ಆರೆಸ್ಸೆಸ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ದಿನವೂ ಪಾಲ್ಗೊಳ್ಳದೆ ಬ್ರಿಟಿಷರ ಎಲ್ಲ ನಿಯಮಗಳಿಗೆ ಶರಣಾಗಿತ್ತು ಎನ್ನುವುದು ಬ್ರಿಟಿಷ್ ಸರ್ಕಾರದ ಸಿಐಡಿ ವರದಿಯಲ್ಲಿ ದಾಖಲಾಗಿದೆದ್ ಎಂದು ಕೆಪಿಸಿಸಿ ವಕ್ತಾರ ಎಂ.ಜಿ. ಹೆಗಡೆ ಹೇಳಿದ್ದಾರೆ.
ಮಂಗಳೂರು: ಕಾಂಗ್ರೆಸ್‌ನ್ನು ದೇಶದ್ರೋಹಿ ಎಂದು ಸುಳ್ಳು ಹೇಳುವ ಆರೆಸ್ಸೆಸ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ದಿನವೂ ಪಾಲ್ಗೊಳ್ಳದೆ ಬ್ರಿಟಿಷರ ಎಲ್ಲ ನಿಯಮಗಳಿಗೆ ಶರಣಾಗಿತ್ತು ಎನ್ನುವುದು ಬ್ರಿಟಿಷ್ ಸರ್ಕಾರದ ಸಿಐಡಿ ವರದಿಯಲ್ಲಿ ದಾಖಲಾಗಿದೆ. ನಿಜವಾದ ದೇಶದ್ರೋಹಿಗಳು ಯಾರು ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಎಂ.ಜಿ. ಹೆಗಡೆ ಪ್ರಶ್ನಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1942ರಲ್ಲಿ ಅಂದಿನ ಬಾಂಬೆ ಸರ್ಕಾರದ ಹೋಮ್ ಡಿಪಾರ್ಟ್‌ಮೆಂಟ್‌ನ ಸಿಐಡಿ ರಹಸ್ಯ ವರದಿಯನ್ನು ಪ್ರಸ್ತುತಪಡಿಸಿದರು.
ದೇಶದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಆರೆಸ್ಸೆಸ್ ಇದಕ್ಕೂ ತನಗೂ ಸಂಬಂಧವೇ ಇಲ್ಲದಂತೆ ತನ್ನ ಪಾಡಿಗೆ ಶಾಖೆ, ಕಾರ್ಯಕ್ರಮಗಳನ್ನು ಮಾಡಿಕೊಂಡು ಬ್ರಿಟಿಷರ ಎಲ್ಲ ಕಾನೂನುಗಳಿಗೆ ಸಂಪೂರ್ಣ ಶರಣಾಗಿತ್ತು ಎನ್ನುವ ಸಂಗತಿಯನ್ನು 90 ಪುಟಗಳ ಸಿಐಡಿ ರಹಸ್ಯ ವರದಿಯಲ್ಲಿ ವಿವರಿಸಲಾಗಿದೆ. ಸಿಐಡಿ ವರದಿ ನೋಡಿದರೆ ಆರೆಸ್ಸೆಸ್‌ನವರು ಬ್ರಿಟಿಷರಿಗೆ ಕನಿಷ್ಠ ಧಿಕ್ಕಾರ ಕೂಗಿದ್ದಾಗಲೀ, ಒಂದೇ ಒಂದು ದಿನ ಹೋರಾಟ ಮಾಡಿದ ವಿಷಯವೇ ಇಲ್ಲ ಎಂದು ಎಂ.ಜಿ. ಹೆಗಡೆ ಹೇಳಿದರು.ಆರಂಭಿಕ ಕಾಲಘಟ್ಟದಲ್ಲಿ ಆರೆಸ್ಸೆಸ್ ಖಾಕಿ ಸಮವಸ್ತ್ರ ಧರಿಸುತ್ತಿತ್ತು. 1940ರಲ್ಲಿ ಬ್ರಿಟಿಷ್ ಸರ್ಕಾರವು ಯಾವುದೇ ಸಂಘಟನೆಗಳು ಪ್ಯಾರಾ ಮಿಲಿಟರಿ ಸಮವಸ್ತ್ರ ಬಳಕೆ, ಮಿಲಿಟರಿ ಕವಾಯತು ಮಾಡುವುದನ್ನು ನಿರ್ಬಂಧಿಸಿತ್ತು. ಆ ರೀತಿಯ ಕವಾಯತು ಮಾಡಲು ಲೈಸನ್ಸ್ ಪಡೆಯಬೇಕು ಎಂಬ ಆದೇಶ ಮಾಡಿತ್ತು. ಆಗ ಆರೆಸ್ಸೆಸ್ ಸರಸಂಘಚಾಲಕ ಎಂ.ಎಸ್. ಗೋಳ್ವಾಲ್ಕರ್, ಬ್ರಿಟಿಷ್ ಸರ್ಕಾರದ ಆದೇಶವನ್ನು ಚಾಚೂ ತಪ್ಪದೆ ಪಾಲನೆ ಮಾಡುವುದಾಗಿ ಬರೆದುಕೊಟ್ಟಿದ್ದರು. ಪರದೇಶಿ ಬ್ರಿಟಿಷ್ ಸರ್ಕಾರದ ಕಾನೂನು ಪಾಲನೆ ಮಾಡಿದವರು ಈಗ ನಮ್ಮದೇ ದೇಶದ ಕಾನೂನು ಪಾಲನೆ ಮಾಡಲು ಹೇಳಿದರೆ ವಿರೋಧಿಸುವುದು ದೇಶಪ್ರೇಮವಾ ಎಂದು ಆಕ್ಷೇಪಿಸಿದರು.ವಿದೇಶಗಳಲ್ಲಿ ನೋಂದಣಿ, ಇಲ್ಲೇಕಿಲ್ಲ?: ಕೆನಡಾ, ಇಂಗ್ಲೆಂಡ್, ಆಸ್ಪ್ರೇಲಿಯಾ ಸೇರಿದಂತೆ 70 ದೇಶಗಳಲ್ಲಿ ನೋಂದಣಿ ಮಾಡಿಕೊಂಡಿರುವ ಆರೆಸ್ಸೆಸ್ ಭಾರತದಲ್ಲೇಕೆ ಇದುವರೆಗೂ ನೋಂದಣಿ ಮಾಡಿಲ್ಲ? ಐಟಿ ಕಾಯ್ದೆ ಪ್ರಕಾರ ಆರೆಸ್ಸೆಸ್ ತನ್ನ ಗುರುದಕ್ಷಿಣೆಯನ್ನು ಏಕೆ ಘೋಷಿಸುತ್ತಿಲ್ಲ? ವಿದೇಶಗಳಲ್ಲಿ ಕಾನೂನು ಪಾಲನೆ ಮಾಡೋರು ಇಲ್ಲಿನ ಕಾನೂನು ಏಕೆ ಒಪ್ಪಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಸಾಲ್ಯಾನ್, ಅಪ್ಪಿ, ಮಂಜುಳಾ ನಾಯಕ್, ಶಶಿಕಲಾ ಪದ್ಮನಾಭ, ಉದಯ ಆಚಾರ್, ಸಜೀತ್ ಶೆಟ್ಟಿ, ರವಿ ಪೂಜಾರಿ, ಮಿಥುನ್ ಕುಮಾರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.