ಧಾರವಾಡ:
ರಾಜ್ಯದಲ್ಲಿ 40 ಸಾವಿರ ಆರ್‌ಟಿಐ ಅರ್ಜಿ ಬಾಕಿಯಿದ್ದರೆ, ಜಿಲ್ಲೆಯಲ್ಲಿ 1623 ಅರ್ಜಿಗಳಿವೆ. ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಶೀಘ್ರದಲ್ಲೇ ವಿಲೇವಾರಿ ಮಾಡಬೇಕೆಂದು ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಅಶಿತ್ ಮೋಹನ್ ಪ್ರಸಾದ್ ತಿಳಿಸಿದರು. ಜಿಲ್ಲಾಡಳಿತ ಹಾಗೂ ಜಿಪಂ ಜಂಟಿಯಾಗಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಅಧಿನಿಯಮದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಅಧ್ಯಯನ ಮತ್ತು ಸಾಮಾನ್ಯ ತಿಳಿವಳಿಕೆ ಇರಬೇಕು. ಮಾಹಿತಿ ಬಯಸಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಕಾಯ್ದೆಯಲ್ಲಿ ಲಭ್ಯವಿರುವ ಸೆಕ್ಷನ್‌ಗಳ ಆಧಾರದ ಮೇಲೆ ಉತ್ತರ ಮತ್ತು ಮಾಹಿತಿ ಒದಗಿಸಬೇಕು. 10 ವರ್ಷದಲ್ಲಿ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಮಾಹಿತಿ ನೀಡುವಲ್ಲಿ ವಿಳಂಬ, ಸರಿಯಾದ ಮಾಹಿತಿ ನೀಡದಿರುವುದು ಮತ್ತು ಇತರ ಕಾರಣಗಳಿಂದಾಗಿ ₹ 10ಕೋಟಿ ಅಷ್ಟು ದಂಡವು ಸರ್ಕಾರಿ ಅಧಿಕಾರಿಗಳಿಂದ ಆಯೋಗಕ್ಕೆ ಜಮೆಯಾಗಿದೆ. ಆದ್ದರಿಂದ ಮಾಹಿತಿ ಅಧಿಕಾರಿಗಳು ಸಲ್ಲಿಕೆ ಆಗುವ ಅರ್ಜಿಗಳಿಗೆ ಕಾಯ್ದೆಯನ್ವಯ ಉತ್ತರ ಒದಗಿಸಬೇಕೆಂದರು.
ಆರ್‌ಟಿಐ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು 30 ದಿನಗಳಲ್ಲಿ ವಿಲೇವಾರಿ ಮಾಡಬೇಕು. ಕಡತಗಳಲ್ಲಿನ ಫೈಲ್ ನೋಟ್ ನೀಡಬಹುದು. ನೋಟ್ ಮಾಡಿದ ಅಧಿಕಾರಿಯ ಹೆಸರು, ಗುರುತು ಗೌಪ್ಯವಾಗಿರಬೇಕು. ಸರ್ಕಾರಿ ಇಲಾಖೆಗಳ ವೆಬ್‌ಸೈಟ್‌ನಿಂದ ಪಡೆಯುವ ಮಾಹಿತಿಗೆ ದೃಢೀಕರಣದ ಅಗತ್ಯವಿಲ್ಲ. ಸರ್ಕಾರಿ ಯೋಜನೆ, ಕಾಮಗಾರಿಗಳ ಕುರಿತು ಸಲ್ಲಿಕೆಯಾಗುವ ಅರ್ಜಿಗಳಿಗೆ ಆಯಾ ವೆಬ್‌ಸೈಟ್‌ಗಳಿಂದ ಮಾಹಿತಿ ಪಡೆಯಬಹುದು ಎಂದು ಉತ್ತರಿಸಬಹುದು ಎಂದರು.ಯಾವುದೇ ವ್ಯಕ್ತಿ ಸರ್ಕಾರದ ಉದ್ಯೋಗ, ಸೌಲಭ್ಯಗಳ ಬಗ್ಗೆ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದಲ್ಲಿ ಮಾಹಿತಿ ನೀಡಬೇಕಾಗುತ್ತದೆ. ಅಧಿಕಾರಿಯ ಹೆಸರು ಮತ್ತು ಹುದ್ದೆ ಸಾರ್ವಜನಿಕ ದಾಖಲೆಯಾಗಿರುವುದರಿಂದ ಅವುಗಳನ್ನು ಸಹ ನೀಡಬೇಕಾಗುತ್ತದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಪ್ರತಿ 6 ತಿಂಗಳಿಗೊಮ್ಮೆ ಆರ್‌ಟಿಐ ಕಾಯ್ದೆಯ ಕುರಿತು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ, ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು. ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಲ್ಲಿ ಯಾವುದೇ ರೀತಿ ವಿಳಂಬ ಮಾಡದೆ ಸರಿಯಾದ ಸಮಯಕ್ಕೆ ಮಾಹಿತಿ ಸಲ್ಲಿಸಬೇಕು ಎಂದು ಹೇಳಿದರು.
ಈ ವೇಳೆ ಜಿಪಂ ಸಿಇಒ ಭುವನೇಶ ಪಾಟೀಲ, ಎಸ್ಪಿ ಗುಂಜನ್ ಆರ್ಯ, ಉಪ ಪೊಲೀಸ್ ಆಯುಕ್ತ ಮಹಾನಿಂಗ್ ನಂದಗಾಂವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಉಪಸ್ಥಿತರಿದ್ದರು.