಾನ ಗಟ್ಟಿ ಮಾಡಿಕೊಳ್ಳುವುದು ಮತ್ತು ಹೈ ಕಮಾಂಡ್ ಮೆಚ್ಚಿಸಲು ಹೋಗಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್‌ಗೆ ಕರ್ನಾಟಕ ಸರ್ಕಾರವೇ ಎಟಿಎಂ ಆಗಿದೆ. ಜನರಿಗೆ ನೀಡಿದ ಗ್ಯಾರಂಟಿಗಳನ್ನು ಮೊದಲು ಸರಿಯಾಗಿ ಮುಟ್ಟಿಸಿ ಎಂದರು.
ಈ ವೇಳೆ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಈಟಿ ಲಿಂಗರಾಜ, ಎಚ್.ಪೂಜೆಪ್ಪ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಜೈನ್, ಆರ್.ಟಿ.ನಾಗರಾಜ ಉಪಸ್ಥಿತರಿದ್ದರು.18ರಂದು ಪಥಸಂಚಲನರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅ. 18ರಂದು ಪಟ್ಟಣದಲ್ಲಿ ಗಣವೇಷಧಾರಿಗಳ ಪಥ ಸಂಚಲನ ನಡೆಯಲಿದೆ. ತಾಲೂಕು ಕ್ರೀಡಾಂಗಣದಿಂದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಮರಳಿ ಕ್ರೀಡಾಂಗಣಕ್ಕೆ ಬಂದು ಕಾರ್ಯಕ್ರಮ ಜರುಗಲಿದೆ. ಆದರಿಂದ ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶಾಸಕ ಕೃಷ್ಣನಾಯ್ಕ ಮನವಿ ಮಾಡಿದರು.